ಪರಿಹಾರಕ್ಕೆ ಆಗ್ರಹಿಸಿ ರೈತಸಂಘ ಪ್ರತಿಭಟನೆ

ಮಡಿಕೇರಿ: ಉತ್ತರ ಕರ್ನಾಟಕದಲ್ಲಿ ಬರ ಮತ್ತು ದಕ್ಷಿಣದ ಕೊಡಗು, ಚಿಕ್ಕಮಗಳೂರು, ಮಂಗಳೂರು ಇತರಡೆಗಳಲ್ಲಿ ನೆರೆ, ಭಾರಿ ಮಳೆ ಜಲಪ್ರಳಯಕ್ಕೆ ತುತ್ತಾದವರಿಗೆ ಸೂಕ್ತ ಪುನರ್ವಸತಿ, ಭೂಮಿ, ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘದ ಕೊಡಗು ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.

ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ನಿರ್ವಾಣಪ್ಪ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ತೀವ್ರ ಭರದಿಂದ ಬೆಳೆ ಸಂಪೂರ್ಣ ನಾಶವಾಗಿ ಅಲ್ಲಿನ ಜನರು ಮುಂಬೈ, ಬೆಂಗಳೂರು ಮುಂತಾದೆಡೆಗಳಿಗೆ ಗುಳೆ ಹೋಗುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಸಾಕಷ್ಟು ಸಾವು ನೋವು ಉಂಟಾಗುವುದರ ಜತೆಗೆ ಬೆಳೆಗಳು ನಾಶವಾಗಿವೆ. ಇದರಿಂದಾಗಿ ಜನರು ಅನ್ನ ಆಹಾರಕ್ಕಾಗಿ ಪರದಾಡುವಂತಾಗಿದೆ. ದಾನಿಗಳು ಸಂತ್ರಸ್ತರಿಗೆ ಕಳುಹಿಸಿದ ವಸ್ತುಗಳು ಸರಿಯಾಗಿ ನಿರ್ವಹಣೆ ಇಲ್ಲದೆ ಪುಡಾರಿಗಳ ಪಾಲಾದರೆ, ಸಂತ್ರಸ್ತರಿಗಾಗಿ ಹರಿದುಬಂದ ಹಣವೂ ಕೂಡ ನೈಜ ಸಂತ್ರಸ್ತರನ್ನು ತಲುಪಿಲ್ಲ ಎಂದರು.

ಜಿಲ್ಲೆಯಲ್ಲಿ ಪರಿಸರಕ್ಕೆ ಧಕ್ಕೆ ತರುವ ಭೂ ಮಾಫಿಯಾ, ಅರಣ್ಯ ಮಾಫಿಯಾ, ಗಣಿಗಾರಿಕೆ, ಮೋಜು ಮಸ್ತಿನ ರೆಸಾರ್ಟ್ ಸಂಸ್ಕೃತಿಯನ್ನು ರದ್ದುಗೊಳಿಸಬೇಕು. ಪ್ರವಾಹದಿಂದ ಪ್ರಾಣ ಕಳೆದುಕೊಂಡ ಕುಟುಂಬಕ್ಕೆ 10 ಲಕ್ಷ ಮತ್ತು ಗಾಯಗೊಂಡವರಿಗೆ 2 ಲಕ್ಷ ಪರಿಹಾರ ನೀಡಬೇಕು. ಪ್ರವಾಹದಿಂದ ಭೂಮಿ ಕಳೆದುಕೊಂಡವರಿಗೆ 3 ಎಕರೆ ಭೂಮಿ ನೀಡಬೇಕು. ಪ್ರವಾಹದಿಂದ ಕೆಲಸವಿಲ್ಲದೆ ಪರದಾಡುತ್ತಿರುವ ಕೂಲಿ ಕಾರ್ಮಿಕರಿಗೆ 25 ಸಾವಿರ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.

ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಿರಾಶ್ರಿತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ತಹಸೀಲ್ದಾರ್ ಅವರನ್ನು ಅಮಾನತುಗೊಳಿಸಿ ಎಲ್ಲ ಕೇಸ್ ವಾಪಸ್ ತೆಗೆಯಬೇಕು. ಜಿಲ್ಲೆಯಲ್ಲಿರುವ 37 ಸಾವಿರ ಸಿ ಮತ್ತು ಡಿ ದರ್ಜೆ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸಬೇಕು. ಮಲೆನಾಡಿನ ಭೂಮಿಗೆ ಭೂಮಿತಿ ಕಾಯ್ದೆ ಜಾರಿಯಾಗಬೇಕು. ಉಳುವವನೇ ಭೂ ಒಡೆಯನೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಟಿ.ಆನಂದ, ಜಿಲ್ಲಾ ಮುಖಂಡ ಸಣ್ಣಪ್ಪ, ಎಂ.ಎಂ.ಸಿದ್ದಯ್ಯ, ಜಿಲ್ಲಾಧ್ಯಕ್ಷ ಮಂಜುನಾಥ್, ಬಿಎಸ್‌ಪಿ ಮುಖಂಡ ಮೊಣ್ಣಪ್ಪ ಪಾಲ್ಗೊಂಡಿದ್ದರು.