More

    ಭುವನ್ ಕೈಯಲ್ಲಿ ಮಾಫಿ ರೇಂಜರ್

    ಬಿಗ್​ಬಾಸ್ ಖ್ಯಾತಿಯ ನಟ ಭುವನ್ ಪೊನ್ನಣ್ಣ ಈಗ ರೌಡಿ ಆಗಿದ್ದಾರೆ. ಕೈಯಲ್ಲಿ ಮಚ್ಚು ಹಿಡಿದು, ಬಾಯಲ್ಲಿ ಬೀಡಿ ಹೊತ್ತಿಸಿ ಗತ್ತು ಮೆರೆಯುತ್ತಿದ್ದಾರೆ. ಬರೀ ಇದಷ್ಟೇ ಅಲ್ಲ, ಮೆಕ್ಯಾನಿಕ್ ಕೂಡ ಆಗಿದ್ದಾರೆ. ಇದೇನಪ್ಪ ಹೊಸ ವರ್ಷಕ್ಕೆ ಭುವನ್ ಇದನ್ನೆಲ್ಲ ಶುರು ಮಾಡಿದ್ರಾ? ಎಂದು ಹುಬ್ಬೇರಿಸಬೇಡಿ. ಇಷ್ಟೆಲ್ಲ ಬದಲಾವಣೆ ಆಗಿದ್ದು ಸಿನಿಮಾ ಸಲುವಾಗಿ. ಹೌದು, ಹೊಸ ವರ್ಷಕ್ಕೆ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳಲ್ಲಿ ಭುವನ್ ಕಾಣಿಸಿಕೊಳ್ಳುತ್ತಿದ್ದಾರೆ. ಆ ಚಿತ್ರಗಳೇ ‘ಮಾಫಿ’ ಮತ್ತು ‘ರೇಂಜರ್’. ಆ ಎರಡು ಸಿನಿಮಾಗಳ ಪಾತ್ರಗಳ ವಿವರಣೆಯೇ ಈ ಪೀಠಿಕೆ.

    ಈಗಾಗಲೇ ತೆಲುಗಿನಲ್ಲಿ ಹಲವು ಸಿನಿಮಾಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ ಅನುಭವ ಇರುವ ಮಾರುತಿ, ‘ಮಾಫಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರೌಡಿ ಲುಕ್​ನಲ್ಲಿ ಭುವನ್ ಕಾಣಿಸಿಕೊಳ್ಳಲಿದ್ದು, ಹೊಸ ವರ್ಷಕ್ಕೆ ಪೋಸ್ಟರ್ ಸಹ ಬಿಡುಗಡೆ ಆಗಿದೆ. ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಳ್ಳಾರಿ ಸುತ್ತಮುತ್ತ ಈ ಚಿತ್ರದ ಶೂಟಿಂಗ್ ನಡೆಯಲಿದೆ. ‘ಹಿಂದಿಯಲ್ಲಿ ‘ಗ್ಯಾಂಗ್ಸ್ ಆಫ್ ವಸೇಪುರ್’ ಸಿನಿಮಾ ಮೂಡಿಬಂದ ಶೈಲಿಯಲ್ಲಿ ಈ ಸಿನಿಮಾ ತಯಾರಾಗಲಿದೆ. ತೆಲುಗು ಸಿನಿಮಾಗಳಂತೆ ಹೀರೋಯಿಸಂಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನನ್ನ ಪಾತ್ರವೂ ಅಷ್ಟೇ ವಿಭಿನ್ನವಾಗಿದೆ’ ಎಂಬುದು ಭುವನ್ ಮಾತು.

    ಅದೇ ರೀತಿ ಕನ್ನಡ ಮತ್ತು ತಮಿಳಿನಲ್ಲಿ ಸಿದ್ಧವಾಗುತ್ತಿರುವ ‘ರೇಂಜರ್’ ಸಿನಿಮಾದಲ್ಲಿ ಕೂಡ ಭುವನ್ ನಾಯಕ. ತಮಿಳಿನಲ್ಲಿ ‘ವಜೀರನ್’ ಶೀರ್ಷಿಕೆಯಲ್ಲಿ ಚಿತ್ರ ತಯಾರಾಗಲಿದ್ದು, ‘ವಜೀರನ್’ ಅಂದರೆ ಕನ್ನಡದಲ್ಲಿ ವೀರ ಎಂದರ್ಥ. ರಾಘವ್ ನಿರ್ದೇಶನದ ಈ ಚಿತ್ರದಲ್ಲಿ ಭುವನ್ ಪಾತ್ರ ಅಷ್ಟೇ ವಿಶೇಷವಾಗಿದೆ. ವೃತ್ತಿಯಲ್ಲಿ ಕಥಾನಾಯಕ ಮಾಮೂಲಿ ಬೈಕ್ ಮೆಕ್ಯಾನಿಕ್. ಆದರೆ, ಕಳ್ಳನಾಗಿಯೂ ಕಾಣಿಸಿಕೊಳ್ಳುತ್ತಾನೆ. ಬೈಕ್ ಲೋನ್ ಕಟ್ಟದೆ, ಹಾಗೆ ಉಳಿಸಿಕೊಂಡಿರುವವರ ಬೈಕ್ ಎಗರಿಸಿಕೊಂಡು ಹೋಗುವುದೇ ನಾಯಕನ ಕೆಲಸ. ಇದರ ಜತೆಗೆ ಪೊಲಿಟಿಕಲ್ ಡ್ರಾಮಾ ಸಹ ಚಿತ್ರದ ಹೈಲೈಟ್ ಅಂತೆ. ಚೆನ್ನೈ, ಬೆಂಗಳೂರು, ಚಿಕ್ಕಮಗಳೂರು, ಶ್ರೀಲಂಕಾದಲ್ಲಿ ಸಿನಿಮಾ ಶೂಟಿಂಗ್ ಮಾಡಿಕೊಳ್ಳಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

    ರಾಂಧವ ಸಿನಿಮಾ ರಿಲೀಸ್ ಬಳಿಕ ಒಳ್ಳೇ ಕಥೆಗಳಿಗೆ ತುಂಬ ಕಾದೆ. ಹೀಗಿರುವಾಗಲೇ ‘ಮಾಫಿ’ ಮತ್ತು ‘ರೇಂಜರ್’ ಸಿನಿಮಾ ಕಥೆ ತುಂಬ ಇಷ್ಟವಾದವು. ಎರಡು ಟೀಮ್ಲ್ಲಿ ಎಲ್ಲರೂ ಯುವಕರೇ ಆಗಿರುವುದರಿಂದ ಸಿನಿಮಾ ಒಪ್ಪಿಕೊಂಡೆ. ಎರಡೂ ಸಿನಿಮಾಗಳಲ್ಲಿ ನನ್ನ ಪಾತ್ರವೂ ಅಷ್ಟೇ ವಿಶೇಷತೆಯಿಂದ ಕೂಡಿದೆ.

    | ಭುವನ್ ಪೊನ್ನಣ್ಣ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts