2020 ಆಗಮಿಸಿದೆ. ಪ್ರತಿಯೊಬ್ಬರಿಗೂ ಹೊಸವರ್ಷದ ಶುಭಾಶಯ ಕೋರುತ್ತ ಮುಂದಿನ ವರ್ಷಾವಧಿಯಲ್ಲಿ ಭಾರತೀಯ ಜ್ಯೋತಿಷ್ಯ ವಿಜ್ಞಾನದ ಆಧಾರದಲ್ಲಿ ಯಾವೆಲ್ಲ ಸುಖದುಃಖಗಳನ್ನು ನಾವು ಸಮಷ್ಟಿಯಲ್ಲಿ ಸ್ವೀಕರಿಸಬೇಕಾಗಿ ಬರಬಹುದು ಎಂಬುದರ ಒಂದು ವಿಶ್ಲೇಷಣೆ ಇಲ್ಲಿ ದಾಖಲಿಸುತ್ತಿದ್ದೇನೆ. ನಾವು ದೇವರಾಗುವುದು ಸಾಧ್ಯವೇ ಇಲ್ಲ. ರಾಕ್ಷಸರಂತೂ ಆಗಲೇಬಾರದು. ಆದರೆ, ಮನುಷ್ಯರಾಗುವುದು ಕಷ್ಟವೇ ಅಲ್ಲ. ನಾವು ಎಲ್ಲರೂ ಮನುಷ್ಯರಾದಾಗ ನಮಗೆ ದುಃಖವಿರಲು ಅಸಾಧ್ಯ; ನೋವು ಬಾಧಿಸದು. ಆದರೆ, ನಾವು ಮನುಷ್ಯರಾಗಲು ಸೋಲುತ್ತಿದ್ದೇವೆ. ಯಾಕೆ ಮನುಷ್ಯರಾಗದ ಪ್ರಾರಬ್ಧ ನಮ್ಮನ್ನು ನೋವಿಗೆ, ಅಸಹಾಯಕತೆಗೆ ತಳ್ಳುತ್ತಿದೆ? ಮನುಷ್ಯನಾಗುವುದು ಅಷ್ಟು ಕಷ್ಟವೇ? ಇದು ಶತಶತಮಾನಗಳಿಂದಲೂ ಕೇಳಿಕೊಂಡು ಬಂದ ಪ್ರಶ್ನೆ. ಉತ್ತರವಿಲ್ಲ. ಹಾಗಾದರೆ, ಅದು ಪ್ರಾರಬ್ಧವೇ? ಶ್ರದ್ಧೆ, ಮೇಧಾಶಕ್ತಿ, ಪ್ರಜ್ಞೆ, ಬುದ್ಧಿಶಕ್ತಿಗಳು ಸೂಕ್ಷ್ಮವಾಗಿ ವಿನಿಯೋಗಗೊಂಡಲ್ಲಿ ಪ್ರಾರಬ್ಧವಿರಲಾರದು. ಇದ್ದರೂ, ಈಗಿರುವ ಪ್ರಾರಬ್ಧದಲ್ಲಿ ಪ್ರಪಂಚ ನೂರಕ್ಕೆ ಶೇಕಡಾ 90ರಷ್ಟನ್ನು ದೂರ ಮಾಡಿಕೊಳ್ಳಬಹುದು. ಹೌದು, ಸರಿ. ಆದರೆ, ಸಾಧ್ಯವಾಗುತ್ತಿಲ್ಲವಲ್ಲ? ಯಾಕೆ ಹೀಗೆ? ಏನೋ ಒಂದು ನಮ್ಮನ್ನು ರಕ್ಷಿಸುತ್ತಿದೆ ಎನ್ನುವುದು ಸರಿಯೇ. ಆದರೆ, ರಕ್ಷಾಶಕ್ತಿಗೆ ತಡೆ ತರುತ್ತಿರುವ ಪೀಡೆಗೆ ಶಕ್ತಿ ಎಲ್ಲಿಂದ? ಪಾಪಬುದ್ಧಿಗೆ ಅವಕಾಶ ಕೊಡುವ ಶಕ್ತಿ, ಕೃತ್ರಿಮಶಕ್ತಿ, ಬೆಳಕನ್ನು ಕತ್ತಲಾಗಿಸುವ ಕ್ರೂರಶಕ್ತಿ ಉದ್ಭವಿಸುತ್ತದೆ. ಇದು ಸತ್ಯ.
ಜಾಗತಿಕ ವಿದ್ಯಮಾನ ಹೇಗೆ ಎತ್ತ?
ಜಗತ್ತು ವಿಶಾಲವಾದುದು. ಒಟ್ಟು 195 ದೇಶಗಳು ಜಗತ್ತಿನಲ್ಲಿವೆ ಎಂಬುದು ತಿಳಿದ ವಿಷಯ. ಭಾರತದ ಆರ್ಷೆಯ ಪರಂಪರೆ ವಸುಧೈವ ಕುಟುಂಬಕಂ ಎಂಬುದನ್ನು ಪ್ರತಿಪಾದಿಸಿದೆ. ಜಗತ್ತೇ ಒಂದು ಕುಟುಂಬ ಎಂಬುದು ಒಂದು ಸೊಗಸಾದ ಕಲ್ಪನೆ. ಧಾರಿಣಿ ಅಂದರೆ ಎಲ್ಲವನ್ನೂ (ನಮ್ಮ ಭಾರವನ್ನ, ಅಪಚಾರವನ್ನ ಸಹಿಸಿಕೊಳ್ಳುವವವಳಾಗಿ) ಭರಿಸುವವಳು, ಧರಿಸುವವಳು. ಈಕೆಯೇ ವಿಷ್ಣುಪತ್ನಿ ಲಕ್ಷ್ಮೀ. ಹೀಗಾಗಿ ‘ನಿನ್ನನ್ನು ತುಳಿಯುತ್ತಿರುವ ನಮ್ಮನ್ನು ಕ್ಷಮಿಸು’ (ವಿಷ್ಣುಪತ್ನಿಂ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ) ಎಂದು ಧಾರಿಣಿಯನ್ನು ನಮಿಸಿ ಹೆಜ್ಜೆ ಇರಿಸುವುದು ಭಾರತೀಯ ಪರಂಪರೆ. ಇಂಥ ಧಾರಿಣಿಯಲ್ಲಿ 195 ರಾಷ್ಟ್ರಗಳ ಗಡಿಗಳು ರಾಜಕೀಯವಾಗಿ ಸ್ಪಷ್ಟಗೊಂಡಿವೆ. ದುರ್ದೈವದಿಂದ ನಾವೆಲ್ಲ ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಮೈಬಣ್ಣ, ಮೈಕಟ್ಟುಗಳ ವೈವಿಧ್ಯತೆಗಳಿಂದಾಗಿ ಒಡೆದುಹೋಗಿದ್ದೇವೆ. ಮಾತೃ ಭೂಮಿಯ ಕಲ್ಪನೆಯೇ ಬೇರೆ ಆಗಿದೆ. ಜಗತ್ತಿನ ಮಿಸುಕಾಟಗಳು ಮುಖ್ಯವಾಗಿ ಅಮೆರಿಕ, ಪಾಶ್ಚಿಮಾತ್ಯ ರಾಷ್ಟ್ರಗಳು, ಭಾರತ, ಚೀನಾ, ಪಾಕಿಸ್ತಾನ, ಕೊಲ್ಲಿ ರಾಷ್ಟ್ರಗಳು, ರಷ್ಯಾ, ಜಪಾನ್, ಉತ್ತರ ಕೊರಿಯಾದ ಮೂಲಕವೇ ಜಾಗತಿಕ ಸಮಸ್ಯೆಗಳಾಗುತ್ತವೆ.
ಭಾರತದ ಸ್ಥಿತಿಗತಿಯನ್ನು ಪ್ರತ್ಯೇಕವಾಗಿ ವಿಶ್ಲೇಷಿಸೋಣ. ಭಯೋತ್ಪಾದಕರ ಅಡಗುತಾಣವಾಗಿ ಭಾರತವನ್ನು ನಿಯಂತ್ರಿಸಲು ಮುಂದಾಗಿಯೇ ತೀರುವ ಚೀನಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಹುನ್ನಾರದಿಂದಾಗಿ ಪಾಕಿಸ್ತಾನ ತಾನು ಭಾರತದ ಸರಿಸಮಾನದೇಶ ಎಂಬುದಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತದೆ. ಜಗತ್ತು ಸಹ ಅದನ್ನು ನಿರಾಕರಿಸಲು ಮುಂದಾಗುತ್ತಿಲ್ಲ. ಟ್ರಂಪ್ ಒಬ್ಬ ಜೋಕರ್ ಹಾಗೆ ಕಾಣುತ್ತಾರೆ, ಆದರೆ ಜೋಕರ್ ಅಲ್ಲ. ಅಮೆರಿಕದಂಥ ಅಮೆರಿಕಕ್ಕೂ ಅವರನ್ನು ಆಯ್ಕೆಮಾಡಬೇಕಾಗಿ ಬಂತು. ಅನ್ಯ ದೇಶಗಳು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಾಯ ಮಾಡಿದವು ಎಂಬ ಆರೋಪ ಅಮೆರಿಕದಲ್ಲೇ ಜೀವಂತ.
ಅವರು ಶ್ರೀಮಂತರು, ಐಷಾರಾಮಿ ಜೀವನ ಅವರದು. ಅವರು ಯೋಚಿಸದೆಯೇ ಮಾತನಾಡುತ್ತಾರೆ ಎಂಬುದಾಗಿ ಜಾಗತಿಕವಾಗಿ ಇತರರು ಟೀಕಿಸುವುದಕ್ಕಿಂತ ಅಮೆರಿಕನ್ನರೇ ಆ ರೀತಿ ಹೇಳುತ್ತಾರೆ. ಮೆಕ್ಸಿಕೋ ದೇಶದ ಗಡಿಗೋಡೆ ಕಟ್ಟುವುದು, ಅಮೆರಿಕ ವೀಸಾದ ಬಗ್ಗೆ ವಿಕ್ಷಿಪ್ತ ಕಾನೂನುಗಳನ್ನು ತಂದಿದ್ದಾರೆ, ತರುತ್ತಿದ್ದಾರೆಂಬ ಬಗ್ಗೆ ಕೆಲವು ದೇಶಗಳ ಅಸಂತೃಪ್ತಿ, ತನ್ನ ಮಾತನ್ನು ಒಪ್ಪದ ಚೀನಾವನ್ನು ತನ್ನ ದೇಶದ ವಿಷಯಗಳ ನೆಲೆಯಲ್ಲಿ ಮಾತ್ರ ನಿಗ್ರಹಿಸಲು ಹೊರಡುವುದು, ಮೋದಿಯವರ ವರ್ಚಸ್ಸನ್ನು ಮುಂದಿನ ಚುನಾವಣೆಯ ಸಂದರ್ಭದ ತನ್ನ ಉಪಯೋಗಕ್ಕೆ ಬಳಸಿಕೊಳ್ಳುತ್ತಿರುವ ಕ್ರಮ, ಭಾರತಕ್ಕೆ ಭೇಟಿ ಕೊಡದಿರುವ ಉದ್ಧಟತನ, ಇರಾನನ್ನು ಅಸಹಾಯಕಗೊಳಿಸಲು ಮುಂದಾದ ಧಾವಂತ, ಪದಚ್ಯುತಿಯನ್ನು ತಪ್ಪಿಸಿಕೊಂಡು ಅಧ್ಯಕ್ಷಗಿರಿಯ ಮತ್ತೂ ಒಂದು ಅವಧಿಗೆ ಆಯ್ಕೆ ಬಯಸುತ್ತಿರುವ ವೈಚಿತ Åಗಳಿಗೆ ರಾಹು ಮತ್ತು ಸೂರ್ಯ ಈಗಲೂ ಪುಷ್ಟಿ ನೀಡುವ ಶಕ್ತಿ ನೀಡುತ್ತಿದ್ದಾರೆ.
ಇವರಿಗಿಂತಲೂ ಹೆಚ್ಚಿನ ವಿಕ್ಷಿಪ್ತ ಶಕ್ತಿಯಲ್ಲಿ ಸಂಭ್ರಮಿಸುತ್ತಿರುವ ಇವರ ಸಂಭ್ರಮವನ್ನು ದೇಶದ ಅಸಹಾಯಕ ಜನ ಸಹಿಸಿಕೊಳ್ಳಲೇಬೇಕಾದ, ಯಾವ ಕ್ಷಣದಲ್ಲೂ ಜಾಗತಿಕ ಶಾಂತಿಯನ್ನು ಕದಡಬಲ್ಲ ಶಕ್ತಿಯನ್ನು ಉತ್ತರ ಕೊರಿಯಾದ ನಿರಂಕುಶ ವರಿಷ್ಠ ಕಿಮ್ ಜಾಂಗ್ ಉನ್ ತನ್ನ ಜನ್ಮಕುಂಡಲಿಯ ಕುಜ ಚಂದ್ರರಿಂದ ಪಡೆದಿದ್ದಾರೆ. ಆದರೆ, ಟ್ರಂಪ್, ಕಿಮ್ೆ ಹೆದರುತ್ತಾರೆ. ಕುಜನ ಕಾರಣದಿಂದ ಹೆಚ್ಚು ಮಾತನಾಡದ, ಮಾತನಾಡದೆಯೇ ಅಂದುಕೊಂಡಿದ್ದನ್ನು ತೆಪ್ಪಗೆ ಮಾಡಿ ಮುಗಿಸಬಲ್ಲ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಬಲಾಢ್ಯ ಚಂದ್ರನಿಂದ ಅನುಕೂಲಕರ ರಾಹುವಿನ ಕಾರಣದಿಂದ ಅಮೆರಿಕ, ಭಾರತ, ಜಪಾನ್ ದೇಶವನ್ನು (ಓಲೈಸುತ್ತಲೇ ತಣ್ಣಗೆ ಕುತ್ತಿಗೆ ಹಿಚುಕುವ ಕ್ರೌರ್ಯವನ್ನು ರಷ್ಯಾದ ಬಗೆಗೂ ತಾಳುತ್ತ) ಶಾಂತಿಯಲ್ಲಿ ಇರಿಸಲು ಅವಕಾಶ ಕೊಡಲಾರರು. ಪಾಕಿಸ್ತಾನದ ಮೇಲಿನ ಹಿಡಿತ ನಿರಂತರ.
ಪುತಿನ್ಗೆ ರಷ್ಯಾವನ್ನು ಪ್ರಜಾಸತ್ತೆಯ ದಾರಿಯಲ್ಲಿ ಮುಂದರಿಸುವ ಶಕ್ತಿ ಎಷ್ಟು ಗಟ್ಟಿ ಎನ್ನುವುದು ಪ್ರಶ್ನಾರ್ಹ ವಿಷಯ. ಬುಧಶುಕ್ರರ ಕಾರಣದಿಂದ ಉತ್ಸಾಹದಿಂದ ಪುಟಿಯುತ್ತಿರುವ ಹಾಗೆ ಪುತಿನ್ ಕಾಣಿಸಿಕೊಳ್ಳುತ್ತಿದ್ದಾರೆ. ಆದರೂ, ಕಮ್ಯುನಿಸಂ ಹಿನ್ನೆಲೆಯಿಂದ ಬಂದ ಅವರಿಗೆ ಅವರು ಬಯಸಿದ ಸುಖವನ್ನು ಸದ್ಯ ಪ್ರಜಾಸತ್ತೆ ಇರುವ ರಷ್ಯಾದಲ್ಲಿ ಅಧಿಕಾರ ಇದ್ದರೂ ಹೊಂದಲಾಗುತ್ತಿಲ್ಲ. ರಷ್ಯಾ ಏನೇ ಇದ್ದರೂ ಪುತಿನ್ ಜಾತಕದಲ್ಲಿನ ರಾಹು ದೋಷದಿಂದಾಗಿ ಸದ್ಯ ಏಕಕಾಲದಲ್ಲಿ ಅಮೆರಿಕ, ಚೀನಾ, ಜಪಾನನ್ನು ವಿರೋಧಿಸುವ, ಬೆಂಬಲಿಸುವ ಎರಡೂ ರೀತಿಯ ಸರ್ಕಸ್ ನಡೆಸಲೇಬೇಕಾಗುತ್ತದೆ. ಭಾರತದಿಂದ ದೂರವಾಗುವ ಇಚ್ಛೆ ಇರದಿದ್ದರೂ, ಭಾರತ, ಅಮೆರಿಕವನ್ನು ಪಾಕಿಸ್ತಾನ ಮತ್ತು ಚೀನಾದ ಕಾರಣ ಇಟ್ಟುಕೊಂಡು ಸ್ನೇಹಹಸ್ತದಿಂದ ಆಲಿಂಗಿಸಿಕೊಳ್ಳುತ್ತಿರುವಾಗ ರಷ್ಯಾ ಅಧ್ಯಕ್ಷ ಪುತಿನ್ ಬರೀ ಕೆರಳುವುದಾಗುತ್ತದೆ.
ರಷ್ಯಾದ ಆರ್ಥಿಕ ಸಮಸ್ಯೆಗಳನ್ನು ಪುತಿನ್ ನಿಯಂತ್ರಿಸಲಾಗದ ಪರಿಸ್ಥಿತಿ ಇನ್ನೂ ಮುಂದುವರಿಯುತ್ತದೆ. ಈ ವರ್ಷದಲ್ಲಿ ರಷ್ಯಾ ಅಧ್ಯಕ್ಷರ ಅಪ್ರತ್ಯಕ್ಷ ಪ್ರಯತ್ನಗಳು ಅಮೆರಿಕ, ಚೀನಾ, ಭಾರತವನ್ನು ಕಂಗೆಡಿಸುವ ರೀತಿಯಲ್ಲಿ ಇದ್ದರೂ ಹಿಂದೊಮ್ಮೆ ತನ್ನದೇ ರಷ್ಯಾ ಒಕ್ಕೂಟದಿಂದ ಹೊರಬಿದ್ದು ಸ್ವತಂತ್ರವಾಗಿರುವ ರಾಷ್ಟ್ರಗಳೊಂದಿಗಿನ ಶೀತಲ ಯುದ್ಧದಿಂದಾಗಿ ಪರಮೋಚ್ಚ ಬಿಗಿಹಿಡಿತ ಸಾಧಿಸಲಾಗದ ಸ್ಥಿತಿ ಸ್ಪಷ್ಟ. ರಷ್ಯಾದಲ್ಲಿನ ಭಾರೀ ಆರ್ಥಿಕ ಕುಸಿತವನ್ನು ಸೆಪ್ಟೆಂಬರ್ ಹೊತ್ತಿಗೆ ಪುತಿನ್ ಎದುರಿಸಲೇಬೇಕಾಗಿ ಬರುತ್ತದೆ. ಜಾತಕದಲ್ಲಿರುವ ಚಂದ್ರ, ಪುತಿನ್ರನ್ನು ಟ್ರಂಪ್ ಜೊತೆಗಿನ ವೈಯಕ್ತಿಕ ಸಮಸ್ಯೆಗಳ ರೂಪದಲ್ಲಿ ಬಸವಳಿಸುವುದು ವರ್ಷದುದ್ದಕ್ಕೂ ಇದ್ದೇ ಇರುತ್ತದೆ.
ದಕ್ಷಿಣ ಚೀನಾ ಸಮುದ್ರದ ಕುರಿತಂತೆ ಚೀನಾ ಫಿಲಿಪ್ಪೀನ್ಸ್ ಜತೆ ತ್ವೇಷಮಯ ವಾತಾವರಣ ಇನ್ನೇನು ಯುದ್ಧವನ್ನೂ ಘೋಷಿಸುವ ಸ್ಥಿತಿಗೆ ಅಧ್ಯಕ್ಷ ಜಿನ್ಪಿಂಗ್ ಮುಂದಾಗುವ ಸಾಧ್ಯತೆ ಅವರ ಜಾತಕ ಕುಂಡಲಿಯ ಕುಜ ಗ್ರಹದಿಂದಾಗಿ ಸ್ಪಷ್ಟ. ಇರಾನ್ ನೆಪವೊಡ್ಡಿಕೊಂಡು ಚೀನಾದ ಯುದ್ಧೋನ್ಮಾದವನ್ನು ತಗ್ಗಿಸಲು ಶಸ್ತ್ರಾಸ್ತ್ರಗಳನ್ನು ಝುಳಪಿಸುವ ಹುಂಬತನಕ್ಕೆ ಟ್ರಂಪ್ ಮುಂದಾಗುವ ಸಾಧ್ಯತೆ ಜೂನ್ ತಿಂಗಳಲ್ಲಿ ಗೋಚರ. ವೈರಿಯ ಮನೆಯಲ್ಲಿರುವ ಸೂರ್ಯ (ಆ ದಿನಗಳಲ್ಲಿ ವೃಷಭ ರಾಶಿಯಲ್ಲಿ) ಟ್ರಂಪ್, ಜಿನ್ಪಿಂಗ್ ಇಬ್ಬರನ್ನೂ ವಿವೇಚನೆಗೆ ಮುಂದಾಗದ ಉದ್ರಿಕ್ತ ಸ್ಥಿತಿಯಲ್ಲಿ ಇರಿಸುತ್ತಾನೆ. ಜಪಾನ್, ಚೀನಾ, ಅಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ ದೇಶದಲ್ಲಿನ ತೀವ್ರ ಭೂಕಂಪನಗಳು ವರ್ಷವಿಡೀ ದೊಡ್ಡ ನಾಶಕ್ಕೆ ಕಾರಣವಾಗುತ್ತವೆ.
ಇಂಡೋನೇಶಿಯಾದ ಬಹುವಿಶಾಲವಾದ ಭೂಪ್ರದೇಶ ತೀವ್ರ ಭೂಕಂಪನ, ಅಗ್ನಿವಿಕೋಪಗಳಿಂದಾಗಿ ಬಾಧೆಗೆ ಬೀಳಲಿದೆ. ಅಮೆರಿಕದ ಕ್ಯಾಲಿಫೋರ್ನಿಯಾ, ಚಿಲಿ ದೇಶದ ಮಧ್ಯಭೂಭಾಗ ಭೂಕಂಪನದಿಂದ ತತ್ತರಿಸಲಿದೆ. ಸುಮಾರು ಫೆಬ್ರವರಿ 2020ರಿಂದ ನವೆಂಬರ್ ಮಧ್ಯಭಾಗದವರೆಗಿನ ಅವಧಿಯಲ್ಲಿ ಗುರುಗ್ರಹ ಮತ್ತು ಶನೈಶ್ಚರನ ನಡುವಣ ದ್ವಿದ್ವಾದಶ ಅಂಶಗಳ ತಿಕ್ಕಾಟ ಪ್ರಪಂಚವನ್ನು ಭೂಕಂಪನ ಮತ್ತು ಅಗ್ನಿಅವಘಡದಲ್ಲಿ ತತ್ತರಿಸುವಂತೆ ಮಾಡುತ್ತದೆ. ಪಾಕಿಸ್ತಾನದಲ್ಲಿ ಅರಾಜಕತೆ ಎದ್ದೇಳುವ ಸಾಧ್ಯತೆ ಅಧಿಕ. ಇಮ್ರಾನ್ ಪಾಲಿಗೆ ಚಂದ್ರ ಶನೈಶ್ಚರನನ್ನು ಮಣಿಸಿ ಕ್ರಿಕೆಟ್ ವರ್ಲ್ಡ್ಕಪ್ ಅನ್ನು 1992ರಲ್ಲಿ ಕೈಗಿರಿಸಿದನಾದರೂ ಈ ಬಾರಿ ಶುರುಗೊಳ್ಳುವ ಸಾಡೇಸಾತಿ ಶನಿಕಾಟದ ಸಂದರ್ಭದಲ್ಲಿ ಸಮಸ್ಯೆಗಳ ಸುಳಿಗಳ ನಡುವೆ ತತ್ತರಿಸುವುದು ನಿಶ್ಚಿತ. ರಾಹುವಿನ ಪಟ್ಟುಗಳು 2020ರ ಸೆಪ್ಟೆಂಬರ್ವರೆಗೂ ಕಾಡುವ ಶನೈಶ್ಚರನ ಕೈಗೆ ದಂಡಿಸುವ ದಂಡವಾಗುತ್ತದೆ.
ಭಾರತ ಸುರಕ್ಷಿತವೇ?
ಸದ್ಯದ ವರ್ತಮಾನದ ಉದ್ದಕ್ಕೂ ಭಾರತದಲ್ಲಿ ನರೇಂದ್ರ ಮೋದಿ ಬಹಳ ಮಹತ್ವದ ವ್ಯಕ್ತಿಯಾಗಿದ್ದಾರೆ. ದಿವ್ಯದ ಸಹಾಯದ ವಿನಾ 2014ರ ಅಥವಾ 2019ರ ಲೋಕಸಭಾ ಚುನಾವಣೆಗಳನ್ನು ಮೋದಿ ಗೆಲ್ಲಲು ಸಾಧ್ಯವೇ ಇರಲಿಲ್ಲ. 2020ರಲ್ಲೂ ಮೋದಿ ಬಲಾಢ್ಯರಾಗಿಯೇ ಇರುತ್ತಾರೆ. ಆದರೂ, ಅತ್ಯಂತ ನಿರ್ಣಾಯಕ ಸಂದರ್ಭದಲ್ಲಿ ಅವರ ಪಾಲಿಗೆ ಧೈರ್ಯಂ ಸರ್ವತ್ರ ಸಾಧನಂ ಎಂಬ ಮಾತು ನೆರವಿಗೆ ಬಾರದು. ಕಾಂಗ್ರೆಸ್ಸನ್ನು ತಡೆದು ನಿಲ್ಲಿಸಿದ್ದಾರೆ.
ಆದರೂ, ಒಮ್ಮೆ ಗೆಲುವಿನ ಸಂಭ್ರಮ ಕಾಣುವ ಹೊತ್ತಿಗೆ ಇನ್ನೊಂದೆಡೆ ಕಳಕೊಳ್ಳಬಾರದಿದ್ದ ರಾಜ್ಯಗಳಲ್ಲಿ ಚುನಾವಣೆಯ ಮಟ್ಟಿಗೆ ಪೂರ್ಣ ಹಿಡಿತ ಸಾಧ್ಯವಾಗುತ್ತಿಲ್ಲ. ಶನಿಕಾಟದಿಂದ (ಸಾಡೆಸಾತಿ) ಜನವರಿ ಕೊನೆಯ ಭಾಗದಲ್ಲಿ ಹೊರಬರುವರಾದರೂ ಭಾವನಾತ್ಮಕ ವಿಷಯಗಳಾಚೆ (ಕಾಶ್ಮೀರ, ರಾಮಮಂದಿರ ಇತ್ಯಾದಿ ಭಾವನಾತ್ಮಕ ವಿಚಾರಗಳಲ್ಲಿ ಚಂದ್ರ, ಕುಜನ ನೆರವುಗಳು ಸಿಗುತ್ತವೆ) ಮೋದಿಯವರನ್ನು ಸಮಸ್ಯೆಯಲ್ಲಿಡುತ್ತಾನೆ.
ಅಧಿಕ ವಿಚಾರಗಳಲ್ಲಿ ಗುರುಗ್ರಹದ ಬಲ ಸಿಗದಂತೆ ಶನೈಶ್ಚರನಿಂದ ಒತ್ತಡ 2020ರಲ್ಲೂ ಮುಂದುವರಿಯುತ್ತದೆ. ನರೇಂದ್ರ ಮೋದಿಯವರು ಚೌಕಿದಾರನಾಗಿ ಮಿಂಚುವುದು ಸುಲಭದ ಕೆಲಸವಾಗಲಾರದು. ಬುದ್ಧಿವಂತರಂತೂ ಹೌದು. ಆದರೂ, ಕೇತುವು ಅಷ್ಟಮ ಸ್ಥಾನದ ಕರ್ಮಸ್ಥಾನದ ಅಧಿಪರಾದ, ಕ್ರಮವಾಗಿ ಬುಧ, ಸೂರ್ಯರನ್ನು ಸರ್ಪಬಂಧನದಲ್ಲಿಡುತ್ತಾನೆ. ಮೋದಿಯವರ ಸಲಹೆಗಾರರು ಅವರ ಇಷ್ಟಗಳನ್ನು ಗ್ರಹಿಸಿ ವಾಸ್ತವವನ್ನು ತಿಳಿಸಲಾಗದೆ ಇರುವ ಪರಿಸ್ಥಿತಿಯಲ್ಲಿ ಕುಗ್ಗಿರಬಾರದು. ಇದರಿಂದ ಮೋದಿಯವರ ಉನ್ನತಿಗೆ ಮಿತಿ ತರುವಂತಾಗುವುದು ನಿಶ್ಚಿತ. ಆರ್ಥಿಕ ವಿಚಾರದಲ್ಲಿ ಯಶಸ್ಸನ್ನು ಕೊಡಲಾರೆ ಎಂದು ಶನೈಶ್ಚರ ಬಿಂಬಿಸುತ್ತಲೇ ಇದ್ದರೂ, ಸೂಕ್ತ ಸಲಹೆಗಾರರನ್ನು ಆಯ್ಕೆ ಮಾಡಿಕೊಂಡಲ್ಲಿ 2020ರಲ್ಲಿ ಭಾರತವನ್ನು ಆರ್ಥಿಕವಾಗಿ ಮುನ್ನಡೆಸಲು ಈಗಲೂ ಕಾಲ ಮಿಂಚಿಲ್ಲ.
ವಿದೇಶಾಂಗ ನೀತಿ ಮೇಲ್ಪದರಿನ ಶೋಭೆಯಾಗಿ ನಿಲ್ಲುವ ಅಪಾಯದಿಂದ ಮೋದಿ ದೂರವಾಗಲು ಚಂದ್ರ ಸಹಕರಿಸುತ್ತಾನೆ. ಆದರೆ, ಒಂದು ಮಿತಿಯನ್ನು ದಾಟಿಸುವತ್ತ ಪ್ರೋತ್ಸಾಹಿಸುವ ಕುಜನು ಮೋದಿಯವರಿಗೆ ಕಾಮಧೇನುವಾದರೂ, ರಾಹು ಅಡ್ಡಗಾಲುಗಳನ್ನು ಇಟ್ಟೇ ಇಡುತ್ತಾನೆ. ರಾಹುಲ್ ಗಾಂಧಿ ಮುತ್ಸದ್ಧಿಯಾಗಿ ಮೈಕೊಡವಿ ಎದ್ದುನಿಲ್ಲುವುದೂ ರಾಹುವಿನಿಂದಾಗಿ ಅಸಾಧ್ಯ. ಆದರೂ, ಶನೈಶ್ಚರನ ಕರುಣೆಯೊಂದು ಅಲೌಕಿಕ ಸಿದ್ಧಿಯನ್ನು ರಾಹುಲ್ ಪಾಲಿಗೆ ಒದಗಿಸಬಹುದು.
ಶನೈಶ್ಚರ ರಾಹುಲ್ ಪಾಲಿನ ದಿವ್ಯ ಒಂದನ್ನು ಕಡೆದು ನಿಲ್ಲಿಸಲು 2020ರಲ್ಲಿ ಸಮರ್ಥನಲ್ಲದಿದ್ದರೂ ಆನಂತರದ ದಿನಗಳಿಗಾಗಿ ಪೂರ್ವವೇದಿಕೆಯೊಂದನ್ನು ಕಡೆದು ನಿಲ್ಲಿಸಲು ಕ್ರಿಯಾಶೀಲನಾಗುತ್ತಾನೆ. ಅಮಿತ್ ಷಾ ರಾಹುವಿನ ತೊಂದರೆ ಅಲ್ಲದಿದ್ದರೆ ಹೆಚ್ಚಿನ ಗೆಲುವು ಸಾಧಿಸಬಹುದಿತ್ತು. ಸೂರ್ಯ ಶುಕ್ರರ ಪರಿವರ್ತನ ಯೋಗದಿಂದಾಗಿ (ಇದು ಸೂಕ್ತ ಯೋಗ ಅಲ್ಲ) ತಾಪತ್ರಯ ಎದುರಿಸುವುದು ಸಾಧ್ಯ. ಮುತ್ಸದ್ಧಿತನ ಪ್ರಶ್ನಾರ್ಹವಾಗದಂತಿರಲಿ. ಭೂಕಂಪ, ಅತಿವೃಷ್ಟಿ, ಅಗ್ನಿದುರಂತಗಳು ಹೆಚ್ಚಲಿವೆ. ಸಾಮರಸ್ಯಕ್ಕೆ ಕೊಳ್ಳಿ ಇಡುವ ಮನಸ್ಸುಗಳು ಕ್ರಿಯಾಶೀಲವಾಗಿರುತ್ತವೆ. ಪಾಕ್ ಆಕ್ರಮಿತ ಕಾಶ್ಮೀರದ ಬಗೆಗಿನ ಯೋಜನೆಗಳು, ದಾವೂದ್ ನಿಗ್ರಹ, ಚೀನಾದ ಕುಮ್ಮಕ್ಕಿನಿಂದ ಇಮ್ರಾನ್ ಖಾನ್ ನಡೆಸಲೇಬೇಕಾಗಿ ಬರುವ ದಾಳಿಗಳು ಭಾರತಕ್ಕೆ ಸವಾಲುಗಳನ್ನು ತರುತ್ತವೆ. ಅನಿವಾರ್ಯವಾಗಿ ಮಿತ್ರರಾದ ರಾಷ್ಟ್ರಗಳು ಭಾರತಕ್ಕೆ ಸಂಜೀವಿನಿಯಾಗಲಾರವು.
ಕರ್ನಾಟಕ ಸುಭದ್ರವೇ?
ಪ್ರಶ್ನಾತೀತ ನಾಯಕನಂತೆ ಕಾಣಿಸಿಕೊಳ್ಳುವ ಬಹುಬಲಾಢ್ಯತೆ ಯಡಿಯೂರಪ್ಪನವರಿಗಿದೆ. ಶನಿಕಾಟ ತಪ್ಪಿದರೂ ಚಂದ್ರನ ಕ್ಷೀಣತೆಯಿಂದಾಗಿ ಬಿಕ್ಕಳಿಕೆಗಳಿವೆ. ಕೇತು ಹಾಗೂ ಕುಜ ಗ್ರಹಗಳ ಪ್ರಚೋದನೆಯಿಂದ ಶೀಘ್ರವಾಗಿ ಬರುವ ಕೋಪವನ್ನು ಜೂನ್ 2020ರವರೆಗೆ ನಿಗ್ರಹಿಸಿಕೊಂಡರೆ ನಂತರ ಬಲಿಷ್ಠರಾಗುತ್ತಾರೆ. ಉತ್ತಮ ಆಡಳಿತ ನೀಡಲು ಶುಕ್ರನ (ದೇವಿ ಶ್ರೀ ರಾಜರಾಜೇಶ್ವರಿಯ) ಪೂರ್ಣಾನುಗ್ರಹವಿದೆ. ಕರ್ನಾಟಕ ಹೆಚ್ಚಿನದನ್ನು ನಿರೀಕ್ಷಿಸುವ ಶಕ್ತಿಯನ್ನು ಈಶ್ವರಪ್ಪ ಶನೈಶ್ಚರನ ನೆರವಿನಿಂದ ಕ್ರೋಡೀಕರಿಸಿಕೊಳ್ಳಬಹುದಾಗಿದೆ.
ಬೊಮ್ಮಾಯಿಯವರ ಪಾಲಿಗೆ ಶುಕ್ರನು ಬಲಾಢ್ಯನಾಗಿ ಹೊರಹೊಮ್ಮಲಿದ್ದು ವರ್ಚಸ್ಸನ್ನು ಹೆಚ್ಚಿಸಲಿದ್ದಾನೆ. ಡಿ.ಕೆ. ಶಿವಕುಮಾರ್ ಪ್ರಬುದ್ಧತೆಯನ್ನು ವಿಸ್ತರಿಸಿಕೊಳ್ಳುವಲ್ಲಿ ಬುಧಸೂರ್ಯರ ಪಾತ್ರ ದೊಡ್ಡದೇ ಇದೆ. ಶನೈಶ್ಚರ ಎರಡೂವರೆ ವರ್ಷಗಳಿಂದ ಶಿವಕುಮಾರ್ರನ್ನು ಹಣ್ಣು ಮಾಡಿದ್ದಾನೆ. ಗುರುವಿನೊಂದಿಗೆ ಸೇರಿ ಶನೈಶ್ಚರನು ನಿರ್ವಿುಸಿದ ಧರ್ಮಕರ್ವಧಿಪ ಯೋಗ ಒಂದು ಶಕ್ತಿ ಹೌದು. ಇದರಿಂದಾಗಿಯೇ ಬೆಳೆದರು. ಆದರೆ, ಗುರು ಹಾಗೂ ಕುಜರ ದುರ್ಬಲ ಸ್ಥಿತಿ ಶನೈಶ್ಚರ ಹಾಗೂ ಕುಜರ ನಡುವಣ ಮುಗಿಯದ ನಿರಂತರ ಯುದ್ಧ ಶಿವಕುಮಾರ್ ಅವರನ್ನು ಒಂದು ಮಿತಿಗೂ ತಳ್ಳಿದೆ. ಬಹುದೊಡ್ಡ ಜಾಗೃತ ಶಕ್ತಿ ಅವರನ್ನು ಕಾಪಾಡಬೇಕು. ಬಹುಕಾಲ ಅಧಿಕಾರದ ಅವಧಿ ಇರದು ಎಂಬ ಮಾತು ದೇವೇಗೌಡರಿಗೂ, ಕುಮಾರಸ್ವಾಮಿಯವರಿಗೂ ಗೊತ್ತು.
ಚಂದ್ರ, ಶುಕ್ರ, ಕೇತು ದೋಷಗಳು ಇಂದಿನ ಸ್ಥಿತಿಗೆ ಗೌಡರನ್ನು ತಂದು ನಿಲ್ಲಿಸಿವೆ. ಸಾಡೆಸಾತಿ ಕಾಟ ಫೆಬ್ರವರಿಯಿಂದ ಗೌಡರಿಗೆ ಪ್ರಾರಂಭ. ಸದ್ಯ ಮಂಕಾಗಿರುವ ಸಿದ್ದರಾಮಯ್ಯ ಅವರನ್ನು ಬಲಿಷ್ಠಗೊಳಿಸಲು 2020ರಲ್ಲಿ ಸೂರ್ಯನ ಶಕ್ತಿ ಸಾಕಾಗದು. ಮಳೆಯ ದೃಷ್ಟಿಯಿಂದ ಈ ವರ್ಷ ಕರ್ನಾಟಕಕ್ಕೆ ಸುರಕ್ಷಿತ ದಿನಗಳು. ವಿದ್ಯುತ್ತು, ನೀರು, ರಸ್ತೆ, ಮನೆಗಳ ವಿಚಾರವಾಗಿ ಯಡಿಯೂರಪ್ಪ ಕರ್ನಾಟಕವನ್ನು ಸುಸ್ಥಿತಿಗೆ ತಂದರಾದರೆ (ಸಾಧ್ಯವಿದೆ), ಕಾಲೆಳೆಯುವ ಶಕ್ತಿಯನ್ನು ನಿಯಂತ್ರಿಸುವುದು ಸಾಧ್ಯವಾದರೆ (ಸಾಧ್ಯವಿದೆ), ಜೂನ್ ತಿಂಗಳ ಬಳಿಕ ಅವರು ಸುಭದ್ರ. ಅಗ್ನಿ ವಿಕೋಪ, ಉತ್ತರ, ಕಲ್ಯಾಣ ಕರ್ನಾಟಕ ಭಾಗದಲ್ಲಿನ ಭೂಕಂಪನ ಸಮಸ್ಯೆ ತರಬಲ್ಲವು.
(ಲೇಖಕರು ಜ್ಯೋತಿಷ್ಯ ವಿಜ್ಞಾನ ಸಂಶೋಧಕರು ಹಾಗೂ ಸಾಹಿತಿ)