ಮೂಲಸೌಕರ್ಯ ವಂಚಿತ ಮಹದೇಶ್ವರ ಬಡಾವಣೆ

ಎಂ.ಬಸವರಾಜು ಚಾಮರಾಜನಗರ
ನಗರಸಭೆಯ 20ನೇ ವಾರ್ಡ್ ವ್ಯಾಪ್ತಿಗೆ ಬರುವ ಮಹದೇಶ್ವರ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಅಭಿವೃದ್ಧಿ ಕುಂಠಿತಗೊಂಡಿದ್ದು, ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.
ಬಡಾವಣೆಯಲ್ಲಿ ಉಪ್ಪಾರ, ನಾಯಕ ಹಾಗೂ ಮುಸ್ಲಿಂ ಜನಾಂಗದ 300ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಬಡಾವಣೆಯಲ್ಲಿ ಪ್ರಮುಖವಾಗಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಇತರೆ ಮೂಲ ಸೌಕರ್ಯಗಳ ಕೊರತೆ ಇದ್ದು, ಸಂಬಂಧಪಟ್ಟ ನಗರಸಭೆಯ ಅಧಿಕಾರಿಗಳ ನಿರ್ಲಕ್ಷೃದಿಂದ ಬಡಾವಣೆಯು ಅಭಿವೃದ್ಧಿಯಲ್ಲಿ ಹಿಂದುಳಿದಿದೆ.

ರಸ್ತೆಗಳಿಲ್ಲ:ನಗರಸಭೆ ವ್ಯಾಪ್ತಿಗೆ ಬರುವ ಮಹದೇಶ್ವರ ಬಡಾವಣೆಯಲ್ಲಿ ರಸ್ತೆಗಳಿಲ್ಲ. ಇಲ್ಲಿರುವ 4 ರಸ್ತೆಗಳು ಮಣ್ಣಿನ ರಸ್ತೆಗಳಾಗಿದ್ದು, ನಿವಾಸಿಗಳಿಗೆ ಸಿಸಿ ರಸ್ತೆಗಳ ಕನಸು ಕನಸಾಗಿಯೇ ಉಳಿದಿದೆ. ಜತೆಗೆ ಬಡಾವಣೆಯಲ್ಲಿ ಚರಂಡಿಗಳಿಲ್ಲದ ಕಾರಣ ಮನೆಗಳಲ್ಲಿ ಉಪಯೋಗಿಸಿದ ನೀರು ರಸ್ತೆಯಲ್ಲಿಯೇ ಹರಿಯುತ್ತದೆ.
ಮಳೆಗಾಲದಲ್ಲಂತೂ ಇಲ್ಲಿನ ರಸ್ತೆಗಳು ಕೆಸರುಮಯವಾಗಿ ರೂಪುಗೊಂಡು ನಿವಾಸಿಗಳು ಓಡಾಲು ಆಗದ ಸ್ಥಿತಿಗೆ ತಲುಪುತ್ತವೆ. ಹಳ್ಳಕೊಳ್ಳಗಳಿಂದ ಕೂಡಿರುವ ಇಲ್ಲಿನ ರಸ್ತೆಗಳಿಂದ ವಾಹನ ಸವಾರರಿಗೆ ಅನನುಕೂಲವಾಗಿವೆ. ನಗರದ ಅಭಿವೃದ್ಧಿಗೆ ಕೋಟ್ಯಂತರ ರೂ.ಗಳನ್ನು ವ್ಯಯಿಸುವ ಇಲ್ಲಿನ ನಗರಸಭೆಯು ಬಡಾವಣೆಯ ಅಭಿವೃದ್ಧಿಗೆ ಮುಂದಾಗದಿರುವುದು ದುರಂತ.

ಹೂಳು ತುಂಬಿದ ಚರಂಡಿಗಳು: ಬಡಾವಣೆಯಲ್ಲಿರುವ ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತು ಅನೈರ್ಮಲ್ಯವನ್ನು ಉಂಟುಮಾಡುತ್ತಿದೆ. ಉಳಿದಂತೆ ಬಡಾವಣೆಯ ಕೆಲವು ಕಡೆಗಳಲ್ಲಿ ಚರಂಡಿಗಳೇ ಇಲ್ಲ. ಇದರಿಂದ ಮನೆಗಳಲ್ಲಿ ಉಪಯೋಗಿಸಿದ ನೀರು ರಸ್ತೆ ಸೇರಿ ಕೆಸರಾಗುತ್ತದೆ. ಇಲ್ಲಿನ ಚರಂಡಿಗಳು ಅನೈರ್ಮಲ್ಯದಿಂದ ಕೂಡಿರುವುದರಿಂದ ರೋಗ ಭೀತಿಯು ಇಲ್ಲಿನ ನಿವಾಸಿಗಳಿಗೆ ಕಾಡುತ್ತಿದೆ.

ಬಡಾವಣೆಗಿಲ್ಲ ಕಾವೇರಿ ನೀರಿನ ಪೂರೈಕೆ: ನಗರದ ವಿವಿಧ ವಾರ್ಡ್‌ಗಳು ಹಾಗೂ ಬಡಾವಣೆಗಳಿಗೆ ಕಾವೇರಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ ನಗರಸಭೆ ವ್ಯಾಪ್ತಿಯಲ್ಲಿಯೇ ಇರುವ ಮಹದೇಶ್ವರ ಬಡಾವಣೆಗೆ ಮಾತ್ರ ಈ ಸೌಲಭ್ಯವಿಲ್ಲ. ಇದರಿಂದ ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಬಡಾವಣೆಯಲ್ಲಿರುವ 2 ಬೋರ್‌ವೆಲ್‌ಗಳನ್ನೇ ಅವಲಂಬಿಸಬೇಕಾಗಿದೆ. ಬಡಾವಣೆಗೆ ಕಾವೇರಿ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ನಗರಸಭೆಯು ಕ್ರಮವಹಿಸಿ ನಿವಾಸಿಗಳು ಕುಡಿಯುವ ನೀರಿಗಾಗಿ ಅನುಭವಿಸುತ್ತಿರುವ ತೊಂದರೆಯನ್ನು ತಪ್ಪಿಸಬೇಕಿದೆ.

ವಿದ್ಯಾರ್ಥಿಗಳಿಗೆ ಕಿರಿಕಿರಿ: ಮಹದೇಶ್ವರ ಬಡಾವಣೆಗೆ ಹೊಂದಿಕೊಂಡಂತೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕ ವಿದ್ಯಾರ್ಥಿನಿಲಯ, ವೃತ್ತಿಪರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಹಾಗೂ ಅಂಗನವಾಡಿ ಕೇಂದ್ರಗಳಿದ್ದು, ಇಲ್ಲಿನ ಅನೈರ್ಮಲ್ಯ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ವಿದ್ಯಾರ್ಥಿನಿಲಯಗಳ ಪಕ್ಕದಲ್ಲಿಯೇ ಇರುವ ಚರಂಡಿಗಳು ಅನೈರ್ಮಲ್ಯದಿಂದ ಕೂಡಿದ್ದು, ದುರ್ವಾಸನೆ ಬೀರುತ್ತಿರುವುದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

ಹಣ ಬಿಡುಗಡೆ: ಬಡಾವಣೆಯಲ್ಲಿ 4 ರಸ್ತೆಗಳಿದ್ದು, ಇದರಲ್ಲಿ 2 ರಸ್ತೆಗಳನ್ನು ಸಿಸಿ ರಸ್ತೆಗಳಾಗಿ ನಿರ್ಮಾಣ ಮಾಡಲು ಸಚಿವ ಸಿ.ಪುಟ್ಟರಂಗಶೆಟ್ಟಿ ತಮ್ಮ ಶಾಸಕರ ನಿಧಿಯಿಂದ 1.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ರಸ್ತೆ ನಿರ್ಮಾಣ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು ಮುಂದಿನ ತಿಂಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲು ಸೂಚಿಸಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಬಡಾವಣೆಯ ಉಳಿದ ರಸ್ತೆಗಳು ಹಾಗೂ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವರು ವಾರ್ಡ್‌ನ ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.

ಮಹದೇಶ್ವರ ಬಡಾವಣೆಯಲ್ಲಿ ಪ್ರಮುಖವಾಗಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆ ಇದ್ದು, ಬಡಾವಣೆಯ 2 ರಸ್ತೆಗಳ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ. ಉಳಿದಂತೆ ಬಡಾವಣೆಗೆ ಕಾವೇರಿ ನೀರು ಪೂರೈಕೆ ಮಾಡಲು ಕ್ರಮವಹಿಸಲಾಗಿದೆ. ಜತೆಗೆ ಬಡಾವಣೆಯಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲು ಸಚಿವರ ಜತೆ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು.
ಸಿ.ಜಿ.ಚಂದ್ರಶೇಖರ್ 20 ನೇ ವಾರ್ಡ್‌ನ ಸದಸ್ಯ

ಮಹದೇಶ್ವರ ಬಡಾವಣೆಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ 1.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕೆಲವೇ ದಿನಗಳಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ. ಉಳಿದಂತೆ ಬಡಾವಣೆಗೆ ಅಗತ್ಯವಿರುವ ಸೌಕರ್ಯಗಳ ಪೂರೈಕೆಗೆ ಕ್ರಮವಹಿಸಲಾಗುವುದು.
ರಾಜಣ್ಣ ನಗರಸಭೆ ಆಯುಕ್ತ