ಮಕ್ಕಳ ಕಷ್ಟ ನಿವಾರಿಸುವ ಮಹದೇಶ್ವರ

ಚಿಕ್ಕಮಾಳಿಗೆ ಕೊಳ್ಳೇಗಾಲ
ಪಟ್ಟಣದ ದೇವಾಂಗ ಬೀದಿಯಲ್ಲಿರುವ ಮಕ್ಕಳ ಮಹದೇಶ್ವರ ದೇವಸ್ಥಾನವು ಮಕ್ಕಳ ಕಷ್ಟಗಳನ್ನು ನಿವಾರಿಸುವ ಪ್ರಮುಖ ಕೇಂದ್ರವಾಗಿದ್ದು ಇಲ್ಲಿನ ಮಹದೇಶ್ವರ ಮಕ್ಕಳ ಪಾಲಿನ ಆರಾಧ್ಯದೈವವಾಗಿದ್ದಾನೆ.
ಸಾಮಾನ್ಯವಾಗಿ ವಯಸ್ಕರಿಗೆ ಯಾವುದೇ ರೀತಿಯ ಅನಾರೋಗ್ಯ ಉಂಟಾದರೂ ಮತ್ತೊಬ್ಬರ ಬಳಿ ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಾರೆ. ಇದು ವೈದ್ಯರಿಗೂ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಆದರೆ, ಸಣ್ಣ ಮಕ್ಕಳು ಅನಾರೋಗ್ಯಕ್ಕೀಡಾದರೆ ಅವರಿಗೆ ಸಮಸ್ಯೆಯನ್ನು ವಿವರಿಸಲು ಗೊತ್ತಾಗುವುದಿಲ್ಲ. ಪರಿಣಾಮವಾಗಿ ನೋವು ಅನುಭವಿಸುತ್ತಾರೆ. ಇಂತಹ ಮಕ್ಕಳ ಕಷ್ಟಗಳನ್ನು ಪರಿಹರಿಸಲೆಂದೇ ಮಕ್ಕಳ ಮಹದೇಶ್ವರ ದೇಗುಲವಿದೆ.
ಇಲ್ಲಿನ ದೇವಸ್ಥಾನ ಚಿಕ್ಕದಾದರೂ ಬಹಳ ವಿಶೇಷ ಮತ್ತು ಚಮತ್ಕಾರಿಕವಾಗಿದೆ. ತಾಲೂಕಿನ ಜನರಲ್ಲದೆ, ಹೊರಗಿನ ಜಿಲ್ಲೆಯ ನೂರಾರು ತಾಯಂದಿರು ಇಲ್ಲಿಗೆ ಬಂದು ತಮ್ಮ ಮಕ್ಕಳ ಹೆಸರಿನಲ್ಲಿ ಪೂಜೆ ಮಾಡಿಸಿ ತಾಯತ ಕಟ್ಟಿಸಿ ಮಕ್ಕಳ ಕಷ್ಟ ಕಾಯೋ ಮಹದೇಶ್ವರ ಎಂದು ಬೇಡುತ್ತಾರೆ. ಗುರುವಾರ, ಭಾನುವಾರ ಮತ್ತು ಮಂಗಳವಾರಕ್ಕೆ ಸೀಮಿತವಾಗಿದ್ದ ತಾಯತ ಕಟ್ಟಿ ಮಾಡುತ್ತಿದ್ದ ವಿಶೇಷ ಪೂಜೆ ಇದೀಗ ವಾರದ 7 ದಿನವೂ ನಡೆಯುತ್ತಿದೆ.

ತಾಯತ ಕಟ್ಟಿಸಿದ ಕೆಲವೇ ದಿನದಲ್ಲಿ ಮಕ್ಕಳಿಗೆ ತಗುಲಿದ್ದ ಜ್ವರ, ಬಾಲಗ್ರಹ, ದೃಷ್ಟಿದೋಷ, ಚಂಡಿ ಹಿಡಿತ, ಹಠ ಸ್ವಭಾವ, ನಿದ್ರೆಯಲ್ಲಿ ಹಲ್ಲು ಕಡಿಯುವುದು, ವಾಂತಿಭೇದಿ, ಚೆಚ್ಚುವಿಕೆ, ಆಹಾರ ಸೇವನೆ ನಿರಾಕರಣೆ ಸೇರಿದಂತೆ ಹಲವು ಸಂಕಷ್ಟಗಳು ದೂರವಾಗಿರುವ ನಿದರ್ಶನಗಳಿವೆ. ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ, ಮಕ್ಕಳ ತಜ್ಞರು ಸಹ ತಮ್ಮ ಮಕ್ಕಳಿಗೆ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಮಕ್ಕಳ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಮೊರೆ ಹೋಗಿರುವುದನ್ನು ಸ್ವತಃ ವೈದ್ಯರೇ ಒಪ್ಪಿಕೊಳ್ಳುತ್ತಾರೆ.

ಮಕ್ಕಳ ಮಹದೇಶ್ವರ ಉದ್ಭವ: ಮಲೆಗಳಲ್ಲಿ ವಾಸಿಸುತ್ತಿದ್ದ ಎಂಬ ಕಾರಣಕ್ಕೆ ಮಹದೇಶ್ವರನನ್ನು ಮಲೆಮಹದೇಶ್ವರ ಎನ್ನಲಾಯಿತು. ಅಂತೆಯೇ, ಮಕ್ಕಳ ಸಂಕಷ್ಟ ಪರಿಹರಿಸುವುದರಿಂದ ಈ ದೇವರನ್ನು ಮಕ್ಕಳ ಮಹದೇಶ್ವರ ಎಂದು ಗುರುತಿಸಿ ಕೊಂಡಾಡುತ್ತಾರೆ. ಸುತ್ತೂರು, ಕುಂತೂರು ಮಠಗಳನ್ನು ತೊರೆದು ಮಲೆ ಮಹದೇಶ್ವರಬೆಟ್ಟಕ್ಕೆ ಲೋಕ ಕಲ್ಯಾಣಕ್ಕಾಗಿ ತೆರಳುವ ಮಾರ್ಗ ಮಧ್ಯ ಮಹದೇಶ್ವರ ಆಯಾಸಗೊಂಡು ಮರದ ನೆರಳೊಂದರಲ್ಲಿ ವಿಶ್ರಾಂತಿ ಪಡೆಯುತ್ತಾರೆ.

ಈ ವೇಳೆ ಕೂಗಳತೆ ದೂರದಲ್ಲಿ ಮಕ್ಕಳ ಗದ್ದಲ, ಗಲಾಟೆಗಳನ್ನು ಕೇಳಿ ನಿದ್ರಾಭಂಗವಾಗುತ್ತದೆ. ಇದರಿಂದ ಮಹದೇಶ್ವರ ಕೋಪಗೊಳ್ಳುತ್ತಾರಾದರೂ ದಿವ್ಯಶಕ್ತಿಯಿಂದ ನೋಡಿದಾಗ ಮುಗ್ಧತೆಯ ಹಸನ್ಮುಖಿಯಾಗಿರಬೇಕಾದ ಮಕ್ಕಳಲ್ಲಿ ಸಂಕಷ್ಟ ಮನೆ ಮಾಡಿದ್ದನ್ನು ಗಮನಿಸುತ್ತಾರೆ.
ಆ ಬಳಿಕ ಅವರು, ನನಗೆ ವಿಶ್ರಾಂತಿ ನೀಡಿದ ಈ ಸ್ಥಳ ಮುಂದೆ ಮಕ್ಕಳ ಸಂಕಷ್ಟ ಪರಿಹರಿಸುವ ಸ್ಥಳವಾಗಲಿ ಎಂದು ವರ ನೀಡಿ ಮುಂದೆ ಸಾಗಿದರು. ಕೆಲ ದಿನಗಳ ನಂತರ ಮಹದೇಶ್ವರ ವಿಶ್ರಾಂತಿ ಪಡೆದ ಸ್ಥಳದಲ್ಲಿ ಲಿಂಗವೊಂದು ಉದ್ಭವಿಸಿ ಎಲ್ಲರ ಗಮನ ಸೆಳೆಯಿತು. ಇದಕ್ಕೊಂದು ಗುಡಿ ಕಟ್ಟಿಸಿದ ಬೋಡಯ್ಯಸ್ವಾಮಿ ನಿತ್ಯ ಪೂಜಾ ಕೈಂಕರ್ಯಗಳನ್ನು ಆರಂಭಿಸಿದರು.

ಕ್ರಮೇಣ, ಅವರ ಪುತ್ರ ಪೂಲಾ ಕುಮಾರಸ್ವಾಮಿ, ಮೊಮ್ಮಗ ಕುಮಾರಸ್ವಾಮಿ ಸೇರಿದಂತೆ ಕುಟುಂಬಸ್ಥ ರಮೇಶ್ ಮುರಾರಿ ಅವರು ಪೂಜೆ ನಡೆಸುತ್ತಿದ್ದಾರೆ. ಪಟ್ಟಣದ ಹೃದಯಭಾಗದಲ್ಲಿರುವ ಈ ದೇಗುಲ ಚಿಕ್ಕದಾದರೂ ಚೊಕ್ಕವಾಗಿದ್ದು, ಯಾವುದೇ ಆಡಂಬರವಿಲ್ಲದೆ ಮೌನವಾಗಿ ಮಕ್ಕಳ ಸಂಕಷ್ಟವನ್ನು ಪರಿಹರಿಸಿ ಸಲಹುತ್ತಿದೆ.

ದೇವಸ್ಥಾನದ ವಿಶೇಷ: ದೇವಸ್ಥಾನದ ಗರ್ಭಗುಡಿಯಲ್ಲಿ ಎರಡೂವರೆ ಅಡಿ ಎತ್ತರದ ಉದ್ಭವ ಲಿಂಗವಿದ್ದು, ಎದುರುಗಡೆ ಒಂದೂವರೆ ಅಡಿಯ ಧ್ಯಾನ ನಂದಿಯಿದೆ. ಪ್ರಾಂಗಣದಲ್ಲಿ ವಿಘ್ನೇಶ್ವರ, ಷಣ್ಮುಖಸ್ವಾಮಿ ವಿಗ್ರಹಗಳಿವೆ. ದೇಗುಲದ ಹೊರಗೆ ಇದೇ ಅಳತೆಯಲ್ಲಿ ಭೋಗ ನಂದಿ ಮತ್ತು ಮಹಾನಂದಿಯಿದೆ. ಇಲ್ಲಿ ನಿತ್ಯ ಪೂಜೆ ನಡೆಯುತ್ತಿದ್ದು, ಮಹಾಶಿವರಾತ್ರಿಯ ಮಾರನೇ ದಿನ ಜಾತ್ರೆ ಮತ್ತು ಮಕ್ಕಳಿಂದ ಹಾಲರವೆ ಉತ್ಸವ ನಡೆಯುತ್ತದೆ. ನವರಾತ್ರಿಯಲ್ಲಿ 10 ದಿನ ವಿಶೇಷ ಪೂಜೆಗಳು ನಡೆಯುತ್ತವೆ.

ಮಕ್ಕಳ ಸಂಕಷ್ಟಕ್ಕಾಗಿ ಪರಿಹಾರಕ್ಕೆಂದೇ ಪಟ್ಟಣದಲ್ಲಿ ಮಕ್ಕಳ ಮಹದೇಶ್ವರ ದೇವಸ್ಥಾನವನ್ನು ಹಲವು ಶತಮಾನಗಳ ಹಿಂದೆ ನಿರ್ಮಿಸಲಾಗಿದೆ. ದೇಗುಲಕ್ಕೆ ಮಹದೇಶ್ವರ ನೆಲೆಸಿದ ಇತಿಹಾಸವಿದೆ. ಇಲ್ಲಿ ನಿತ್ಯ ಮಕ್ಕಳ ಸಮಸ್ಯೆ ಪರಿಹಾರಕ್ಕೆ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ಕುಮಾರಸ್ವಾಮಿ, ಪ್ರಧಾನ ಅರ್ಚಕರು, ಮಕ್ಕಳ ಮಹದೇಶ್ವರಸ್ವಾಮಿ ದೇಗುಲ

Leave a Reply

Your email address will not be published. Required fields are marked *