More

    ಅಕ್ರಮ ವಲಸಿಗರ ಪತ್ತೆ ಕಾರ್ಯ ಶುರು

    ಮಡಿಕೇರಿ: ಅಕ್ರಮ ವಲಸಿಗರನ್ನು ಗುರುತಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಗುರುವಾರ ದಾಖಲಾತಿ ಪರಿಶೀಲನೆ ಕಾರ್ಯ ಆಯೋಜಿಸಲಾಗಿತ್ತು.

    ಗೋಣಿಕೊಪ್ಪ ನಗರದಲ್ಲಿ ಉಗ್ರರ ತರಬೇತಿ ಶಿಬಿರ, ಪಕ್ಕದ ಮಂಗಳೂರಿನಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತಗೊಂಡಿರುವ ಪೊಲೀಸ್ ಇಲಾಖೆ ಗುರುವಾರ ನಗರದ ಕ್ರಿಸ್ಟಲ್ ಕೋರ್ಟ್‌ನಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

    ಕಾಫಿ ಎಸ್ಟೇಟ್‌ಗಳಲ್ಲಿ ನೆಲೆಸಿರುವ ಸಹಸ್ರಾರು ಸಂಖ್ಯೆಯ ವಲಸಿಗ ಕಾರ್ಮಿಕರು ಪೊಲೀಸರ ಮುಂದೆ ದಾಖಲೆಗಳನ್ನು ಸಲ್ಲಿಸಿದರು. ವಿವಿಧ ಹಂತದಲ್ಲಿ ಪರಿಶೀಲನೆ ನಡೆಯಿತು. ಆಧಾರ್ ಕಾರ್ಡ್, ಪಾನ್ ಕಾರ್ಡ್, ವಾಸ ದೃಢೀಕರಣ ಸೇರಿ ಇನ್ನಿತರ ಪೂರಕ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. ಆನ್‌ಲೈನ್ ಮೂಲಕ ದಾಖಲೆಗಳನ್ನು 2 ಸುತ್ತಿನಲ್ಲಿ ಪರಿಶೀಲಿಸುವುದರ ಜತೆಗೆ ದಾಖಲೆಗಳಲ್ಲಿ ಅನುಮಾನವಿರುವವರನ್ನು ಗುರುತಿಸಿ ವಿಚಾರಣೆ ನಡೆಸಲಾಗಿದೆ.

    ವಲಸಿಗ ಕಾರ್ಮಿಕರ ಸೋಗಿನಲ್ಲಿ ಜಿಲ್ಲೆಗೆ ಅಪಾರ ಸಂಖ್ಯೆಯ ನೆರೆ ದೇಶದ ವಲಸಿಗರು ಅಕ್ರಮವಾಗಿ ಕಾಲಿಟ್ಟಿದ್ದಾರೆ. ಬಾಂಗ್ಲಾ ಸೇರಿ ಇನ್ನಿತರ ದೇಶಗಳಿಂದ ಗಡಿ ನುಸುಳಿ ಕೊಡಗಿನ ಕಾಫಿ ತೋಟಗಳಲ್ಲಿ ಕೆಲಸಕ್ಕೆ ಸೇರಿದ್ದಾರೆ ಎಂಬ ಮಾಹಿತಿ ಇದೆ. ವಲಸಿಗ ಕಾರ್ಮಿಕರಿಂದ ಆನೇಕ ದುಷ್ಕೃತ್ಯ ಕೂಡ ನಡೆದಿದ್ದು, ಪೊಲೀಸ್ ಇಲಾಖೆ ಕಾರ್ಮಿಕರ ಪತ್ತೆಗೆ ಕ್ರಮವಹಿಸಿತ್ತು. ಈ ಬಾರಿ ಪರಿಶೀಲನೆ ಕಾರ್ಯ ವ್ಯವಸ್ಥಿತವಾಗಿತ್ತು. ಆನ್‌ಲೈನ್‌ನಲ್ಲಿ ದಾಖಲೆಗಳ ಮರುಪರಿಶೀಲನೆಯಾಗುತ್ತಿದೆ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಸಲ್ಲಿಕೆಯಾದ ದಾಖಲೆಗಳನ್ನು ವಿಸ್ತೃತವಾಗಿ ಪರಿಶೀಲನೆಗೆ ಒಳಪಡಿಸಲಾಗಿತ್ತು. ಖುದ್ದು ಪೊಲೀಸ್ ಉಪ ವಿಭಾಗಧಿಕಾರಿ, ವೃತ್ತ ನಿರೀಕ್ಷಕರು, ಉಪನಿರೀಕ್ಷಕರು ದಾಖಲೆಗಳ ಪರಿಶೀಲನೆಯ ಜವಾಬ್ದಾರಿಯಲ್ಲಿ ತೊಡಗಿಸಿಕೊಂಡಿದ್ದರು.

    500 ದಾಖಲೆಗಳು ಅಪೂರ್ಣ: ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ನಡೆದ ದಾಖಲಾತಿ ಪರಿಶೀಲನೆಯಲ್ಲಿ 500 ದಾಖಲೆಗಳು ಅಪೂರ್ಣಗೊಂಡಿವೆ ಎಂದು ಎಸ್ಪಿ ಸುಮನ್ ಡಿ.ಪನ್ನೇಕರ್ ತಿಳಿಸಿದ್ದಾರೆ.

    ಮತದಾರರ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಅಂಕಪಟ್ಟಿ, ಸ್ಥಳೀಯ ಗ್ರಾಪಂ ದೃಢೀಕರಣ ಸೇರಿ ಇನ್ನಿತರ ಅಸಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗಿದೆ. ವೆಬ್‌ಸೈಟ್ ಮೂಲಕ ಆಧಾರ್ ಕಾರ್ಡ್‌ಗಳ ನೈಜಾಂಶ ಪರೀಕ್ಷಿಸಲಾಗಿದೆ. ಕೆಲವೊಂದು ದಾಖಲೆಗಳಲ್ಲಿ ಹೆಸರು ಬದಲಾಗಿರುವುದು ಕೂಡ ಕಂಡು ಬಂದಿದೆ.

    ಸುಮಾರು 500 ದಾಖಲೆಗಳು ಅಪೂರ್ಣವಾಗಿವೆ. ಅವರಿಗೆ ಸೂಕ್ತ ದಾಖಲೆ ಸಲ್ಲಿಸುವಂತೆ ಕಾಲಾವಕಾಶ ಕೂಡ ನೀಡಲಾಗಿದೆ. ಈ ಕಾರ್ಯಕ್ರಮ ಕೊನೆಯಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿರುವ ವಲಸಿಗ ಕಾರ್ಮಿಕರನ್ನು ಗುರುತಿಸಿ ಅವರ ದಾಖಲೆಗಳನ್ನು ಸಂಗ್ರಹಿಸಿ ಒಂದು ಮಾಹಿತಿಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.=

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts