ಪ್ರಕೃತಿ ವಿಕೋಪ ಸಂತ್ರಸ್ತೆಗೆ ಬಲವಂತ ಸ್ಥಳಾಂತರ ಯತ್ನ

ಮಡಿಕೇರಿ: ತನ್ನ ವಾಸದ ಮನೆಯಿದ್ದ ಜಾಗ ಸುರಕ್ಷಿತ ಪ್ರದೇಶದಲ್ಲಿದ್ದರೂ ಮನೆ ನಿರ್ಮಿಸಿಕೊಡದೆ ಸುರಕ್ಷಿತವಲ್ಲದ ಪ್ರದೇಶವೆಂದು ಘೋಷಿಸಿ, ಮಳೆಹಾನಿ ಸಂತ್ರಸ್ತ ಮಹಿಳೆಯೊಬ್ಬರನ್ನು ಸೋಮವಾರಪೇಟೆ ತಾಲೂಕಿನ ಕುಂಬೂರಿಗೆ ತೆರಳುವಂತೆ ಒತ್ತಡ ಹೇರುತ್ತಿರುವ ಅಮಾನವೀಯ ಪ್ರಕರಣವೊಂದು ಮಡಿಕೇರಿಯ ಮಲ್ಲಿಕಾರ್ಜುನನಗರ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.

ಮನೆ ಕೆಲಸ ಮಾಡಿಕೊಂಡು ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಕಿವುಡುತನ ಹೊಂದಿರುವ ವಿಧವಾ ಮಹಿಳೆ ಎಚ್.ಲಕ್ಷ್ಮೀ ಎಂಬುವರು ಕಳೆದ 35 ವರ್ಷಗಳಿಂದ ಮಲ್ಲಿಕಾರ್ಜುನ ನಗರ ಬಡಾವಣೆಯಲ್ಲಿ ಸುಮಾರು 2 ಸೆಂಟ್ ವಿಸ್ತೀರ್ಣದ ಸ್ವಂತ ಜಾಗದಲ್ಲಿ ಶೀಟ್ ಮತ್ತು ಹೆಂಚಿನ ಮನೆಯಲ್ಲಿ ವಾಸವಾಗಿದ್ದರು. ಆದರೆ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಮನೆ ನೆಲಸಮಗೊಂಡಿತ್ತು. ಬೀದಿಗೆ ಬಿದ್ದ ಲಕ್ಷ್ಮೀ ಹಾಗೂ ಅವರ ಇಬ್ಬರು ಪುತ್ರರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದರು. ಸರ್ಕಾರ ಬಾಡಿಗೆ ಮನೆಗೆ 10 ಸಾವಿರ ರೂ. ನಿಗದಿ ಮಾಡಿದ ಬಳಿಕ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.

ಮನೆಯ ಸಾಮಗ್ರಿಗಳು ಮಳೆಯಲ್ಲಿ ನಾಶವಾದ ಕಾರಣ ಇವುಗಳ ನಷ್ಟಕ್ಕೆ ಪರಿಹಾರವಾಗಿ 50 ಸಾವಿರ ರೂ.ಗಳನ್ನು ಸರ್ಕಾರ ಲಕ್ಷ್ಮೀ ಅವರಿಗೆ ನೀಡಿದೆ. ಆದರೆ ಸ್ವಂತ ಜಾಗದಲ್ಲೇ ಮನೆ ನಿರ್ಮಿಸಿಕೊಡಿ ಎಂದು ಅರ್ಜಿ ಸಲ್ಲಿಸಿದರೆ ಜಾಗವನ್ನೇ ಪರಿಶೀಲಿಸದ ನಗರಸಭಾ ಅಧಿಕಾರಿಗಳು ಮನೆಯಿದ್ದ ಜಾಗ ವಾಸಕ್ಕೆ ಯೋಗ್ಯವಿಲ್ಲವೆಂದು ಘೋಷಿಸುವ ಮೂಲಕ ಲಕ್ಷ್ಮೀ ಅವರನ್ನು ಆತಂಕಕ್ಕೆ ತಳ್ಳಿದ್ದಾರೆ. ಅಲ್ಲದೆ ಕುಂಬೂರಿನಲ್ಲಿ ನಿರ್ಮಿಸಿಕೊಡುವ ಮನೆಯಲ್ಲಿ ವಾಸಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಒಬ್ಬ ಪುತ್ರನ ಒಂದು ಕಾಲು ಸ್ವಾಧೀನ ಕಳೆದುಕೊಂಡು ಕೆಲಸ ಮಾಡದ ಸ್ಥಿತಿಗೆ ತಲುಪಿದ್ದಾನೆ. ಶಸ್ತ್ರಚಿಕಿತ್ಸೆಗಾಗಿ 2 ರಿಂದ 3 ಲಕ್ಷ ರೂ. ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಮತ್ತೊಬ್ಬ ಪುತ್ರ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾನೆ. ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿರುವ ನಾನು ಸುರಕ್ಷಿತ ಜಾಗವನ್ನು ಬಿಟ್ಟು ದೂರದ ಸೋಮವಾರಪೇಟೆಯ ಕುಂಬೂರಿಗೆ ಹೋಗಬೇಕೆ ಎಂದು ಕಣ್ಣೀರು ಹಾಕುತ್ತಾರೆ ಲಕ್ಷ್ಮಿ.

ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ನಗರಸಭಾ ಸದಸ್ಯ ಕೆ.ಎಂ.ಗಣೇಶ್, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಲಕ್ಷ್ಮೀ ಅವರ ಜಾಗ ಇರುವ ಅಕ್ಕಪಕ್ಕದಲ್ಲೇ ಹತ್ತಾರು ಮನೆಗಳಿವೆ. ಈ ಜಾಗ ವಾಸಕ್ಕೆ ಯೋಗ್ಯವಾಗಿದೆ, ಅಲ್ಲದೆ ರಸ್ತೆಯೂ ಇದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಕಚೇರಿಯಲ್ಲಿ ಕುಳಿತುಕೊಂಡು ಬಡ ಮಹಿಳೆಯ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *