ಅಸಂಘಟಿತ ಕಾರ್ಮಿಕರಿಗೆ ಹಲವು ಯೋಜನೆ ಜಾರಿ

ಮಡಿಕೇರಿ: ಪ್ರಧಾನಮಂತ್ರಿ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಅಕ್ಕಸಾಲಿಗ ಕಾರ್ಮಿಕರ ಒಕ್ಕೂಟದ ಸಹಭಾಗಿತ್ವದಲ್ಲಿ ಶುಕ್ರವಾರ ನಗರದ ಬಾಲಭವನದಲ್ಲಿ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಯಾವುದೇ ವ್ಯಕ್ತಿಗೆ ತನ್ನನ್ನು ತಾನು ಗುರುತಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಸರ್ಕಾರ ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಅವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಮಡಿಕೇರಿ ಶಾಸಕರು ಮಾತನಾಡಿ, ಚಿನ್ನಕ್ಕೆ ಆಕರ್ಷಣೀಯ ರೂಪ ನೀಡಿದಾಗ ಮಾತ್ರ ಅದನ್ನು ಉಪಯೋಗಿಸಲು ಸಾಧ್ಯ. ಆ ಕೆಲಸದಲ್ಲಿ ಅಕ್ಕಸಾಲಿಗರ ವೃತ್ತಿ ನೈಪುಣ್ಯತೆ ಮೆಚ್ಚುವಂತದ್ದು ಹಾಗೂ ಪ್ರಮಾಣಪತ್ರ ಪಡೆದ ಪ್ರತಿಯೊಬ್ಬರೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಉಮೇಶ ಆಚಾರ್ಯ ಮಾತನಾಡಿ, ಪ್ರಧಾನಮಂತ್ರಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಯೋಜನೆಯನ್ನು 2014ರಲ್ಲಿ ಜಾರಿಗೆ ತರಲಾಗಿದ್ದು, ಮುರಾರ್ಜಿ ದೇಸಾಯಿ ಪ್ರಧಾನಮಂತ್ರಿ ಅವಧಿಯಲ್ಲಿ ಗೋಲ್ಡ್ ಕಂಟ್ರೋಲ್ ಕಾಯ್ದೆ ಜಾರಿಯಲ್ಲಿದ್ದ ಸಂದರ್ಭ ಕುಶಲಕರ್ಮಿಗಳಿಗೆ ಪರವಾನಗಿ ನೀಡಲಾಗಿತ್ತು. ನಂತರದಲ್ಲಿ ಗೋಲ್ಡ್ ಕಂಟ್ರೋಲ್ ಕಾಯ್ದೆ ರದ್ದುಪಡಿಸಿದ ನಂತರ ಚಿನ್ನದ ಕೆಲಸ ಮಾಡುವವರನ್ನು ಗುರುತಿಸುವ ಕಾರ್ಯ ನಡೆಯಲಿಲ್ಲ. ಈಗ ಅಕ್ಕಸಾಲಿಗರನ್ನು ಗುರುತಿಸುವ ಕಾರ್ಯ ನಡೆದಿದೆ. ಅಕ್ಕಸಾಲಿಗರಿಗೆ ಆರ್‌ಪಿಎಲ್(ಪೂರ್ವ ಕಲಿಕೆ ಗುರುತಿಸುವುದು) ಅನ್ವಯವಾಗುತ್ತದೆ. ಪೂರ್ವಜರು ಕಲಿತ ವಿದ್ಯೆಯನ್ನು ಈಗಿನ ಯುವಕರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಉಡುಪಿ, ಮಂಗಳೂರು, ಕೊಡಗು, ಮೈಸೂರು ಮತ್ತು ಚಾಮರಾಜನಗರ ವ್ಯಾಪ್ತಿಯ ಅಕ್ಕಸಾಲಿಗರಿಗೆ ತರಬೇತಿ ನೀಡಿ ಅವರಿಗೆ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಕೆ.ಕೆ.ಶ್ರೀನಿವಾಸ್, ಅಕ್ಕಸಾಲಿಗ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಕೆ.ರವಿ ಆಚಾರ್ಯ, ಎಂ.ಎ.ಮನೋಹರ್, ಬಿ.ಎಸ್.ಉಲ್ಲಾಸ್ ಶೇಟ್, ಸುರೇಶ್ ಜಿ.ಆಚಾರ್ಯ ಇತರರು ಇದ್ದರು.