ತಹಸೀಲ್ದಾರ್, ಡಿಸಿಎಫ್‌ಗೆ ಸಚಿವ ದೇಶಪಾಂಡೆ ತರಾಟೆ

ಮಡಿಕೇರಿ: ವಿರಾಜಪೇಟೆ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜು ಹಾಗೂ ವಿರಾಜಪೇಟೆ ತಹಸೀಲ್ದಾರ್ ಗೋವಿಂದರಾಜು ಅವರಿಬ್ಬರು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಂದ ತೀವ್ರ ತರಾಟೆಗೊಳಗಾದರು.
ಕೋಟೆ ಹಳೆಯ ವಿಧಾನ ಸಭಾಂಗಣದಲ್ಲಿ ಬುಧವಾರ ಪ್ರಕೃತಿ ವಿಕೋಪ, ಬರ ಪರಿಹಾರ ಹಾಗೂ ಕಂದಾಯ ಇಲಾಖೆಗಳ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಬ್ಬರಿಗೂ ಎಚ್ಚರಿಕೆ ನೀಡಿದರು. ಈ ಇಬ್ಬರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ ಅತೃಪ್ತಿ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಸಚಿವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ತಹಸೀಲ್ದಾರ್ ಗೋವಿಂದರಾಜು ಅವರನ್ನು ಸಭಾಂಗಣದ ಮುಂಭಾಗಕ್ಕೆ ಕರೆಸಿ, ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಿಮ್ಮನ್ನು ಅಮಾನತ್ತು ಮಾಡಬೇಕ ಅಥವಾ ವರ್ಗಾವಣೆ ಮಾಡಬೇಕ ಎಂದು ಪ್ರಶ್ನಿಸಿದರು.
ವಿರಾಜಪೇಟೆ ತಾಪಂ ಸಭೆಗೆ ಏಕೆ ಹೋಗಲಿಲ್ಲ. ನಿಮ್ಮ ವಿರುದ್ಧ ತೀವ್ರ ಆಕ್ರೋಶವಿದೆ. ಜನಪ್ರತಿನಿಧಿಗಳು ದೂರು ನೀಡಿದ್ದಾರೆ. ಇದರೊಂದಿಗೆ ತಮ್ಮ ಕಾರ್ಯವೈಖರಿ ಬಗ್ಗೆ ಸಾಕಷ್ಟು ದೂರು ಬಂದಿದೆ. ಪ್ರೊಬೆಷನರಿ ಅವಧಿಯಲ್ಲಿರುವ ತಾವು ಜನಪ್ರತಿನಿಧಿಗಳನ್ನು ಕೇರ್ ಮಾಡುವುದಿಲ್ಲ, ಸಭೆಗೆ ಹೋಗುವುದಿಲ್ಲ ಅಂದ್ರೆ ಏನರ್ಥ ಎಂದು ಕಿಡಿಕಾರಿದರು.
ಕಾನೂನು ಬಿಟ್ಟು ಕೆಲಸ ಮಾಡಿ ಎಂದು ನಾನು ಹೇಳುತ್ತಿಲ್ಲ. ಕಾನೂನು ಪರಿಪಾಲನೆ ಮಾಡಿ. ಆದರೆ, ಜನಪ್ರತಿನಿಧಿಗಳಿಗೆ ಗೌರವ ನೀಡುವ ಜತೆ ತಮ್ಮ ಕಾರ್ಯವೈಖರಿ ತಿದ್ದಿಕೊಳ್ಳುವಂತೆ ತಾಕಿತು ಮಾಡಿದರು. ವಿರಾಜಪೇಟೆ ತಹಸೀಲ್ದಾರ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಜನರ ಕೆಲಸ ಮಾಡುತ್ತಿಲ್ಲ ಎಂದು ಕೆ.ಜಿ.ಬೋಪಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಗೆ ಹಾಜರಾಗಲಿಲ್ಲ ಎಂಬ ಕಾರಣಕ್ಕಾಗಿ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಡಿಸಿಎಫ್ ಮರಿಯಾ ಕ್ರಿಸ್ತರಾಜು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನೆಮ್ಮದಿಯಿಂದ ನಿವೃತ್ತಿಯಾಗಬಾರದು. ಹಾಗೇ ಮಾಡುತ್ತೇನೆ. ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದರು.
ಅರಣ್ಯ ಪ್ರದೇಶದೊಳಗಿನ ಜನವಸತಿ ಪ್ರದೇಶದಲ್ಲಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಅನುಮತಿ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ಡಿಸಿಎಫ್ ಕಂದಾಯ ಸಚಿವರಿಂದ ತರಾಟೆಗೆ ಒಳಗಾದರು. ಏಕಾಗಿ ಅಡ್ಡಿಪಡಿಸುತ್ತೀರಾ ಎಂದು ಕಿಡಿಕಾರಿದರು. ಜನರೊಂದಿಗೆ ಬೆರೆತು, ಜನಪರ ಕೆಲಸ ಮಾಡಿ ಎಂದು ತಾಕಿತು ಮಾಡಿದರು.
ವಿದ್ಯುತ್ ಸಂಪರ್ಕಕ್ಕೆ ಅರಣ್ಯಾಧಿಕಾರಿಗಳು ಅನುಮತಿ ನೀಡದ ಬಗ್ಗೆ ಕೆ.ಜಿ.ಬೋಪಯ್ಯ ಸಚಿವರ ಗಮನ ಸೆಳೆದರು. ವಿದ್ಯುತ್ ಸಂಪರ್ಕ ನೀಡಲು ಏನು ತೊಡಕಿದೆ ಎಂದು ಪ್ರಶ್ನಿಸಿದಾಗ, ಡಿಸಿಎಫ್ ಏನು ತೊಂದರೆ ಇಲ್ಲ ಎಂಬ ಉತ್ತರ ನೀಡಿದರು. ತಕ್ಷಣ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಸೆಸ್ಕ್ ಅಧಿಕಾರಿಗೆ ಸಚಿವರು ಸೂಚಿಸಿದರು.
ಅಧಿಕಾರಿಗಳು ಗ್ರಾಮ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಂದಾಯ ಸಚಿವರು ಅತೃಪ್ತಿ ವ್ಯಕ್ತಪಡಿಸಿದರು.
ದಕ್ಷಿಣ ಕೊಡಗಿನಲ್ಲಿ ಒಬ್ಬ ಮರ ವ್ಯಾಪಾರಿ ಕೋಟ್ಯಂತರ ರೂಪಾಯಿ ಮೌಲ್ಯದ ಮರವನ್ನು ಅಕ್ರಮವಾಗಿ ಶೇಖರಿಸಿಟ್ಟಿದ್ದ. ಇದನ್ನು ಪತ್ತೆ ಹಚ್ಚಲು ಅರಣ್ಯಾಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಎಸ್ಪಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆತನ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಅರಣ್ಯ ಇಲಾಖೆಯವರು ಪ್ರತಿ ಶನಿವಾರ ಆತನ ಕಚೇರಿ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರೆಂದು ಕೆ.ಜಿ.ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಕಲ್ಲಳ್ಳ ವಲಯದಲ್ಲಿ ಚಿರತೆ ದಾಳಿಗೆ ಬಲಿಯಾದ ಹಸು ಮಾಲೀಕರಿಗೆ ಪರಿಹಾರ ನೀಡಲಿಲ್ಲ. ಜನರ ಸಮಸ್ಯೆಗಳಿಗೆ ಅರಣ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸುನೀಲ್ ಸುಬ್ರಮಣಿ ದೂರಿದರು.
ಮಾಕುಟ್ಟ ಅರಣ್ಯ ವ್ಯಾಪ್ತಿಯ ಒಳಗೆ ವ್ಯಕ್ತಿಯೊಬ್ಬರು 45 ಎಕರೆ ಕಾಫಿ ತೋಟ ಹೊಂದಿದ್ದಾರೆ. ಕೆಲ ತಿಂಗಳಿನಿಂದ ತೋಟಕ್ಕೆ ಹೋಗಲು ಡಿಸಿಎಫ್ ಅಡ್ಡಿಪಡಿಸುತ್ತಿದ್ದಾರೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕಂದಾಯ ಸಚಿವರ ಗಮನ ಸೆಳೆದರು. ಅಕ್ರಮವಾಗಿ ರಸ್ತೆ ಮಾಡಿದ್ದಕ್ಕಾಗಿ ಭೂಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಡಿಸಿಎಫ್ ಮಾಹಿತಿ ನೀಡಿದರು. ತೋಟಕ್ಕೆ ಹೋಗಲು ಷರತ್ತುಬದ್ಧ ಅವಕಾಶ ಮಾಡಿಕೊಡುವಂತೆ ಸಚಿವರು ಡಿಸಿಎಫ್‌ಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಕೆ.ಪಿ. ಚಂದ್ರಕಲಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಖತ್ರಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಪಂ ಸಿಇಒ ಕೆ.ಲಕ್ಷ್ಮೀಪ್ರಿಯಾ, ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಇದ್ದರು.

Leave a Reply

Your email address will not be published. Required fields are marked *