ಮೇಲ್ವರ್ಗಕ್ಕೆ 10% ಮೀಸಲು: ವಿವರಣೆ ನೀಡುವಂತೆ ಕೇಂದ್ರಕ್ಕೆ ನೋಟಿಸ್​ ನೀಡಿದ ಮದ್ರಾಸ್​ ಹೈಕೋರ್ಟ್​

ಚೆನ್ನೈ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿಗಳಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲು ಕಲ್ಪಿಸುವ ಕಾನೂನಿನ ಕುರಿತು ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್​ ಇಂದು ನೋಟಿಸ್​ ಜಾರಿ ಮಾಡಿದೆ.

ಮೇಲ್ವರ್ಗಕ್ಕೆ ಮೀಸಲು ಕಲ್ಪಿಸುವ ಕಾನೂನು ಸಂಬಂಧ ತಮಿಳುನಾಡಿನ ವಿರೋಧ ಪಕ್ಷ ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್​.ಎಸ್​ ಭಾರತಿ ಅವರು ಮದ್ರಾಸ್​ ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

“ಮೀಸಲಾತಿ ಎಂಬುದು ಆರ್ಥಿಕ ಸ್ಥಿತಿಗತಿಗಳ ಆಧಾರದಲ್ಲಿ ನಿಗದಿ ಮಾಡುವ ಕಾರ್ಯಕ್ರಮವಲ್ಲ. ಅದು ಸಾಮಾಜಿಕ ಸ್ಥಿತಿಗತಿಗಳ ಆಧಾರದಲ್ಲಿ ನೀಡುವಂಥದ್ದು,” ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್​ ಹೈಕೋರ್ಟ್​ ಇಂದು ಕೇಂದ್ರ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ. ಅಲ್ಲದೆ, ಫೆ.18ರ ಒಳಗಾಗಿ ವಿವರಣೆ ಸಲ್ಲಿಸುವಂತೆಯೂ ಸೂಚಿಸಿದೆ.