ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ

ನಾಪೋಕ್ಲು: ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಲಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಿತಿಮೀರಿದ್ದು, ಇದರಿಂದಾಗಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ಆರೋಪಿಸಿ ಬಾವಲಿ ಗ್ರಾಮದ ಮಹಿಳಾ ಸಂಘಗಳು, ವಿವಿಧ ಸಂಘಸಂಸ್ಥೆಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದ ಅಂಗನವಾಡಿ ಕೇಂದ್ರದ ಜಂಕ್ಷನ್‌ನಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಕ್ರಮ ಮದ್ಯ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಲ್ಲೆಮೀರಿದ್ದು, ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಮದ್ಯ ಸೇವನೆಯಿಂದಾಗಿ ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇವರ ಕುಟುಂಬಸ್ಥರು ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಾರಾಣೆಯಲ್ಲಿ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ಇದ್ದ ಸಂದರ್ಭ ಗ್ರಾಮದಲ್ಲಿ ಅಕ್ರಮಕ್ಕೆ ಕಡಿವಾಣ ಬಿದ್ದಿತ್ತು. ಆದ್ದರಿಂದ ಅಬಕಾರಿ ಅಧಿಕಾರಿಗಳು ಎಂಎಸ್‌ಐಎಲ್ ಮಳಿಗೆಯನ್ನು ತೆರೆಯುವ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಕುಟ್ಟನ ಬೆಳ್ಯಪ್ಪ, ಮುಕ್ಕಾಟಿರ ಹರೀಶ್, ಕನ್ನಂಡ ಅಪ್ಪಣ್ಣ, ಕನ್ನಂಡ ಬೋಪಣ್ಣ, ದೇವಣೀರ ಅಜಿತ್, ದೇವಣೀರ ಅಚ್ಚಪ್ಪ, ಎಳ್ತಂಡ ದೇವಯ್ಯ, ಎಳ್ತಂಡ ದಿನೇಶ್, ಬಾಚಮಂಡ ತಮ್ಮಯ್ಯ, ನಾಳಿಯಂಡ ರಮೇಶ್, ಪೊಯ್ಯಟೀರ ಲತಾ ಕರುಂಬಯ್ಯ, ಕನ್ನಂಡ ಸರಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *