More

    ಜಿಲ್ಲಾ ಪೊಲೀಸ್ ಇಲಾಖೆಗೆ ಕಾಯಕಲ್ಪ

    ಆದರ್ಶ್ ಅದ್ಕಲೇಗಾರ್ ಮಡಿಕೇರಿ
    ಜಿಲ್ಲೆಯ ಪೊಲೀಸ್ ಇಲಾಖೆಗೆ ಮತ್ತಷ್ಟು ಬಲ ತುಂಬಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಿದ್ದು, ಇಲಾಖೆಗೆ ಕಾಯಕಲ್ಪ ನೀಡಲು ಸಿದ್ಧತೆ ನಡೆಸುತ್ತಿದೆ.

    ವಾಹನ ದಟ್ಟಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಕಾಯಕಲ್ಪ ನೀಡಲು ಸಂಬಂಧಿಸಿದ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಜತೆಗೆ ಮಡಿಕೇರಿ ಹೊರವಲಯದಲ್ಲಿ ಕೆ.ನಿಡುಗಣೆ ಗ್ರಾಮದ ಸರ್ವೇ ನಂ.1/48ರಲ್ಲಿ 3.10 ಎಕರೆ ಜಾಗದಲ್ಲಿ ಪೊಲೀಸ್ ಇಲಾಖೆಯಿಂದ ನೂತನ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿದೆ.

    ಅಬ್ಬಿಜಲಪಾತಕ್ಕೆ ತೆರಳುವ ಮಾರ್ಗಬದಿ 55 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ವಿಶೇಷ ಸಂದರ್ಭಗಳಲ್ಲಿ ಪೊಲೀಸರಿಗೆ ಮಾರ್ಗದರ್ಶನ ಮತ್ತು ಅತಿಥಿಗೃಹವಾಗಿ ಈ ಭವನ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಅಲ್ಲದೆ ಮಡಿಕೇರಿ ನಗರ ಪೊಲೀಸ್ ಠಾಣೆ, ಮಹಿಳಾ ಠಾಣೆ, ಗ್ರಾಮಾಂತರ ಠಾಣೆ ಸಹಿತ ಪೊಲೀಸ್ ಮೈತ್ರಿಭವನ ಮತ್ತು ವಸತಿಗೃಹಗಳಲ್ಲಿ ಮೂಲ ಸೌಕರ್ಯಗಳೊಂದಿಗೆ ರಿಪೇರಿ ಕೈಗೊಳ್ಳಲಾಗುತ್ತಿದೆ.

    ಶಾಂತಿ ಸುವ್ಯವಸ್ಥೆಗೆ ಕ್ರಮ: ಕೊಡಗು-ಕೇರಳ ಗಡಿಯೊಂದಿಗೆ ಮಟ್ಟನೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣಕೊಡಗಿನ ಗಡಿಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ. ಆ ಮಾರ್ಗದಲ್ಲಿ ವೀರಾಜಪೇಟೆಯಲ್ಲಿ ಪ್ರತ್ಯೇಕ ಸಂಚಾರ ಪೊಲೀಸ್ ಠಾಣೆ ಆರಂಭಿಸುವುದರೊಂದಿಗೆ ಸಿಬ್ಬಂದಿ ಹೆಚ್ಚಳಕ್ಕೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿಯೂ ಪ್ರತ್ಯೇಕ ಸಂಚಾರ ಪೊಲೀಸ್ ಠಾಣೆಯನ್ನು ಆರಂಭಿಸುವುದು ಸೇರಿದಂತೆ, ವಾಹನಗಳ ನಿಲುಗಡೆ ಇತ್ಯಾದಿ ಮೂಲ ಸೌಕರ್ಯಕ್ಕಾಗಿ ಪ್ರಯತ್ನ ನಡೆಸಲಾಗಿದೆ ಎಂದು ಎಸ್‌ಪಿ ಡಾ.ಸುಮನ್.ಡಿ.ಪನ್ನೇಕರ್ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಅಪರಾಧಗಳ ನಿಯಂತ್ರಣದೊಂದಿಗೆ ರಸ್ತೆ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೊಂಡಿದ್ದು ಪೊಲೀಸ್ ಠಾಣೆಗಳು ಮತ್ತು ಪೊಲೀಸ್ ವಸತಿಗಳಿಗೂ ಕಾಯಕಲ್ಪಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts