ಆದಿಯೋಗಿ ಸನ್ನಿಧಿಯಲ್ಲಿ ಮಹಾಶಿವರಾತ್ರಿ

ಈಶ ಯೋಗಕೇಂದ್ರದ ಮುಖ್ಯ ಆಕರ್ಷಣೆ 112 ಅಡಿ ಎತ್ತರದ ಆದಿಯೋಗಿಯ ಪ್ರತಿಮೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2017ರಲ್ಲಿ ಇದನ್ನು ಅನಾವರಣಗೊಳಿಸಿದ್ದರು. ಧ್ಯಾನಲಿಂಗವು ಈಶ ಯೋಗಕೇಂದ್ರದ ಮತ್ತೊಂದು ಆಕರ್ಷಣೆ. ದೈವೀಶಕ್ತಿಯ ಸ್ತ್ರೀತ್ವದ ಅಭಿವ್ಯಕ್ತಿ ಎನಿಸಿದ ಲಿಂಗಭೈರವಿಯೂ ಯೋಗಕೇಂದ್ರದ ಸನಿಹದಲ್ಲೇ ಪ್ರತಿಷ್ಠಿತಳಾಗಿದ್ದಾಳೆ. ಇಲ್ಲಿ ಜರುಗಿದ ಮಹಾಶಿವರಾತ್ರಿಯ ಪಕ್ಷಿನೋಟವಿದು.

|ರವೀಂದ್ರ ಮಾವಖಂಡ

ಭಾರತೀಯ ಸಂಸ್ಕೃತಿಯಲ್ಲಿ ಶಿವನಿಗೂ, ಮಹಾಶಿವರಾತ್ರಿಗೂ ಬಹು ವಿಶೇಷವಾದ ಸ್ಥಾನಮಾನವಿದೆ. ಬಹುತೇಕ ಹಬ್ಬಗಳ ಆಚರಣೆ ಹಗಲಿನಲ್ಲಿ ನಡೆದರೆ, ಇದು ರಾತ್ರಿಯೇ ನಡೆಯುತ್ತದೆ. ವರ್ಷದ ಅತ್ಯಂತ ಕತ್ತಲೆಯ ರಾತ್ರಿಯಾದ ಇದು ಆದಿಯೋಗಿಯೆಂದು ಪರಿಗಣಿಸಲ್ಪಡುವ ಶಿವನ ಅನುಗ್ರಹವನ್ನು ಕೊಂಡಾಡುವ ರಾತ್ರಿ. ಈ ದಿನದಂದು ಗ್ರಹಗಳ ವಿಶಿಷ್ಟ ಸ್ಥಾನಗಳಿಂದಾಗಿ ಮಾನವನ ದೇಹವ್ಯವಸ್ಥೆಯೊಳಗಿನ ಶಕ್ತಿಯು ನೈಸರ್ಗಿಕವಾಗಿಯೇ ಮೇಲ್ಮುಖವಾಗಿ ಹರಿಯುತ್ತದೆ. ರಾತ್ರಿಯಿಡಿ ಬೆನ್ನುಹುರಿಯನ್ನು ನೇರವಾಗಿರಿಸಿಕೊಂಡು ಧ್ಯಾನ ಮಾಡುವುದು, ಎಚ್ಚರವಾಗಿರುವುದು ನಮ್ಮ ಭೌತಿಕ ಮತ್ತು ಆಧ್ಯಾತ್ಮಿಕ ಕ್ಷೇಮಕ್ಕೆ ಅತ್ಯಂತ ಪ್ರಯೋಜನಕಾರಿ. ಈ ನಿಟ್ಟಿನಲ್ಲಿ ಕೊಯಮತ್ತೂರಿನ ಈಶ ಯೋಗಕೇಂದ್ರದ ಪರಿಕ್ರಮ ಅತ್ಯಂತ ಮುಖ್ಯವಾದುದು. ಈ ಯೋಗಕೇಂದ್ರದ ಸಂಸ್ಥಾಪಕ ದಾರ್ಶನಿಕ, ಪ್ರಸಿದ್ಧ ಆಧ್ಯಾತ್ಮಿಕ ನಾಯಕ, ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ, ಆದಿಯೋಗಿಯ ಸಾನ್ನಿದ್ಧ್ಯಲ್ಲಿ ಇಪ್ಪತೆôದನೆಯ ವರ್ಷದ ಮಹಾಶಿವರಾತ್ರಿಯ ಆಚರಣೆ, ಜಾಗರಣೆ ಅಭೂತಪೂರ್ವವಾಗಿ ನೆರವೇರಿತು. ಮುಖ್ಯ ಅತಿಥಿಗಳಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಸಿಗಳನ್ನು ನೆಡುವ ಮೂಲಕ ಪುಲ್ವಾಮದ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಈಶ ಫೌಂಡೇಶನ್ ಮೂಲಕ ಸದ್ಗುರು ಅವರು ನಡೆಸುತ್ತಿರುವ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು.

ಕಲಾವಿದರಿಗೆ ತಮ್ಮ ಕಲೆಯನ್ನು ಪ್ರಸ್ತುತಪಡಿಸಲು ಮತ್ತು ಕಲಾಸಕ್ತರಿಗೆ ಈ ಕಲೆಗಳನ್ನು ಆಸ್ವಾದಿಸಲು ಮಹಾಶಿವರಾತ್ರಿಯು ವೇದಿಕೆಯನ್ನೊದಗಿಸಿತು. ಸಂಜೆ 6ಕ್ಕೆ ಪಂಚಭೂತ ಆರಾಧನೆಯ ಮೂಲಕ ಪ್ರಾರಂಭವಾದ ಮಹಾಶಿವರಾತ್ರಿಯ ಕಾರ್ಯಕ್ರಮ ಮುಗಿದಿದ್ದು ಬೆಳಗ್ಗೆ ಆರಕ್ಕೆ ಸದ್ಗುರು ಅವರ ಶಿವ ಪ್ರಾರ್ಥನೆಯೊಂದಿಗೆ. ಈ ಆಚರಣೆಯಲ್ಲಿ ಭಜನೆ, ಮಧ್ಯರಾತ್ರಿಯ ಧ್ಯಾನ, ಸತ್ಸಂಗ, ನೃತ್ಯ, ಸಂಗೀತ ಕಾರ್ಯಕ್ರಮಗಳಿದ್ದವು. ಇಶಾ ಶರ್ವಾನಿ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ; ಫಕೀರಾ ಖೇತಾ ಮತ್ತು ತಂಡದವರಿಂದ ರಾಜಸ್ಥಾನಿ ಜಾನಪದ ಸಂಗೀತ; ಖ್ಯಾತ ಗಾಯಕ ಕಾರ್ತಿಕ್ ಅವರ ಪ್ರಸ್ತುತಿ; ಹರಿಹರನ್ ಮತ್ತು ಸೌಂಡ್ಸ್ ಆಫ್ ಈಶದವರ ಪ್ರಸ್ತುತಿ; ಸದ್ಗುರುಗಳ ಪ್ರವಚನ; ಸದ್ಗುರು ಅವರೇ ನಡೆಸಿಕೊಟ್ಟ ಮಧ್ಯರಾತ್ರಿಯ ಧ್ಯಾನ; ಅಜರ್ಬೆಜಾನಿ ಡ್ರಮ್ಮರ್ಸ್ ತಂಡದ ಪ್ರಸ್ತುತಿ; ಅಮಿತ್ ತ್ರಿವೇದಿ ತಂಡದ ಗಾಯನ ಕಾರ್ಯಕ್ರಮ ; ಘಟಂ ಕಾರ್ತಿಕ್ ಅವರ ತಾಳವಾದ್ಯ ಪ್ರಸ್ತುತಿ – ಹೀಗೆ ಪ್ರಖ್ಯಾತ ಕಲಾವಿದರ ಕಾರ್ಯಕ್ರಮಗಳು ನಡೆದವು. ಸದ್ಗುರುಗಳ ಪ್ರವಚನ ಏಕಕಾಲದಲ್ಲಿ ಹಿಂದಿ, ತಮಿಳು ಸೇರಿದಂತೆ 14 ಭಾಷೆಗಳಲ್ಲಿ ಭಾಷಾಂತರವಾಗುತ್ತಿತ್ತು. ರಾತ್ರಿಯಿಡೀ ನಡೆದ ಆಶ್ರಮದ 25ನೇ ವರ್ಷದ ಈ ವಿಶಿಷ್ಟವಾದ ಮಹಾಶಿವರಾತ್ರಿ ಆಚರಣೆ ಮತ್ತು ಸತ್ಸಂಗದಲ್ಲಿ ದೇಶವಿದೇಶಗಳ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿಗಳು, ಪಿಯೂಷ್ ಗೋಯಲ್ ಸೇರಿದಂತೆ ಹಲವು ಕೇಂದ್ರ-ರಾಜ್ಯ ಸಚಿವರು, ಸುಹಾಸಿನಿ, ತಮನ್ನಾ, ಜೂಹಿ ಚಾವ್ಲಾ, ರಾಕೇಶ್ ಓಂಪ್ರಕಾಶ್ ಮೆಹ್ರಾ, ಮೋಹಿತ್ ಚೌಹಾನ್, ಪ್ರಸೂನ್ ಜೋಶಿ, ಅದಿತಿ ರಾವ್, ಕಾಜಲ್ ಅಗರವಾಲ್, ರಾಣಾ ದಗ್ಗುಬಾಟಿ ಸೇರಿದಂತೆ ಹೆಸರಾಂತ ಬಾಲಿವುಡ್ ಗಾಯಕರು, ನಿರ್ದೇಶಕರು ಪಾಲ್ಗೊಂಡಿದ್ದರು. ಆನ್​ಲೈನ್ ಮೂಲಕ ಕೋಟ್ಯಂತರ ಜನ ವೀಕ್ಷಿಸಿದರು. ಎಲ್ಲೂ ನೂಕುನುಗ್ಗಲಾಗದಂತೆ, ಗಲಾಟೆ ಇತ್ಯಾದಿ ನಡೆಯದಂತೆ ನೋಡಿಕೊಂಡ ಸ್ವಯಂಸೇವಕರ ಪರಿಶ್ರಮ ಶ್ಲಾಘನಾರ್ಹ. ವೆಳ್ಳಿಯಂಗಿರಿ ಬೆಟ್ಟದ ತಪ್ಪಲಿನಲ್ಲಿರುವ ಈಶ ಯೋಗಕೇಂದ್ರವು ಕೊಯಮತ್ತೂರಿನಿಂದ 30 ಕಿ.ಮೀ. ದೂರದಲ್ಲಿದೆ. ಕೊಯಮತ್ತೂರಿನಿಂದ ಇಲ್ಲಿಗೆ ಬರಲು ಸಿಟಿಬಸ್, ಟ್ಯಾಕ್ಸಿಗಳೂ ದೊರೆಯುತ್ತವೆ.