Thursday, 13th December 2018  

Vijayavani

Breaking News

ಧರ್ಮ ಸಂಕಟದಲ್ಲಿ ಮಹಾ ಹೋರಾಟ

Saturday, 06.01.2018, 3:04 AM       No Comments

ವಿಧಾನಸಭೆ ಪ್ರತಿಪಕ್ಷ ನಾಯಕ, ಇಬ್ಬರು ಸಚಿವರು ಇರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಹಾಗೂ ಲಿಂಗಾಯತ-ವೀರಶೈವರಲ್ಲಿನ ಒಗ್ಗಟ್ಟು ಸ್ವಲ್ಪ ಶಿಥಿಲಗೊಂಡಿರುವುದು; ಮಹದಾಯಿ, ಕಳಸಾ-ಬಂಡೂರಿ ಹೋರಾಟ ಇತ್ತೀಚಿನ ಪ್ರಮುಖ ವಿದ್ಯಮಾನಗಳು. ಧರ್ಮ ಮತ್ತು ಜಲ ವಿವಾದದ ನಡುವೆ ವಿಜಯ ಪತಾಕೆ ಹಾರಿಸುವವರ್ಯಾರು ಎನ್ನುವ ಕೌತುಕಮಯ ವಿವರ ಇಲ್ಲಿದೆ.

| ಜಿ.ಟಿ. ಹೆಗಡೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ 7, ಹಾವೇರಿ ಜಿಲ್ಲೆಯ 1 ಸೇರಿ 8 ವಿಧಾನಸಭೆ ಕ್ಷೇತ್ರಗಳಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತ-ವೀರಶೈವರೇ ನಿರ್ಣಾಯಕರಾಗಿದ್ದರು. ಈ ಸಲ ಪ್ರತ್ಯೇಕ ಧರ್ಮ ಹೋರಾಟದಿಂದ ಉಂಟಾಗಿರುವ ಒಡಕು, ಮಹದಾಯಿ ಹೋರಾಟದ ಕಾವು ರಾಜಕೀಯದ ಮೇಲೆ ಒಂದಿಷ್ಟು ಪರಿಣಾಮ ಬೀರಬಹುದು. ಗುಣಕ್ಕೂ ಹಣಕ್ಕೂ ಮಾನ್ಯತೆ ನೀಡುವ ಮತದಾರರಿದ್ದಾರೆ ಎಂಬುದಕ್ಕೆ ಉದಾಹರಣೆಗಳು ಇಲ್ಲುಂಟು. ಪುನಃ ಪುನಃ ಗೆಲ್ಲಿಸುವ ಮತದಾರರೂ ಇದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಸತತ ಗೆದ್ದು ಬರುತ್ತಿದೆ (ಹಾಲಿ ಸಂಸದ ಪ್ರಲ್ಹಾದ ಜೋಶಿ). ಸದ್ಯ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಮೂರರಲ್ಲಿ ಬಿಜೆಪಿ ಮತ್ತು ಒಂದರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಜೆಡಿಎಸ್ ನವಲಗುಂದ ಕ್ಷೇತ್ರದಲ್ಲಷ್ಟೇ ಪ್ರಬಲ.


ಪೂರ್ವ ಪ್ರಸಾದ ಸಿಕ್ಕೀತೆ?

ಹು-ಧಾ ಪೂರ್ವ (ಮೀಸಲು) ಕ್ಷೇತ್ರದಲ್ಲಿ ಕಳೆದ ಸಲ ಕಾಂಗ್ರೆಸ್​ನ ಪ್ರಸಾದ ಅಬ್ಬಯ್ಯ, ಬಿಜೆಪಿ-ಕೆಜೆಪಿ ಒಡಕಿನ ಫಲಾನುಭವಿಯಾಗಿ ಗೆದ್ದಿದ್ದಾರೆ. ಮುಸ್ಲಿಂ ಮತದಾರರು ಇಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರೂ ಲಿಂಗಾಯತ ವೀರಶೈವರು ಹಾಗೂ ಎಸ್​ಎಸ್​ಕೆ ಸಮಾಜದವರು ನಿರ್ಣಾಯಕರು. ಬಿಜೆಪಿಯಲ್ಲಿ ಟಿಕೆಟ್​ಗಾಗಿ ಪೈಪೋಟಿ ಇದೆ. ಶಾಸಕರು ಜನರ ಮಧ್ಯೆ ಇರುವುದರಿಂದ ವರಪ್ರಸಾದ ಸಿಕ್ಕೀತು.


ಕುಂದಗೋಳದಲ್ಲಿ ಕುಂದಿದ ಬದುಕು

ಅತಿಹೆಚ್ಚು ಒಣ ಭೂಮಿ ಹೊಂದಿದ ಕ್ಷೇತ್ರ ಕುಂದಗೋಳ. ಬಿಜೆಪಿ-ಕೆಜೆಪಿ ಒಡಕಿನ ಲಾಭ ಪಡೆದ ಕಾಂಗ್ರೆಸ್​ನ ಸಿ.ಎಸ್. ಶಿವಳ್ಳಿ ಗೆದ್ದಿದ್ದರು. ಲಿಂಗಾಯತ ವೀರಶೈವರು, ಕುರುಬರು ನಿರ್ಣಾಯಕರು. ಶಾಸಕರು ಒಂದಿಷ್ಟು ಕೆಲಸ ಮಾಡಿದ್ದರೂ, ಬರದಿಂದ ಕಂಗೆಟ್ಟ ಕ್ಷೇತ್ರದಲ್ಲಿ ಅದು ಢಾಳಾಗಿ ಕಾಣುತ್ತಿದೆ. ಬಿಜೆಪಿಯಲ್ಲಿ ಪೈಪೋಟಿಯಿದ್ದು, ಒಮ್ಮತದ ಅಭ್ಯರ್ಥಿ ಹಾಕಿದರೆ ಇಲ್ಲಿ ಕಮಲ ಅರಳೀತು.


ಕುಲಕರ್ಣಿ ಕೊಸರಾಟ

ಧಾರವಾಡ (ಗ್ರಾಮೀಣ) ಕ್ಷೇತ್ರದ ಹಾಲಿ ಶಾಸಕ, ಗಣಿ ಸಚಿವ ವಿನಯ ಕುಲಕರ್ಣಿ ಅಭಿವೃದ್ಧಿ, ಆಡಳಿತದಲ್ಲಿಯ ಚುರುಕುತನಕ್ಕಿಂತ ಕೆಲ ರಾದ್ಧಾಂತಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. 2004ರಲ್ಲಿ ಪಕ್ಷೇತರ ಶಾಸಕನಾಗಿ ಗೆದ್ದು ಕಾಂಗ್ರೆಸ್ ಸೇರಿದ್ದ ಅವರು 2008ರಲ್ಲಿ ಸೋತಿದ್ದರು. 2013ರಲ್ಲಿ ಜೆಡಿಎಸ್​ನ ಅಮೃತ ದೇಸಾಯಿ ಎದುರು ಗೆದ್ದು, ಸಚಿವರೂ ಆಗಿದ್ದಾರೆ. ಅಮೃತ ಈಗ ಬಿಜೆಪಿಯಲ್ಲಿದ್ದು, ಪ್ರಬಲ ಆಕಾಂಕ್ಷಿ. ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ವಿನಯ ಕೈವಾಡದ ಆರೋಪ ಕೇಳಿಬಂದಿತ್ತು. ನಂತರದ ಕೆಲ ಬೆಳವಣಿಗೆಗಳಿಂದ ಕೋಲಾಹಲ ಉಂಟಾಗಿತ್ತು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಕುಲಕರ್ಣಿ ಮುಂಚೂಣಿಯಲ್ಲಿದ್ದಾರೆ. ಕಣ್ಣಿಗೆ ರಾಚುವಂಥ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಗೆಲುವಿನ ವಿಶ್ವಾಸ ಹೆಚ್ಚಿಸಿಕೊಳ್ಳಲು ಕೊಸರಾಟ ಮುಂದುವರಿದಿದೆ.


ಅರಳೀತು ಅರವಿಂದ ಹೂವು

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಚಂದ್ರಕಾಂತ ಬೆಲ್ಲದ 2013ರಲ್ಲಿ ನಿವೃತ್ತಿ ಘೊಷಿಸಿದರು. ಅವರ ಪುತ್ರ ಅರವಿಂದ ಬೆಲ್ಲದ ಕಾಂಗ್ರೆಸ್ ವಿರುದ್ಧ ಗೆದ್ದರು. ಬುದ್ಧಿವಂತ, ದೂರದೃಷ್ಟಿಯುಳ್ಳ ಅರವಿಂದ ಕೈ, ಬಾಯಿ ಕೆಡಿಸಿಕೊಂಡವರಲ್ಲ. ಜನರಿಗೆ ಬೇಕಾದಾಗೆಲ್ಲ ಭೇಟಿಗೆ ಸಿಗುವುದಿಲ್ಲ ಎಂಬ ಆರೋಪವಿದೆ. ಆದರೆ ಐಐಟಿ, ಐಐಐಟಿ, ಉನ್ನತ ಶಿಕ್ಷಣ ಅಕಾಡೆಮಿ, ಬಡವರಿಗಾಗಿ ಮಹಡಿ ಮನೆಗಳ ಸಮುಚ್ಚಯದಂಥ ಮಹತ್ವದ ಕೆಲಸದಲ್ಲಿ ಅವರ ದೂರದೃಷ್ಟಿ ಬಳಕೆಯಾಗಿದೆ. ಕಾಂಗ್ರೆಸ್​ನಿಂದ ಮಾಜಿ ಸಚಿವ ಎಸ್.ಆರ್. ಮೋರೆ ಸೇರಿ ಐದಾರು ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್​ನಲ್ಲಿ ಒಡಕುಂಟಾದರೆ ಅರವಿಂದ ಪುಷ್ಪ ಅರಳಲಿದೆ.


ಸಂತೋಷ ‘ಲಾರ್ಡ್’ ಅಲ್ಲ

ಧಾರವಾಡ ಜಿಲ್ಲೆಗೆ ಬಳ್ಳಾರಿ ಮಾದರಿ ರಾಜಕಾರಣ ಪರಿಚಯಿಸಿದವರು ಸಂತೋಷ ಲಾಡ್. 2008ರಲ್ಲಿ ಜೆಸಿಬಿ, ಕೊಳವೆಬಾವಿ ಕೊರೆಯುವ ಯಂತ್ರ ತರಿಸಿ ರೈತರಿಗೆ, ಇತರರಿಗೆ ಉಚಿತ ಸೇವೆ ನೀಡಿ ಕಲಘಟಗಿ ಕ್ಷೇತ್ರದ ಲಾರ್ಡ್ (ದೇವರು) ಎನಿಸಿಕೊಂಡು ಗೆದ್ದರು. ನಂತರ ಅಪರೂಪವಾಗಿದ್ದರು. 2013ರಲ್ಲಿ ಸಕ್ಕರೆ ಕಾರ್ಖಾನೆ ಭರವಸೆ ನೀಡಿದರು. ಜನ ಅವರಲ್ಲಿ ಗುಣ-ಹಣ ಕಂಡರು. ಕೆಜೆಪಿ ವಿರುದ್ಧ ಗೆಲ್ಲಿಸಿದರು. ಮರಾಠಾ ಕೋಟಾದಲ್ಲಿ ಸಚಿವರಾದರು. ಗಣಿ ಪ್ರಕರಣದಿಂದಾಗಿ ರಾಜೀನಾಮೆ ನೀಡಿ, ಮತ್ತೆ ಸಚಿವರಾಗಿದ್ದಾರೆ. ಲಾಡ್ ಕ್ಷೇತ್ರದಿಂದ ದೂರ, ಸಕ್ಕರೆ ಕಾರ್ಖಾನೆ ಆಗಲೇ ಇಲ್ಲ. ಈಗ ಅವರು ‘ಲಾರ್ಡ್’ ಅಲ್ಲ. ಬಿಜೆಪಿಯಲ್ಲಿ ಟಿಕೆಟ್​ಗಾಗಿ ಪೈಪೋಟಿ ಇದೆ.


ಜನಪ್ರಿಯ ಜಗದೀಶ

ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ 1994ರಿಂದ ಕಮಲವನ್ನು ಅರಳಿಸುತ್ತಿದ್ದಾರೆ. ಸೀದಾ ಸಾದಾ ಮನುಷ್ಯ. ಪಕ್ಷದ ಕಾರ್ಯಕರ್ತರು ಮತ್ತು ಜನರೊಂದಿಗೆ ನಿಕಟ ಸಂಪರ್ಕ. ಅಪರಾಧಿಕ ಪ್ರವೃತ್ತಿಯವರನ್ನು ಬೆಂಬಲಿಸುವುದಿಲ್ಲ. ಅಭಿವೃದ್ಧಿಯಲ್ಲಿ ಒಂದಿಷ್ಟು ಹೊಸತನ ತಂದಿದ್ದಾರೆ. ಸಿಎಂ ಆಗಿದ್ದಾಗ ಅನೇಕ ಯೋಜನೆ ಮಂಜೂರು ಮಾಡಿದ್ದಾರೆ. ಇಂಥ ಅನೇಕ ಕಾರಣದಿಂದ ಅವರು ಜನಪ್ರಿಯ. ಕಾಂಗ್ರೆಸ್ ಟಿಕೆಟ್​ಗಾಗಿ ಡಾ. ಮಹೇಶ ನಾಲವಾಡ, ನಾಗರಾಜ ಛಬ್ಬಿ ಮಧ್ಯೆ ಪೈಪೋಟಿ ಇದೆ. ಶೆಟ್ಟರ್​ಗೆ ಒಮ್ಮೆ ಸೋಲಿನ ರುಚಿ ಕಾಣಿಸಲು ಕಾಂಗ್ರೆಸ್ ತವಕಿಸುತ್ತಿದೆ. ಅದಕ್ಕಾಗಿ ಈಗಲೇ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದೆ.


ಬೊಮ್ಮಾಯಿಗೆ ಸೋಮಣ್ಣನೇ ಸ್ಪರ್ಧಿ

ಹಾವೇರಿ ಜಿಲ್ಲೆಯ ಶಿಗ್ಗಾಂವಿ-ಸವಣೂರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ 2008ರಿಂದ ಶಾಸಕ. ಒಂದಿಷ್ಟು ಕೆಲಸವಾಗಿದೆ. ಪುನಃ ಅವರಿಗೆ ಟಿಕೆಟ್ ಕೊಡದಿರಿ; 2008ರಲ್ಲಿ ಯಡಿಯೂರಪ್ಪ ಮಾತು ಕೇಳಿ ಹಿಂದೆ ಸರಿದಿದ್ದೆ, 2013ರಲ್ಲೂ ಬೊಮ್ಮಾಯಿಗೆ ಜೈ ಅಂದೆ, ಈಗ ನನಗೇ ಟಿಕೆಟ್ ಕೊಡಿ ಎನ್ನುತ್ತಿದ್ದಾರೆ ಎಂಎಲ್​ಸಿ ಸೋಮಣ್ಣ ಬೇವಿನಮರದ. ಸದ್ಯಕ್ಕೆ ಬೊಮ್ಮಾಯಿಗೆ ಇದೊಂದೇ ಸಮಸ್ಯೆ. ಕಾಂಗ್ರೆಸ್​ನಲ್ಲಿ ಪೈಪೋಟಿ ಇದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆಯೂ ಗಮನಾರ್ಹವಾಗಿದೆ.


ಹೋರಾಟದ ನವಲಗುಂದ

ಮಹದಾಯಿ, ಕಳಸಾ-ಬಂಡೂರಿ ಯೋಜನೆ ಹೋರಾಟ, ಪೊಲೀಸ್ ದೌರ್ಜನ್ಯ ಇತ್ಯಾದಿಯಿಂದ ಸುದ್ದಿಯಾಗುತ್ತಲೇ ಇರುವ ಕ್ಷೇತ್ರ ನವಲಗುಂದ. ಲಿಂಗಾಯತ-ವೀರಶೈವ, ಕುರುಬ ಸಮಾಜದವರು ನಿರ್ಣಾಯಕರು. ಬಿಜೆಪಿ ಸೋಲಿಸಿದ ಜೆಡಿಎಸ್​ನ ಎನ್.ಎಚ್. ಕೋನರಡ್ಡಿ ಶಾಸಕ. ಜನರ ಮಧ್ಯೆ ಇದ್ದಾರೆ. ಬಿಜೆಪಿಯಿಂದ ಶಂಕರ ಪಾಟೀಲ ಮುನೇನಕೊಪ್ಪ ಮತ್ತೆ ಅಭ್ಯರ್ಥಿಯಾಗಬಹುದು. ಕಾಂಗ್ರೆಸ್​ನಲ್ಲಿ ಪೈಪೋಟಿ ಇದೆ. ಕೋನರಡ್ಡಿ ಪುನರಾಯ್ಕೆಗೆ ಭಾರಿ ಹೋರಾಟ ಅಗತ್ಯ.

Leave a Reply

Your email address will not be published. Required fields are marked *

Back To Top