ಮಹಾಗಣಪತಿ ಮೂರ್ತಿ ವಿಸರ್ಜನೆ

ಹಾಸನ: ನಗರದ ಗಣಪತಿ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪರಿಸರ ಸ್ನೇಹಿ ಮಹಾಗಣಪತಿ ಮೂರ್ತಿ ವಿಸರ್ಜನೆಯು ಶನಿವಾರ ವೈಭವದಿಂದ ಜರುಗಿತು.

ಪ್ರತಿ ವರ್ಷ ಮಹಾಗಣಪತಿ ಮೂರ್ತಿ ವಿಸರ್ಜನೆ ಎಂದರೆ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಆದರೆ ಈ ಬಾರಿ ಕೊಡಗು ಹಾಗೂ ಸಕಲೇಶಪುರ ಭಾಗದಲ್ಲಿ ಅತಿವೃಷ್ಟಿಯಿಂದ ಭಾರಿ ಅನಾಹುತ ಸಂಭವಿಸಿರುವ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ನೆರವಾಗುವ ಉದ್ದೇಶದಿಂದ ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳು ದೇಣಿಗೆ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿರುವುದರಿಂದ ಗಣಪತಿಗೆ ಸರಳ ಬೀಳ್ಕೊಡುಗೆ ನೀಡಲಾಯಿತು.

ಹೂವಿನಿಂದ ಅಲಂಕೃತಗೊಂಡ ವಿಶೇಷ ರಥದಲ್ಲಿ ಗಣೇಶನ ಮೆರವಣಿಗೆ ನಗರದ ಪ್ರಮುಖ ರಸ್ತೆಯಲ್ಲಿ ನಡೆದು ಸಂಜೆ 7 ಗಂಟೆಗೆ ದೇವಿಗೆರೆಯಲ್ಲಿ ವಿಸರ್ಜಿಸಲಾಯಿತು.

64ನೇ ಗಣೇಶೋತ್ಸವಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್‌ಗೌಡ ಚಾಲನೆ ನೀಡಿದರು. ಹೂವಿನಿಂದ ಅಲಂಕೃತಗೊಂಡ ರಥದಲ್ಲಿ ಗಣೇಶ ಹಾಗೂ ಗೌರಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ನಂದಿ ಧ್ವಜ, ಜೋಡಿ ಎತ್ತು, ಚಿಟ್ಟಿಮೇಳ, ಸ್ಯಾಕ್ಸೋನ್ ಮುಂತಾದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು.
ನಗರದ ರಾಜಬೀದಿಗಳಲ್ಲಿ ಗಣಪತಿ ಉತ್ಸವದ ಮೆರವಣಿಗೆ ತೆರಳುವ ವೇಳೆ ಭಕ್ತಾದಿಗಳು ದಾರಿಯುದ್ದಕ್ಕೂ ಪೂಜೆ ಸಲ್ಲಿಸಿ ಈಡುಗಾಯಿ ಒಡೆಯುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಯನ್ನು ಈಡೇರಿಸು ಎಂದು ಸಿದ್ಧಿ ವಿನಾಯಕನಲ್ಲಿ ಪ್ರಾರ್ಥಿಸಿದರು. ಗಣಪತಿ ವಿಸರ್ಜನೆ ಅಂಗವಾಗಿ ನಡೆದ ಮೆರವಣಿಗೆ ಸಂದರ್ಭದಲ್ಲಿ ಮಹಿಳೆಯರು ಹಾಗೂ ಯುವತಿಯರು ತಮ್ಮ ಮನೆಗಳ ಮುಂದೆ ನೀರು ಹಾಕಿ ರಂಗೋಲಿ ಬಿಟ್ಟು ಸಿಂಗರಿಸಿದ್ದರಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಅದೇ ರೀತಿ ಶಾಲಾ-ಕಾಲೇಜುಗಳ ವಿದ್ಯಾರ್ಥಿ ಹಾಗೂ ಯುವಕರು ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯು ಗಣಪತಿ ಪೆಂಡಾಲ್‌ನಿಂದ ಎನ್‌ಆರ್ ವೃತ್ತ, ಹಳೆ ಶಾಂತಿ ಸ್ಟೋರ್, ಹಾಸನಾಂಬ ದೇವಾಲಯ ವೃತ್ತ ತಲುಪಿತು. ಅಲ್ಲಿಂದ ಸಂತೆಪೇಟೆ ವೃತ್ತಕ್ಕೆ ಹೊರಟು ವಿವಿಧ ಬೀದಿಗಳಲ್ಲಿ ಸಂಚರಿಸಿತು. ಸಾರ್ವಜನಿಕರಿಗೆ ಅನ್ನಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ಬಿಗಿ ಭದ್ರತೆ: ಮಹಾಗಣಪತಿ ವಿಸರ್ಜನೆ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಹಮ್ಮಿ ಕೊಂಡಿದ್ದ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಪೇದೆ ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಪೊಲೀಸರ ಜತೆ ಸ್ವಯಂ ಸೇವಕರು, ಹೋಂ ಗಾರ್ಡ್ಸ್‌ಗಳು ಭದ್ರತಾ ಕಾರ್ಯನಿರ್ವಹಿಸಿದರು. ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಡಾ. ನಾಗರಾಜ್, ಉಪಾಧ್ಯಕ್ಷ ಎಚ್.ಎಲ್. ಕಸ್ತೂರಿ ರಂಗಾಚಾರ್, ಕಾರ್ಯದರ್ಶಿ ಚನ್ನವೀರಪ್ಪ, ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಸದಸ್ಯ ಕಮಲ್‌ಕುಮಾರ್ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *