ಮದ್ದೂರು: ತಾಲೂಕಿನಲ್ಲೇ ಪ್ರಪ್ರಥಮ ಬಾರಿಗೆ ಭಾರತೀಯ ಸೈನಿಕರ ಶ್ರೇಯೋಭಿವೃದ್ಧಿಗಾಗಿ, ದೇಶದ ಹಿತಕ್ಕಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ 100 ಜನ ವೇದ ವಿದ್ವಾಂಸರಿಂದ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ರುದ್ರ ಘನ ಪಾರಾಯಣ ಹಾಗೂ ಕಾಶಿ ವಿಶ್ವನಾಥನಿಗೆ ಮಹಾ ರುದ್ರಾಭಿಷೇಕ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮ ಅಂಗವಾಗಿ ಬೆಳಗ್ಗೆ 9 ಗಂಟೆಯಿಂದ ದೇಗುದಲ್ಲಿ ರುದ್ರ ಘನ ಪಾರಾಯಣ, ಮಹಾ ರುದ್ರಾಭಿಷೇಕ, ಹಾಲಿನ ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ದೇವರನ್ನು ಪೂಜಿಸುವುದರಿಂದ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲಸುತ್ತದೆ. ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ದೇವರ ದಯೇಯಿಂದ ಎಲ್ಲರಿಗೂ ಒಳ್ಳೆಯದಾಗಿ ಹಾಗೂ ದೇಗುಲದಲ್ಲಿ ಭಾರತೀಯ ಸೈನಿಕರ ಶ್ರೇಯೋಭಿವೃದ್ಧಿಗಾಗಿ, ದೇಶದ ಹಿತಕ್ಕಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ 100 ಜನ ವೇದ ವಿದ್ವಾಂಸದರಿಂದ ರುದ್ರ ಘನ ಪಾರಾಯಣ ಹಾಗೂ ಕಾಶಿ ವಿಶ್ವನಾಥನಿಗೆ ಮಹಾ ರುದ್ರಾಭಿಷೇಕ ಮಾಡಿಸುತ್ತಿರುವುದು ಮೆಚ್ಚುಗೆಯ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ಪುರೋಹಿತ ಡಾ.ಎಂ.ಎಸ್.ರಾಘವೇಂದ್ರ ರಾವ್ ಮಾತನಾಡಿ, ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಲೋಕ ಕಲ್ಯಾಣಕ್ಕಾಗಿ 100 ಜನ ವಿದ್ವಾಂಸರಿಂದ ರುದ್ರ ಘನ ಪಾರಾಯಣ ಮಾಡಿಸುವ ಮೂಲಕ ಇತಿಹಾಸ ನಿರ್ಮಾಣವಾಗಿದೆ. ಸರ್ವರಿಗೂ ಒಳ್ಳೆಯದಾಗಲಿ, ಎಲ್ಲೆಡೆ ಶಾಂತಿ, ನೆಮ್ಮದಿ ನೆಲಸಲಿ ಎಂಬ ಉದ್ದೇಶದಿಂದ ಈ ಧಾರ್ಮಿಕ ಕಾರ್ಯಕ್ರಮವನ್ನು ಬೆಂಗಳೂರಿನ ಶ್ರೀನಿವಾಸಪುರ ಓಂಕಾರಶ್ರಮ ಮಹಾಸಂಸ್ಥಾನದ ಡಾ.ಆಚಾರ್ಯ ಮಹಾಮಂಡಲೇಶ್ವರ ಶ್ರೀ ಮಧುಸೂಧನಾನಂದಪುರಿ ಸ್ವಾಮಿಗಳು ನೇತೃತ್ವ ವಹಿಸಿದ್ದರು.
ಪಟ್ಣಣದ ಸೇರಿದಂತೆ ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಆಧುನಿಕ ಶ್ರವಣಕುಮಾರ (ಕೃಷ್ಣಕುಮಾರ), ಹಿಂದು ಸಂಘಟನೆ ಮುಖಂಡ ಕೆ.ಟಿ.ನವೀನ್‌ಕುಮಾರ್, ಶಂಕರ ಸಭಾ ಅಧ್ಯಕ್ಷ ಗುರುಸ್ವಾಮಿ, ತಾಲೂಕು ಬ್ರಾಹ್ಮಣ ಮಹಾ ಸಭಾದ ಕಾರ್ಯದರ್ಶಿ ಸತ್ಯನಾರಾಯಣರಾವ್, ಸಹಾಯ ಅರ್ಚಕ ನರಸಿಂಹಪ್ರಸಾದ್, ಸಾಹಿತಿ ಟಿ.ಎಸ್.ಪ್ರಭಾಕರ್‌ರಾವ್ ಇದ್ದರು.