ಮಹಾಬಲೇಶ್ವರ ಮಂದಿರದ ಸುತ್ತ 100 ಮೀ. ನಿಷೇಧಿತ ಪ್ರದೇಶ

ಗೋಕರ್ಣ: ಮಹಾಬಲೇಶ್ವರ ಮಂದಿರದ ಸುತ್ತಲಿನ 100 ಮೀ. ಪ್ರದೇಶವು ನಿಷೇಧಿತ ಮತ್ತು ಸಂರಕ್ಷಿತ ಪ್ರದೇಶವಾಗಿದ್ದು, ಇಲಾಖೆ ಕೇಂದ್ರ ಕಚೇರಿಯ ಒಪ್ಪಿಗೆ ಇಲ್ಲದೆ ಯಾವುದೇ ಬಗೆಯ ಬದಲಾವಣೆ ಮಾಡುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ಹೊಸ ಕಟ್ಟಡಗಳು ತಲೆ ಎತ್ತುತ್ತಿದ್ದು, ಈ ಕುರಿತು ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಟಿ. ವೆಂಕಟೇಶ ಸೂಚಿಸಿದ್ದಾರೆ.

ಮಹಾಬಲೇಶ್ವರ ಮಂದಿರಕ್ಕೆ ಭೇಟಿಯಿತ್ತ ಅವರು ಇಲ್ಲಿನ ಖಾಸಗಿ ಕಟ್ಟಡವೊಂದನ್ನು ಪರಿಶೀಲಿಸಿ ಪತ್ರಕರ್ತರಿಗೆ ಮಾಹಿತಿ ನೀಡಿದರು.

ಮಹಾಬಲೇಶ್ವರ ಮಂದಿರವು ರಾಜ್ಯ ಸಂರಕ್ಷಿತ ಪ್ರದೇಶಗಳ ಪಟ್ಟಿಯಲ್ಲಿದ್ದು, ಈ ಮಂದಿರದಿಂದ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಸ್ಥಿತ್ಯಂತರ ಮಾಡುವಂತಿಲ್ಲ.ಆ ನಂತರದ 200 ಮೀ. ಪ್ರದೇಶದಲ್ಲಿ ಕಟ್ಟಡ ನಿರ್ವಿುಸುವವರು ಮೈಸೂರಿನಲ್ಲಿರುವ ಇಲಾಖೆಯ ಕೇಂದ್ರ ಕಚೇರಿಯಿಂದ ಕಡ್ಡಾಯವಾಗಿ ಪ್ರಮಾಣಪತ್ರ ಪಡೆದಿರಬೇಕು. ಈ ಪ್ರದೇಶವನ್ನು ಗುರುತು ಮಾಡಲು ಮತ್ತು ಇಲ್ಲಿನ ಕಟ್ಟಡಗಳಿಗೆ ಎನ್​ಒಸಿ ಕೊಡುವ ಮೊದಲು ಪುರಾತತ್ವ ಇಲಾಖೆ ಪ್ರಮಾಣಪತ್ರ ಕಡ್ಡಾಯ ಪಡೆಯಲು ಸ್ಥಳೀಯ ಪಂಚಾಯಿತಿಗೆ ಆದೇಶ ನೀಡಲಾಗಿದೆ. ಇದರ ಜೊತೆಗೆ ಮಹಾಬಲೇಶ್ವರ ಮಂದಿರದ ಪ್ರಾಂಗಣದಲ್ಲಿ ಇಲಾಖೆ ‘ನಿಷೇಧಿತ ಮತ್ತು ರಕ್ಷಿತ ಪ್ರದೇಶ’ ಕುರಿತಾದ ಫಲಕ ಹಾಕಲು ನಿರ್ಧರಿಸಿದೆ ಎಂದು ಹೇಳಿದರು.

ಇಲಾಖೆ ಇಬ್ಬಗೆ ನೀತಿ:  ಮಹಾಬಲೇಶ್ವರ ಮಂದಿರ ಸಮೀಪದಲ್ಲಿ ರಾಮಚಂದ್ರ ನಿರ್ವಾಣೇಶ್ವರ ಎನ್ನುವವರು ಕೆಲ ತಿಂಗಳ ಹಿಂದೆ ಧಾರವಾಡ ಪುರಾತತ್ವ ಇಲಾಖೆ ಪ್ರಮಾಣ ಪತ್ರದೊಂದಿಗೆ ಕಟ್ಟಡ ನಿರ್ವಿುಸಿದ್ದರು. ಇದನ್ನು ಪರಿಗಣಿಸಿ ಪಂಚಾಯಿತಿ ಕೂಡ ಎನ್​ಒಸಿ ನೀಡಿತ್ತು. ಈ ನಡುವೆ ಪುರಾತತ್ವ ಇಲಾಖೆ ಕ್ರಮವನ್ನು ಆಕ್ಷೇಪಿಸಿ ಇಲ್ಲಿನ ಪ್ರದೀಪ ಗಣಪತಿ ಗಣೆಯನ್ ಎಂಬುವರು ದೂರು ಸಲ್ಲಿಸಿದ್ದರು. ಇಲಾಖೆಯ ಧಾರವಾಡ ಕಚೇರಿ ಈ ಕಟ್ಟಡಕ್ಕೆ ನೀಡಿರುವ ಪ್ರಮಾಣಪತ್ರ ಇಲಾಖೆಯ ಕಾರ್ಯ ನಿರ್ವಹಣೆ ಬಗ್ಗೆ ನಾಗರಿಕರಲ್ಲಿ ಸಂಶಯ ಹುಟ್ಟುಹಾಕಿರುವುದನ್ನು ಆಯುಕ್ತರ ಗಮನಕ್ಕೆ ತರಲಾಯಿತು. ಈ ಬಗ್ಗೆ ಉತ್ತರಿಸಿದ ಆಯುಕ್ತರು, ಪ್ರಮಾಣಪತ್ರ ನೀಡುವ ಅಧಿಕಾರ ಕೇಂದ್ರ ಕಚೇರಿ ಮೈಸೂರಿನ ವ್ಯಾಪ್ತಿಗೆ ಸೇರಿದೆ. ಧಾರವಾಡ ಕಚೇರಿಗೆ ಇಂತಹ ಅವಕಾಶ ಕಾನೂನು ರೀತ್ಯಾ ಇಲ್ಲವಾಗಿದೆ. ಈ ಪ್ರಮಾಣಪತ್ರ ನೀಡಿದ ಅಧಿಕಾರಿ ವಿರುದ್ಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲಿನ ವಿದ್ಯಮಾನದ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಮುಂದಿನ ಕ್ರಮಕ್ಕೆ ಈಗಾಗಲೇ ಆಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇಲಾಖೆ ಅಧಿಕಾರಿಗಳಾದ ಡಾ. ವಾಸುದೇವ, ಎಸ್.ಎಂ. ಪೂಜಾರ, ಕುಬೇರಪ್ಪ, ಮಹಾಬಲೇಶ್ವರ ಮಂದಿರದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ, ಪಂಚಾಯಿತಿ ಉಪಾಧ್ಯಕ್ಷ ಶೇಖರ ನಾಯ್ಕ, ತಾ.ಪಂ. ಸದಸ್ಯ ಮಹೇಶ ಶೆಟ್ಟಿ, ಪಿಡಿಒ ಯಾದವ ನಾಯ್ಕ, ಕಾರ್ಯದರ್ಶಿ ಶ್ರೀಧರ ಬೋಮ್ಕರ್​ಇತರರಿದ್ದರು.