ನೆಲಮಂಗಲ: ಮದ್ಯವ್ಯಸನಿಗಳ ಮನಃಪರಿವರ್ತನೆ ಮಾಡಿ ಕುಟುಂಬಕ್ಕೆ, ಸಮಾಜಕ್ಕೆ ಹೊರೆಯಾಗುವುದನ್ನು ತಪ್ಪಿಸುವಲ್ಲಿ ಮದ್ಯವ್ಯರ್ಜನ ಶಿಬಿರ ಸಹಕಾರಿ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮದ್ಯವ್ಯರ್ಜನ ಶಿಬಿರ ವ್ಯವಸ್ಥಾಪನಾ ಶಿಬಿರ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ 1,453ನೇ ಮದ್ಯವ್ಯರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಆರೋಗ್ಯ ತಪಾಸಣೆ, ವ್ಯಾಯಾಮ, ಭಜನೆ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಕೌಟುಂಬಿಕ ಸಲಹೆ ಕೊಡುವ ಮೂಲಕ ಹಲವು ವರ್ಷಗಳಿಂದಲೂ ಮದ್ಯಸೇವನೆ ಅಮಲಿನಲ್ಲಿಯೇ ಬದುಕಿದ್ದ 75ಕ್ಕೂ ಹೆಚ್ಚು ಮಂದಿ ಮದ್ಯವ್ಯಸನಿಗಳನ್ನು ಮದ್ಯಪಾನ ಮುಕ್ತರನ್ನಾಗಿಸಿದ ಜನಜಾಗೃತಿ ವೇದಿಕೆ ಹಾಗೂ ಇಂತಹ ಸತ್ಕಾರ್ಯಕ್ಕೆ ಕೈಜೋಡಿಸಿರುವ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ವಿ.ರಾಮಸ್ವಾಮಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದಲೂ ಮಾಡಲಾಗದ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ. ನೀರಿನ ಭವಣೆ ತಪ್ಪಿಸಿ ಅಂರ್ತಜಲ ವೃದ್ಧಿಸುವ ನಿಟ್ಟಿನಲ್ಲಿ ಕೆರೆಗಳಲ್ಲಿ ಹೂಳೆತ್ತುವುದು, ಹಾಲು ಉತ್ಪಾದಕರ ಸಂಘಕ್ಕೆ ಆರ್ಥಿಕ ನೆರವು ನೀಡುವುದು ಸೇರಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಆರ್ಥಿಕ ಚಟುವಟಿಕೆ ನಡೆಸಲು ಅವಶ್ಯವಿರುವ ಸೌಲ ಸೌಲಭ್ಯ, ಕೃಷಿ ಕ್ಷೇತ್ರದ ಬೆಳವಣಿಗೆಗೆ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಧರ್ಮಾಧಿಕಾರಿ ಡಾ.ವೀರೇಂದ್ರಹೆಗಡೆ ಅವರು ಜನಜಾಗೃತಿ ವೇದಿಕೆ ಮೂಲಕ ಮದ್ಯವ್ಯರ್ಜನ ಶಿಬಿರ ಆರಂಭಿಸಿದ್ದು, ಇದುವರೆಗೂ ನಡೆದಿರುವ 1,453 ಶಿಬಿರಗಳಲ್ಲಿ 1.25 ಲಕ್ಷ ಮಂದಿ ಮದ್ಯವ್ಯಸನ ಮುಕ್ತರನ್ನಾಗಿಸಲಾಗಿದೆ ಎಂದರು.
ಶಿಬಿರದಲ್ಲಿ ಭಾಗವಹಿಸಿದ್ದ 3 ಮಂದಿ ತಾಂತ್ರಿಕ ಶಿಕ್ಷಣ, 1 ಸ್ನಾತಕೋತ್ತರ ಪದವಿ, 5 ಪದವಿ 23 ಪ್ರೌಢಶಿಕ್ಷಣ, 18 ಮಂದಿ ಪ್ರಾಥಮಿಕ ಶಿಕ್ಷಣ ಪಡೆದುಕೊಂಡಿದ್ದರೆ, ಕೇವಲ 5ಮಂದಿ ಮಾತ್ರ ಅನಕ್ಷರಸ್ಥರು ಮದ್ಯವ್ಯಸನಿಗಳಾಗಿರುವುದು ಅಚ್ಚರಿಯ ಸಂಗತಿ ಎಂದು ಯೋಜನಾಧಿಕಾರಿ ಪಾರ್ವತಿ ಮಾಹಿತಿ ನೀಡಿದರು.
ಶಿಬಿರಾರ್ಥಿಗಳಿಂದ ಪ್ರಮಾಣ: ಸಮಾರೋಪದಲ್ಲಿ ನವಜೀವನ ಸಮಿತಿಯ ವಿವಾಹಿತ ಸದಸ್ಯರ ಪತ್ನಿಯರೊಂದಿಗೆ ಮರುವಿಹಾಹ ಮಾಡಿಸಿದ್ದಲ್ಲದೇ ಮದ್ಯವ್ಯಸನವನ್ನು ಮತ್ತೆ ಮಾಡದಂತೆ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವರ ಮೇಲೆ ಪ್ರಮಾಣ ಮಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಆನಂದ್‌ಸುವರ್ಣ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ವೀಣಾ, ಟಿ.ಬೇಗೂರು ಗ್ರಾಪಂ ಅಧ್ಯಕ್ಷ ರೇಖಾ ಕರಿವರದಯ್ಯ, ಸದಸ್ಯ ಗಣೇಶ್, ವೆಂಕಟೇಶ್, ಶಿಬಿರಾಧಿಕಾರಿ ನಾಗೇಶ್, ಮೇಲ್ವೀಚಾರಕ ಉಮೇಶ್, ಮಂಜುಳಾಬಾಯಿ ಮತ್ತಿತರರಿದ್ದರು.