ಮಡಿವಾಳರು ಶ್ರಮ ಜೀವಿಗಳು

ಬಾಗಲಕೋಟೆ: ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಸಮಾಜಕ್ಕೆ ಮುಕ್ತ ಅವಕಾಶವಿದೆ. ಸಣ್ಣ ಸಮುದಾಯಗಳು ಒಗ್ಗಟ್ಟಿನ ಸಂದೇಶ ಸಾರುವ ಮೂಲಕ ತಮ್ಮ ಬಲವನ್ನು ವೃದ್ಧಿಸಿ ಪ್ರಗತಿ ಕಾಣಬೇಕು ಎಂದು ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಡಿವಾಳ ಮಾಚಿ ದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಡಿವಾಳ ಸಮಾಜ ಮೊದಲಿನಿಂದಲೂ ಶ್ರಮ ಸಂಸ್ಕೃತಿಗೆ ಸೇರಿದೆ. ಕಷ್ಟದ ಜೀವನ ಸಾಗಿಸಿದ ಸಮಾಜವಾಗಿದೆ. ಇಂದಿನ ಆಧುನಿಕ ವ್ಯವಸ್ಥೆ ಹಲವು ಮಜಲುಗಳಲ್ಲಿ ಸಾಗುತ್ತಿದೆ. ಕಾಲಕ್ಕೆ ಅನುಗುಣವಾಗಿ ಬದುಕಿನಲ್ಲಿ ಹೊಸತನ ರೂಪಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮಾತನಾಡಿ, ಸಮಾಜದಲ್ಲಿ ಕಾಲ ಕಾಲಕ್ಕೆ ಮಾರ್ಗದರ್ಶನ ನೀಡಲಿಕ್ಕೆ ಮಾಚಿದೇವರು ಆಂದೋಲನ ಮೂಲಕ ಮುಂದಿನ ಪೀಳಿಗೆಗೆ ವಿಶೇಷ ಕೊಡುಗೆ ಬಿಟ್ಟು ಹೋಗಿದ್ದಾರೆ. ಹಿಂದೆ ಇದ್ದ ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಸದಾಕಾಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ನಮ್ಮಿಂದ ಸಾಧ್ಯವಿದ್ದಲ್ಲಿ ಮತ್ತೊಬ್ಬರಿಗೆ ಸಹಕಾರ ನೀಡಬೇಕು. ಆಗದಿದ್ದಲ್ಲಿ ಸಮಾಧಾನದಿಂದ ಇರಬೇಕೇ ವಿನಃ ತೋಂದರೆ ಕೊಡಬಾರದು ಎಂದು ಸಲಹೆ ನೀಡಿದರು.

ಬೆಳಗಾವಿ ಜಿಲ್ಲೆಯ ಅಥಣಿಯ ತಾಲೂಕಿನ ಜಿಂಜವಾಡದ ಬಸವರಾಜೇಂದ್ರ ಶರಣರು ಉಪನ್ಯಾಸ ನೀಡಿದರು. ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ದುರುಗೇಶ ರುದ್ರಾಕ್ಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿ ಶಶಿಕಲಾ ಹುಡೇದ, ಕಂದಾಯ ಇಲಾಖೆಯ ಶಿರಸ್ತೆದಾರ ಎಂ.ಬಿ.ಗುಡೂರ, ಗೋಪಾಲ ಮಡಿವಾಳರ ಉಪಸ್ಥಿತರಿದ್ದರು.