ನಾಳೆಯಿಂದ ದುಬೈನಲ್ಲಿ ವಿಶ್ವ ತುಳು ಸಮ್ಮೇಳನ

ಮಡಿಕೇರಿ : ತುಳು ಭಾಷೆ-ಸಂಸ್ಕೃತಿಯ ಹಿರಿಮೆಯನ್ನು ವಿಶ್ವದಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ನ.23 ಮತ್ತು 24 ರಂದು ಕೊಲ್ಲಿ ರಾಷ್ಟ್ರ ದುಬೈನಲ್ಲಿ ವಿಶ್ವ ತುಳು ಸಮ್ಮೇಳನ ನಡೆಯಲಿದೆ ಎಂದು ತುಳುವೆರ ಜನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ತಿಳಿಸಿದ್ದಾರೆ.

ಸಮ್ಮೇಳನವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದು, ದೇಶ, ವಿದೇಶಗಳ ಗಣ್ಯರು, ಬಾಲಿವುಡ್‌ನ ನಟ ನಟಿಯರು, ತುಳು ಸಿನಿಮಾ ರಂಗದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಎರಡು ದಿನ ನಡೆಯಲಿರುವ ಸಮ್ಮೇಳನದಲ್ಲಿ ತುಳುನಾಡ ಹಬ್ಬದ ನೃತ್ಯ ರೂಪಕ, ತುಳು ಯಕ್ಷಗಾನ ಬಯಲಾಟ, ಹಾಸ್ಯ ಪ್ರಹಸನ, ಯಕ್ಷಗಾನ ನಾಟ್ಯ ವೈಭವ, ಯಕ್ಷಗಾನ ತಾಳ ಮದ್ದಲೆ, ತುಳು ಜಾನಪದ ಆಚರಣೆ, ಗೋಷ್ಠಿ, ಕವಿ ಕೂಟ, ತುಳು ಚಲನಚಿತ್ರ ಮತ್ತು ರಂಗಭೂಮಿ ಗೋಷ್ಠಿ, ಮಾಧ್ಯಮ ಗೋಷ್ಠಿ, ರಸಮಂಜರಿ, ತುಳುನಾಡ ಆಟ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಿದೇಶದಲ್ಲಿ ನಡೆಯುವ ಸಮ್ಮೇಳನ ಹೊಸ ಮೈಲಿಗಲ್ಲು ಆಗಲಿದ್ದು, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಿದರೆ ತುಳುಭಾಷಿಕರ ಕನಸಿಗೆ ಮತ್ತಷ್ಟು ಪುಷ್ಟಿ ದೊರೆತಂತಾಗುತ್ತದೆ ಎಂದು ತಿಳಿಸಿದ್ದಾರೆ.