ಪ್ರಜ್ಞಾವಂತರೆ ಕಾನೂನು ಪಾಲಿಸದಿದ್ದಲ್ಲಿ ಹೇಗೆ ?

ಮಡಿಕೇರಿ: ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಪ್ರತಿಯೊಬ್ಬರೂ ಕಾನೂನು ಪರಿಪಾಲನೆ ಮಾಡುವಂತೆ ಮಾಧ್ಯಮಗಳು ಮಾಡಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೀರಪ್ಪ ವಿ. ಮಲ್ಲಾಪುರ ಕರೆ ನೀಡಿದರು.

ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಧ್ಯಮ ಕ್ಷೇತ್ರ ಮತ್ತು ಕಾನೂನು-ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಜ್ಞಾವಂತರು ಕಾನೂನು ಪರಿಪಾಲನೆ ಮಾಡದಿದ್ದಲ್ಲಿ ಬೇರೆ ಯಾರು ಮಾಡುತ್ತಾರೆಂದು ಪ್ರಶ್ನಿಸಿದರು.

ಸಂತ್ರಸ್ತರ ಬದುಕು ಸಂಕಷ್ಟದಾಯಕವಾಗುವ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಬಾರದು. ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾತ್ರ ನಿಬರ್ಂಧ ಇದೆ ಎಂದು ಭಾವಿಸಬಾರದು. ನ್ಯಾಯಾಲಯ ಮತ್ತು ನ್ಯಾಯಾಧೀಶರು ನಿಬರ್ಂಧಕ್ಕೆ ಒಳಪಟ್ಟು ಕಾರ್ಯನಿರ್ವಹಿಸಬೇಕೆಂದರು.

ಮಾಧ್ಯಮಗಳು ವಿವೇಚನೆಯಿಂದ ಮಾನವೀಯ ನೆಲೆಗಟ್ಟಿನಲ್ಲಿ ವರದಿ ಮಾಡಬೇಕು. ದೌರ್ಜನ್ಯಕ್ಕೆ ಒಳಗಾದವರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಬಾರದು. ದೌರ್ಜನ್ಯಕ್ಕೆ ಒಳಗಾದವರು ಹೆಸರು ಮತ್ತು ಗುರುತು ಮಾಧ್ಯಮಗಳಲ್ಲಿ ಬಹಿರಂಗಪಡಿಸುವುದು ಕಾನೂನು ಬಾಹಿರ ಎಂದು ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ಹೇಳಿದರು.

ಹೊಸ ಕಾನೂನು ಹಾಗೂ ಕಾನೂನಿಗೆ ಆಗಿರುವ ತಿದ್ದುಪಡಿ-ಸೇರ್ಪಡೆ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ತಪ್ಪುಗಳು ಮತ್ತೊಮ್ಮೆ ಆಗದಂತೆ ಎಚ್ಚರ ವಹಿಸಬೇಕು. ಮಹಿಳೆಯರು, ಮಕ್ಕಳು, ಎಸ್ಸಿ/ ಎಸ್ಟಿ ಪ್ರಕರಣಗಳ ವರದಿ ಮಾಡುವ ವೇಳೆ ಮುನ್ನೆಚ್ಚರಿಕೆ ವಹಿಸಬೇಕೆಂದು ಮಹಿಳೆ-ಮಕ್ಕಳು- ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಕಾನೂನು ವಿಷಯ ಕುರಿತು ವಿಷಯ ಮಂಡಿಸಿದ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ಹೇಳಿದರು.

ಮಕ್ಕಳು ಪ್ರಚೋದನೆ ಮತ್ತು ಪ್ರಭಾವಕ್ಕೆ ಒಳಗಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಅಪ್ರಾಪ್ತರ ಹೆಸರು ಮತ್ತು ಗುರುತು ಮಾಧ್ಯಮಗಳಲ್ಲಿ ಪ್ರಕಟಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅಪ್ತಾಪ್ತ ವಯಸ್ಕ ಮಕ್ಕಳು- ಕಾನೂನು ವಿಷಯದ ಕುರಿತು ವಿಷಯ ಮಂಡಿಸಿದ ಕೊಡಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟೀರ ಸೂರಜ್ ಹೇಳಿದರು.

ತೇಜೋವಧೆ ಮಾಡುವ ಉದ್ದೇಶದಿಂದ ವರದಿ ಮಾಡಿದ್ದಲ್ಲಿ ಅದು ಮಾನಹಾನಿ ವರದಿಯಾಗುತ್ತದೆ. ಯಾರ ಗೌರವಕ್ಕೂ ಧಕ್ಕೆಯಾಗುವ ರೀತಿ ವರದಿ ಮಾಡಬಾರದೆಂದು ಮಾನ ಹಾನಿ ವರದಿ- ಕಾನೂನು ವಿಷಯ ಕುರಿತು ವಿಷಯ ಮಂಡಿಸಿದ ಪ್ರಖ್ಯಾತ ಕ್ರಿಮಿನಲ್ ವಕೀಲ ಪಿ.ಕೃಷ್ಣಮೂರ್ತಿ ಹೇಳಿದರು.

ಸಂವಾದದಲ್ಲಿ ಹಿರಿಯ ಪತ್ರಕರ್ತರಾದ ಜಿ.ಚಿದ್ವಿಲಾಸ್, ಚಿ.ನಾ. ಸೋಮೇಶ್, ಎಚ್.ಡಿ. ಅನಿಲ್, ಕೆ.ಎ. ಆದಿತ್ಯ, ಬಿ.ಆರ್. ಸವಿತಾ ರೈ, ಗೋಪಾಲ್ ಸೋಮಯ್ಯ, ಆರ್. ಸುಬ್ರಮಣಿ, ಎಂ.ಎ. ಅಜೀಜ್, ಕಿಶೋರ್ ರೈ ಕತ್ತಲೆಕಾಡು, ಎಚ್.ಕೆ. ಜಗದೀಶ್, ಎ.ಎನ್.ವಾಸು, ಎಚ್.ಜೆ. ರಾಕೇಶ್, ಬಿ.ಎಸ್.ಲೋಕೇಶ್ ಸಾಗರ್ ಪಾಲ್ಗೊಂಡಿದ್ದರು.