ಅದ್ದೂರಿ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ

ಸ್ವಾಮಿಗೆ ಗಂಗೋಧಕ ಅಭಿಷೇಕ, ಉತ್ಸವ ಕಣ್ತುಂಬಿಕೊಂಡು ಭಕ್ತಿಭಾವ ಮೆರೆದ ಭಕ್ತರು

ವಿಜಯವಾಣಿ ಸುದ್ದಿಜಾಲ ಕುಶಾಲನಗರ
ಐತಿಹಾಸಿಕ ಹಿನ್ನೆಲೆಯ ಕಣಿವೆ ರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಶನಿವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ಹಿಂದು, ಮುಸ್ಲಿಂ, ಕ್ರೈಸ್ತರು ಒಟ್ಟಾಗಿ ನೆಲೆಸಿರುವ ಭಾವೈಕ್ಯತೆಯ ಊರಿನಲ್ಲಿ ನಡೆದ ರಥೋತ್ಸವದಲ್ಲಿ ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಗಡಿ ಗ್ರಾಮಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಕಾವೇರಿ ನದಿ ದಂಡೆಯಲ್ಲಿ ಪೂರ್ವಾಭಿಮುಖವಾಗಿರುವ ರಾಮಲಿಂಗೇಶ್ವರ, ಲಕ್ಷ್ಮಣೇಶ್ವರ ಹಾಗೂ ಹರಿಹರೇಶ್ವರ ಸನ್ನಿಧಿಯಲ್ಲಿ ಜರುಗಿದ ರಥೋತ್ಸವದಲ್ಲಿ ನವ ಜೋಡಿಗಳು ಮತ್ತು ಭಕ್ತರು ಹಣ್ಣು ಮತ್ತು ದವನ ಎಸೆಯುವ ಮೂಲಕ ಭಕ್ತಿ ಭಾವ ಸಮರ್ಪಿಸಿದರು.
ಬೆಳಗ್ಗೆಯಿಂದ ದೇವಾಲಯದಲ್ಲಿ ಧಾರ್ಮಿಕ ಪೂಜೋತ್ಸವಗಳು ಜರುಗಿದವು. ಸಂಪ್ರದಾಯದಂತೆ ಹೆಬ್ಬಾಲೆ ಗ್ರಾಮಸ್ಥರು ಕಾಶಿಯಿಂದ ಅಂಚೆ ಮೂಲಕ ಹೆಬ್ಬಾಲೆ ಬಸವೇಶ್ವರ ದೇವಾಲಯಕ್ಕೆ ಬರುವ ಪವಿತ್ರ ಗಂಗಾ ತೀರ್ಥವನ್ನು ಚಂಡೇ ವಾದ್ಯ, ವೀರಭದ್ರ ನೃತ್ಯ ಮತ್ತು ನಾದಸ್ವರದೊಂದಿಗೆ ಮೆರವಣಿಗೆಯಲ್ಲಿ ರಾಮಲಿಂಗೇಶ್ವರ ಸನ್ನಿಧಿಗೆ ತರಲಾಯಿತು. ತದನಂತರ ರಾಮಲಿಂಗೇಶ್ವರ ದೇವರಿಗೆ ಗಂಗೋಧಕದಿಂದ ಅಭಿಷೇಕ ಮಾಡಲಾಯಿತು.
ವಸಂತಮಾಧವ ಪೂಜೆ, ರಥ ಬಲಿ ಮೊದಲಾದ ಪೂಜಾವಿಧಿಗಳ ಬಳಿಕ ಉತ್ಸವಮೂರ್ತಿಯನ್ನು ಪುಷ್ಪ ಹಾಗೂ ವಸ್ತ್ರಗಳಿಂದ ಅಲಂಕೃತ ಗೊಂಡ ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರ ಹರ್ಷೋದ್ಘಾರಗಳಿಂದ ಗ್ರಾಮದ ಮುಖ್ಯ ಬೀದಿಯಲ್ಲಿ ರಥ ಸಂಚರಿಸಿತು. ಗ್ರಾಮದ ಮಧ್ಯ ಭಾಗದಲ್ಲಿರುವ ಬಸವೇಶ್ವರ ದೇವಸ್ಥಾನದ ಬಳಿ ಇರುವ ಅರಳಿ ಕಟ್ಟೆ ಬಳಿ ರಥ ಸಮಾಪ್ತಿಗೊಂಡ ನಂತರ ಸಂಜೆ ಸ್ವಸ್ಥಾನಕ್ಕೆ ಮರಳಿ ಎಳೆದು ತರಲಾಯಿತು.
ದೇವಾಲಯ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ ಮತ್ತು ನರಹರಿ ಶರ್ಮ ನೇತೃತ್ವದಲ್ಲಿ ಪೂಜಾ ವಿಧಿಗಳು ನಡೆದವು. ಗ್ರಾಮವನ್ನು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಊರಿನಲ್ಲಿ ಮಜ್ಜಿಗೆ, ಪಾನಕ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸರ್ಕಲ್ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಾರ್ಯದರ್ಶಿ ಶೇಷಾಚಲ, ಪ್ರಮುಖರಾದ ಪರಶಿವಮೂರ್ತಿ, ಇ.ಎಸ್. ಗಣೇಶ, ಕೆ.ಎಸ್. ಮಹೇಶ್, ಕೆ.ಸಿ. ನಂಜುಂಡಸ್ವಾಮಿ, ಮಧು, ಚಂದೂ ಇದ್ದರು.

ಕೋಟ್…
ಹತ್ತಾರು ವರ್ಷಗಳಿಂದ ದೇವಾಲಯ ಅಭಿವೃದ್ಧಿ ಕಾರ್ಯ ಗಳು ಭಕ್ತರ ಸಹಕಾರ ಮತ್ತು ದೇವರ ಅನುಗ್ರಹದಿಂದ ಸುಸ್ಥಿತಿಯಿಂದ ನಡೆದು ಕೊಂಡು ಬರುತ್ತಿದೆ. ಬಡ ಹೆಣ್ಣುಮಕ್ಕಳ ವಿವಾಹಕ್ಕೆ ಅತೀ ಕಡಿಮೆ ದರದಲ್ಲಿ ಕಲ್ಯಾಣ ಮಂಟಪ ಒದಗಿಸಲು ದೇವಾಲಯದ ಆವರಣದಲ್ಲಿ ಕಲ್ಯಾಣ ಮಂಟಪ ನಿರ್ಮಾಣಗೊಳ್ಳುತ್ತಿದೆ. ದಾನಿಗಳು ಸಹಕರಿಸಬೇಕು.

ಕೆ.ಎನ್. ಸುರೇಶ್ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ.

(ಚಿತ್ರ: 13ಎಂಡಿಕೆಎ2- ಐತಿಹಾಸಿಕ ಕಣಿವೆ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Leave a Reply

Your email address will not be published. Required fields are marked *