ಉತ್ಸವ ಸಾಗುವ ರಸ್ತೆ ಅಯೋಮಯ!

ಮಡಿಕೇರಿ: ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರಮುಖ ಆಕರ್ಷಣೆಯಾದ ಕರಗ ಉತ್ಸವ ಹಾಗೂ ದಶಮಂಟಪಗಳು ಸಾಗುವ ರಸ್ತೆಯ ಸ್ಥಿತಿ ಹೇಳತೀರದ್ದಾಗಿದೆ.

ನಗರದ ಇತಿಹಾಸ ಪ್ರಸಿದ್ಧ 4 ಶಕ್ತಿ ದೇವತೆಗಳ ಕರಗಗಳಿಗೆ ಅ.10ರಂದು ಮಹದೇವಪೇಟೆಯ ಪಂಪಿನ ಕೆರೆ ಬಳಿ ನಗರ ದಸರಾ ಸಮಿತಿ ವತಿಯಿಂದ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ನಗರ ಪ್ರದಕ್ಷಿಣೆಗೆಂದು ಕರಗಗಳನ್ನು ಬರಮಾಡಿಕೊಳ್ಳಲಾಗುತ್ತದೆ. ನಂತರ 5 ದಿನ ನಗರದ ಬೀದಿಗಳಲ್ಲಿ ಕರಗ ಸಾಗುವುದರ ಜತೆಗೆ ಪ್ರತಿಮನೆಗೆ ತೆರಳುತ್ತದೆ. ಆದರೆ ಕರಗ ಹೊರುವವರು ಬರಿಗಾಲಿನಲ್ಲಿ ಇರುವುದ ರಿಂದ ಹದಗೆಟ್ಟ ರಸ್ತೆಯಲ್ಲಿ ಯಾವ ರೀತಿಯಲ್ಲಿ ಪ್ರದಕ್ಷಿಣೆ ಹಾಕುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಅ.10 ರಂದು ಸಂಜೆ 5 ಗಂಟೆಗೆ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳೊಂದಿಗೆ ಅಲಂಕೃತ ಕರಗವನ್ನು ಮೆರವಣಿಗೆ ಮೂಲಕ ಮಡಿಕೇರಿ ರಾಜಬೀದಿ ಮಾರ್ಗವಾಗಿ ಮಹದೇವಪೇಟೆ ಶ್ರೀ ಚೌಡೇಶ್ವರಿ ದೇವಾಲಯ ಹಾಗೂ ಕಾಲೇಜು ರಸ್ತೆಯ ಪೇಟೆ ಶ್ರೀ ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆ ಬಳಿಕ ದೇವಾಲಯಕ್ಕೆ ಹಿಂದಿರುಗುತ್ತದೆ. ಮರುದಿನ ಜಯನಗರ ಬಡಾವಣೆ, ಬ್ರಾಹ್ಮಣರ ಬೀದಿ, ಅಶ್ವತ್ಥಕಟ್ಟೆ, ದೇಚೂರು ಮಾರ್ಗವಾಗಿ ದೇಚೂರು ಶ್ರೀ ರಾಮಮಂದಿರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದರೆ ನಗರದ ಪೆನ್ಷನ್ ಲೈನ್, ಹೊಸಬಡಾವಣೆ, ಗೌಳಿಬೀದಿ, ರೇಸ್‌ಕೋರ್ಸ್ ರಸ್ತೆ, ರಿಮ್ಯಾಂಡ್ ಹೋಂ ಹಿಂಭಾಗದ ರಸ್ತೆಗಳು ಗುಂಡಿಬಿದ್ದಿವೆ. ಇಂತಹ ರಸ್ತೆಯಲ್ಲಿ ಕರಗ ಹೊತ್ತು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತರಾತುರಿಯಲ್ಲಿ ಸ್ವಚ್ಛತಾ ಕಾರ್ಯ: ನಾಡಹಬ್ಬ ದಸರಾ ಆಚರಣೆಗೆ ಬೆರಳೆಣಿಕೆ ದಿನಗಳು ಇದೆ ಎನ್ನುತ್ತಿದ್ದಂತೆ ನಗರಸಭೆ ನಗರದ ವಿವಿಧೆಡೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ. ನಗರದ ಪೆನ್ಷನ್ ಲೈನ್, ಪಂಪಿನಕರೆ ಬನ್ನಿ ಮಂಟಪ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಪ್ರಗತಿಯಲ್ಲಿದೆ.

ಇತ್ತೀಚೆಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಸ್ವಚ್ಛತೆ ಕುರಿತು ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ನಗರದ ಎಲ್ಲೆಡೆ ಸ್ವಚ್ಛತಾ ಕಾರ್ಯ ಮಾಡಲು 30 ಹೆಚ್ಚುವರಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಆದರೆ ಕಾರ್ಮಿಕರ ಕೊರತೆಯಿಂದ ನಗರಸಭೆಯಲ್ಲಿರುವ ಪೌರಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ ಎಂದು ನಗರಸಭೆ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ತಿಳಿಸಿದ್ದಾರೆ.

ಮಳೆಗೆ ಜಾರಿದ ತೇಪೆಕಾರ್ಯ: ನಗರದ ಗೌಳಿಬೀದಿ ಹಾಗೂ ಪೆನ್ಷನ್ ಲೈನ್ ರಸ್ತೆಗಳು ಯುಜಿಡಿ ಕಾಮಗಾರಿಯಿಂದ ಸಂಪೂರ್ಣ ವಾಗಿ ಹಾಳಾಗಿತ್ತು. ಪರಿಣಾಮ ಇತ್ತೀಚೆಗೆ ಗುತ್ತಿಗೆದಾರರು ಗುಂಡಿಬಿದ್ದ ರಸ್ತೆಗಳಿಗೆ ತೇಪೆಕಾರ್ಯ ಮಾಡಿ ಕೈ ತೊಳೆದುಕೊಂಡಿದ್ದರು. ಆದರೆ ಇಂದು ಮಳೆಗೆ ರಸ್ತೆ ಸಂಪೂರ್ಣ ಹಾಳಾಗಿದೆ. ಇದೇ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡ ಉದಾಹರಣೆಗಳಿವೆ.

ಅ.10 ರಂದು ಕರಗ ಉತ್ಸವಕ್ಕೆ ಚಾಲನೆ: ನಗರದ ಇತಿಹಾಸ ಪ್ರಸಿದ್ಧ 4 ಶಕ್ತಿ ದೇವತೆಗಳ ಕರಗಗಳನ್ನು ಅ.10 ರಂದು ಸಂಜೆ 5 ಗಂಟೆಗೆ ಮಹದೇವಪೇಟೆಯ ಪಂಪಿನ ಕೆರೆ ಬಳಿ ನಗರ ದಸರಾ ಸಮಿತಿ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಗರ ಪ್ರದಕ್ಷಿಣೆಗೆ ಕರಗಗಳನ್ನು ಬರಮಾಡಿಕೊಳ್ಳಲಾಗುವುದು ಎಂದು ನಗರ ದಸರಾ ಸಮಿತಿ ಹಾಗೂ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತಿಳಿಸಿದ್ದಾರೆ.

ಪೂರ್ವಭಾವಿ ಸಭೆ: ಅ.10 ರಿಂದ ಜರುಗುವ ಮಡಿಕೇರಿ ದಸರಾ ಆಚರಣೆಯ ಪೂರ್ವ ಸಿದ್ಧತೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಅ.8 ರಂದು ಮಧ್ಯಾಹ್ನ 3 ಗಂಟೆಗೆ ನಗರದ ನಗರಸಭೆಯ ಕಾವೇರಿ ಕಲಾಕ್ಷೇತ್ರ ಸಭಾಂಗಣದಲ್ಲಿ ದಸರಾ ಆಚರಣೆಯ ಪೂರ್ವಭಾವಿ ಸಭೆ ನಡೆಯಲಿದೆ.

44 ವರ್ಷದಿಂದ ಕಗರ ಹೊರುತ್ತಿದ್ದೇನೆ. ಇಂದು ನಗರದ ರಸ್ತೆಗಳು ದುಸ್ಥಿತಿಯಲ್ಲಿದೆ. ಆದರೆ ದೇವರನ್ನು ನಮ್ಮ ತಲೆ ಮೇಲೆ ಹೊರುವ ಸಂದರ್ಭದಲ್ಲಿ ನಮಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ನಮ್ಮದು. ದೇವರ ಅನುಗ್ರಹದಿಂದ ಇಷ್ಟು ವರ್ಷ ಯಾವುದೇ ತೊಂದರೆಯಾಗಿಲ್ಲ.
ಪೂಜಾರಿ ಅಣ್ಣಯ್ಯ ಉಮೇಶ್, ನಿವೃತ್ತ ಸೈನಿಕ

ಅ.8ರಂದು ಉಸ್ತುವಾರಿ ಸಚಿವರೊಂದಿಗೆ ನಡೆಯಲಿರುವ ಸಭೆಯಲ್ಲಿ ರಸ್ತೆಯನ್ನು ದುರಸ್ತಿ ಮಾಡುವಂತೆ ಮನವಿ ಮಾಡುತ್ತೇವೆ. ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಗುಂಡಿಬಿದ್ದ ರಸ್ತೆಯಲ್ಲಿ ಮಂಗಳವಾರ(ಅ.9) ಮುಷ್ಕರ ನಡೆಸಲಾಗುತ್ತದೆ.
ರವಿಕುಮಾರ್, ದಶಮಂಟಪ ಸಮಿತಿ ಅಧ್ಯಕ್ಷ

23 ಲಕ್ಷ ವೆಚ್ಚದಲ್ಲಿ ಗುಂಡಿಮುಚ್ಚುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಆದರೆ ಮಳೆಯಿಂದ ಗುಂಡಿಮುಚ್ಚಲು ತೊಂದರೆಯಾಗುತ್ತಿದೆ. ಗುತ್ತಿಗೆದಾರರಿಗೆ ಕಾಂಕ್ರೀಟ್ ಹಾಕುವಂತೆ ತಿಳಿಸಲಾಗಿದ್ದು, ಎನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ಟಿ.ಎಸ್.ಪ್ರಕಾಶ್, ಉಪಾಧ್ಯಕ್ಷರು, ನಗರಸಭೆ