ಮಹರ್ಷಿ ವಾಲ್ಮೀಕಿ ಚರಿತ್ರೆ ಅರಿಯಿರಿ

ಮಡಿಕೇರಿ: ಮಹರ್ಷಿ ವಾಲ್ಮೀಕಿ ಆದಿಕವಿ, ಮಹಾಕವಿಯಾಗಿದ್ದು, ಅಖಂಡ ಭಾರತ ನಿರ್ಮಾಣಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿಯ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ವಾಲ್ಮೀಕಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು. ವಿದ್ಯಾರ್ಥಿಗಳು ಡಿಸಿ, ಎಸ್‌ಪಿ, ಶಿಕ್ಷಕನಾಗಬೇಕು ಎಂಬ ಹಲವು ಕನಸುಗಳಿರುತ್ತವೆ. ಆ ಕನಸನ್ನು ನನಸು ತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಶ್ರೀರಾಮಚಂದ್ರನಂತೆ ಬದುಕು ನಡೆಸಿ ರಾಷ್ಟ್ರಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಮಹಾಕಾವ್ಯ ರಾಮಾಯಣವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ. ವಾಲ್ಮೀಕಿಯವರ ಆದರ್ಶ, ಶ್ರದ್ಧೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಇದರಿಂದ ಪ್ರೀತಿ, ವಿಶ್ವಾಸದಿಂದ ಬದುಕಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ, ಸಾಧಾರಣ, ಸಾಮಾನ್ಯ ಮನುಷ್ಯ, ಮಹರ್ಷಿ ವಾಲ್ಮೀಕಿಯಾಗಿ ನಾಗರಿಕತೆಯ ಬದಲಾವಣೆಗೆ ಶ್ರಮಿಸಿದ್ದರು. ಆ ನಿಟ್ಟಿನಲ್ಲಿ ವಾಲ್ಮೀಕಿಯವರ ಆದರ್ಶ ಗುಣಗಳನ್ನು ತಿಳಿದುಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮ್‌ಸೇನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಡಾ.ಕೆ.ಸಿ.ದಯಾನಂದ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಶಿವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ರಮೇಶ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಇತರರು ಇದ್ದರು.