ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮೀಸಲಾತಿ

ಮಡಿಕೇರಿ: ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಕೂರ್ಗ್ ಕಮ್ಯುನಿಟಿ ಹಾಲ್‌ನಲ್ಲಿ ಮಹಿಳಾ ದಿನಾಚರಣೆ ಮತ್ತು ಮಹಿಳಾ ಅಧಿಕಾರಯಾತ್ರೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುನ್ನ ನಗರದ ಇಂದಿರಾಗಾಂಧಿ ವೃತ್ತದಿಂದ ಗಣಪತಿಬೀದಿ ರಸ್ತೆ ಮೂಲಕ ಕೂರ್ಗ್ ಕಮ್ಯುನಿಟಿ ಹಾಲ್ವರೆಗೆ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ವಿಧಾನ ಪರಿಷತ್ ಸದಸ್ಯೆ ಶಾಂತೇಯಂಡ ವೀಣಾಅಚ್ಚಯ್ಯ ಮಾತನಾಡಿ, ಪ್ರತಿಯೊಬ್ಬ ಮಹಿಳೆಯು ಸಮಾಜದಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. ಪ್ರತಿ ಕುಟುಂಬದಲ್ಲೂ ಮಹಿಳೆಯರಿಗೆ ಉತ್ತೇಜನ ನೀಡುವ ಮೂಲಕ ಮಹಿಳೆಯರು ಹೆಚ್ಚಿನ ಸಾಧನೆ ಮಾಡಲು ಅವಕಾಶ ನೀಡಿ ಮಹಿಳಾ ಸಬಲೀಕರಣಕ್ಕೆ ನೆರವಾಗಬೇಕು ಎಂದು ಹೇಳಿದರು.

ಶೇ.33ರಷ್ಟು ಮೀಸಲಾತಿ: ರಾಜ್ಯಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಲಭ್ಯವಾಗಿಲ್ಲ. ಆದರೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲರೂ ಪಕ್ಷದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬ ಪುರುಷನ ಯಾವುದೇ ಸಾಧನೆಯ ಹಿಂದೆ ಮಹಿಳೆ ಬೆನ್ನೆಲುಬಾಗಿ ನಿಂತಿರುತ್ತಾಳೆ. ಹೆಣ್ಣು ತಾಳ್ಮೆಯ ಪ್ರತೀಕವಾಗಿದ್ದು, ಅತ್ಯಂತ ಸೌಜನ್ಯ ಉಳ್ಳವಳಾಗಿದ್ದಾಳೆ. ಸದಾ ಒಳ್ಳೆಯದನ್ನು ಬಯಸುತ್ತ ಸಂಸಾರವನ್ನು ನಡೆಸುತ್ತಾಳೆ. ಆದ್ದರಿಂದ ಪ್ರತಿಯೊಬ್ಬರು ಹೆಣ್ಣನ್ನು ಗೌರವಿಸಬೇಕು ಎಂದರು.

ಜಿಪಂ ಮಾಜಿ ಅಧ್ಯಕ್ಷೆ, ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಡಳಿತಾವಧಿಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಹೇಳಿದ್ದರು. ಆದರೆ ಇದುವರೆಗೆ ಆಗಿಲ್ಲ. ಮಹಿಳೆಯರಿಗೆ ಮೀಸಲಾತಿ ಬರಬೇಕಾದರೆ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದರೆ ಸಾಧ್ಯ ಎಂದು ಹೇಳಿದರು.

ಮಹಿಳಾ ಸಾಧಕಿಯರಿಗೆ ಸನ್ಮಾನ:   ಮಹಿಳಾ ದಿನಾಚರಣಾ ಅಂಗವಾಗಿ ಆಟೋ ಚಾಲಕಿ ಶೈಲಾಜಾ, ರಾಜಕೀಯ ಕ್ಷೇತ್ರದಿಂದ ಸುಮನ್ ಪ್ರದೀಪ್, ಕ್ರೀಡಾ ಕ್ಷೇತ್ರದಿಂದ ವೈ.ಎನ್.ವಿಶಾಲಾಕ್ಷಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಗಣ್ಯರು ಸಾಧಕಿಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.