ನೀರಿನ ಸದ್ಬಳಕೆ, ಸಂರಕ್ಷಣೆ ಎಲ್ಲರ ಹೊಣೆ

ಮಡಿಕೇರಿ: ನೀರು ಪ್ರತಿಯೊಬ್ಬರ ಬಳಕೆಗೆ ಪ್ರತಿದಿನವೂ ಬೇಕಾಗುವ ಅತ್ಯಮೂಲ್ಯ ನೈಸರ್ಗಿಕ ಸಂಪತ್ತು. ಆದ್ದರಿಂದ ನೀರಿನ ಮಿತ ಬಳಕೆ, ಸದ್ಬಳಕೆ ಮತ್ತು ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರಲ್ಲೂ ತಿಳುವಳಿಕೆ ಇರಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಸಲಹೆ ಮಾಡಿದ್ದಾರೆ.

ಕೇಂದ್ರೀಯ ಅಂತರ್ಜಲ ಮಂಡಳಿ, ಜಲ ಸಂಪನ್ಮೂಲ ನದಿ ಅಭಿವೃದ್ಧಿ ಮತ್ತು ಗಂಗಾ ಪುನಃಶ್ಚೇತನ ಮಂತ್ರಾಲಯ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ನೀರಿನ ಸಂರಕ್ಷಣೆಗಾಗಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನೀರನ್ನು ಸ್ನಾನ ಮಾಡಲು, ಬಟ್ಟೆ ತೊಳೆಯಲು, ಮನೆ ಕಾರ್ಯ ಹೀಗೆ ಬದುಕಿನ ಎಲ್ಲಾ ಚಟುವಟಿಕೆಗಳಿಗೂ ಬಳಸಲಾಗುತ್ತಿದೆ. ಈ ಹಿನ್ನೆಲೆ ನೀರಿನ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇರಬೇಕು. ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಮಳೆ ಕೊಯ್ಲು ಅಳವಡಿಸಿಕೊಳ್ಳಲು ಮುಂದಾಗಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನೀರಿಲ್ಲದೆ ಬದುಕಿಲ್ಲ. ನೀರು ನಮಗೆ ನಾನಾ ರೂಪಗಳಲ್ಲಿ ಸಿಗುತ್ತದೆ. ಹಳ್ಳ, ಕೊಳ್ಳ, ನದಿ, ಸರೋವರ, ಕೆರೆ, ಕುಂಟೆ, ಕಟ್ಟೆಗಳಲ್ಲಿ ಲಭ್ಯವಾಗುವ ಮೇಲ್ಮೈಜಲ ಹಾಗೂ ತೋಡು, ಬಾವಿ, ಕೊಳವೆ ಬಾವಿ ಇತ್ಯಾದಿಗಳಲ್ಲಿ ಸಿಗುತ್ತದೆ. ದೇಶದ 26 ರಾಜ್ಯಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ರಾಜ್ಯದ 16 ಜಿಲ್ಲೆಗಳನ್ನು ಬರಪೀಡಿತವೆಂದು ಪ್ರಕಟಿಸಲಾಗಿದೆ. ಆದ್ದರಿಂದ ನೀರಿನ ಮಹತ್ವ ಬಗ್ಗೆ ಎಚ್ಚರಗೊಳ್ಳದಿದ್ದರೆ ಮುಂದಿನ ಪೀಳಿಗೆಗೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜು ಮಾತನಾಡಿ, ರಾಜ್ಯದ ಪಶ್ಚಿಮ ಘಟ್ಟ ಪ್ರದೇಶವನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಈ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕಿದೆ. ಇದರೊಂದಿಗೆ ನೀರು ಮತ್ತು ಮಣ್ಣಿನ ಸಂರಕ್ಷಣೆ ಒಂದು ರೀತಿ ಸವಾಲು ಆಗಿದ್ದು, ಆರೋಗ್ಯಯುತ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವತ್ತ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ಸಲಹೆ ಮಾಡಿದರು.

ಹಿರಿಯ ಭೂ ವಿಜ್ಞಾನಿ ಸೌಮ್ಯ ಮಾತನಾಡಿ, ನೀರಿಗೆ ಬದಲಿ ವಸ್ತು ಇನ್ನೊಂದಿಲ್ಲ. ಭೂಮಿಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಶೇ.2.7 ರಷ್ಟು ಮಾತ್ರ. ನೀರಿಲ್ಲದೆ ಜೀವನ ಅಸಾಧ್ಯ. ನೀರಿನ ಸಂರಕ್ಷಣೆ, ಅಂತರ್ಜಲ ಮರುಪೂರಣ ಹಾಗೂ ಶುದ್ಧೀಕರಿಸಿದ ನೀರಿನ ಮರು ಬಳಕೆಯನ್ನು ಹೆಚ್ಚಾಗಿ ಕೈಗೊಳ್ಳಬೇಕು. ಅಂತರ್ಜಲ ಕಲುಷಿತಗೊಳ್ಳದಂತೆ ನಾವು ಜಾಗರೂಕರಾಗಿರಬೇಕು. ಇದರಲ್ಲಿ ಸಮಾಜದ ಸಹಭಾಗಿತ್ವ ಕೂಡ ತುಂಬಾ ಅಗತ್ಯ ಎಂದು ಹೇಳಿದರು.

ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕ ಎ.ಸುಬ್ಬುರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಹಂತೇಶ್, ಕೇಂದ್ರೀಯ ಅಂತರ್ಜಲ ಮಂಡಳಿ ವಿಜ್ಞಾನಿಗಳಾದ ಎಂ.ಮುತ್ತುಕಣ್ಣನ್, ಡಾ.ಅನಂತ್‌ಕುಮಾರ್ ಅರಸ್, ಬಾಲಚಂದ್ರನ್ ಇತರರು ಇದ್ದರು.