ಡಿಸಿ ಬಂಗಲೆ ಬಳಿ ಧರೆಗುರುಳಿದ ಮರಗಳು

 ಮಡಿಕೇರಿ, ವರುಣನ ಆರ್ಭಟ, ಜಿಲ್ಲಾಧಿಕಾರಿಗಳ ವಸತಿ ಗೃಹ,

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಗಾಳಿಮಿಶ್ರಿತ ಮುಂಗಾರಿನ ಅಬ್ಬರದ ಬಿಸಿ ಜಿಲ್ಲಾಧಿಕಾರಿಗಳಿಗೂ ತಟ್ಟಿದ್ದು, ಜಿಲ್ಲಾಧಿಕಾರಿಗಳ ವಸತಿ ಗೃಹದ ಸಮೀಪ ಮರ ಬಿದ್ದು ಮನೆ ಜಖಂಗೊಂಡಿದೆ.

ಶನಿವಾರ ರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ವೃತ್ತದ ಬಳಿಯಿರುವ ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಅವರ ಬಂಗಲೆಯ ಆವರಣದಲ್ಲಿ ಮರಗಳು ಉರುಳಿ ಬಿದ್ದಿವೆ. ಪರಿಣಾಮ ಜಿಲ್ಲಾಧಿಕಾರಿಗಳ ಬಂಗಲೆ ಕಾವಲುಗಾರರ ವಸತಿ ಗೃಹ ಜಖಂಗೊಂಡಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಮರ ತೆರವುಗೊಳಿಸಿದ್ದಾರೆ.

ಕೊಡಗು ಜಿಲ್ಲೆ ವರುಣನ ಆರ್ಭಟಕ್ಕೆ ಮಡಿಕೇರಿ ತಾಲೂಕಿನ ಪುಣ್ಯ ಕ್ಷೇತ್ರ ತಲಕಾವೇರಿ-ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣವಾಗಿ ನೀರಿನಿಂದ ಆವೃತವಾದರೆ, ಮತ್ತೊಂದೆಡೆ ಗಾಳಿ ಮಿಶ್ರಿತ ಮಳೆಯಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ಥಗೊಂಡಿದೆ. ಶನಿವಾರ ರಾತ್ರಿ ಸುರಿದ ಮಳೆಗೆ ತಲಕಾವೇರಿ ಹಾಗೂ ಭಾಗಮಂಡಲದ ತ್ರಿವೇಣಿ ಸಂಗಮ ಮೈದುಂಬಿ ಹರಿಯುತ್ತಿರುವ ಹಿನ್ನೆಲೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ವಿರಾಜಪೇಟೆ, ಗೋಣಿಕೊಪ್ಪಲು, ಕುಟ್ಟ ಹಾಗೂ ಮಾಕುಟ್ಟ ವ್ಯಾಪ್ತಿಯಲ್ಲೂ ಬಿಡುವು ನೀಡುತ್ತಾ ಭಾರಿ ಮಳೆ ಸುರಿಯುತ್ತಿದೆ.

ಮಡಿಕೇರಿ ತಾಲೂಕಿನಲ್ಲಿ ಮಂಗಳೂರು ರಸ್ತೆಯುದ್ಧಕ್ಕೂ ಸಣ್ಣಪುಟ್ಟ ಮರಗಳು ದಾರಿಗೆ ಅಡ್ಡಲಾಗಿ ಬಿದ್ದು, ವಾಹನ ಸವಾರರು ಪರದಾಡುವಂತೆ ಮಾಡಿದೆ. ಭಾನುವಾರ ಮುಂಜಾನೆಯಿಂದ ಸುರಿದ ಮಳೆಯಿಂದ ಒಳಚರಂಡಿಗಳು ತುಂಬಿ ಗಬ್ಬೆದ್ದು ನಾರಿದರೆ, ವಾಹನಸವಾರರು ಮಂಜುಮುಸುಕಿದ ವಾತಾವರಣದಿಂದ ಸಂಚರಿಸಲು ಪರದಾಡುವಂತಾಗಿದೆ. ಜಿಲ್ಲೆಯ ಕೆಲ ಗ್ರಾಮೀಣ ಭಾಗದಲ್ಲಿ ಬೃಹತ್ ಮರಗಳು ಧರಶಾಹಿಯಾಗಿದ್ದು, ಹಲವೆಡೆ ವಿದ್ಯುತ್ ಕಂಬಗಳು ನೆಲಕಚ್ಚಿದ ಪರಿಣಾಮ ಜನತೆ ಕತ್ತಲಲ್ಲೆ ಕಾಲ ಕಳೆಯುವಂತಾಗಿದೆ.

Leave a Reply

Your email address will not be published. Required fields are marked *