ಕೇಂದ್ರ-ರಾಜ್ಯ ಸರ್ಕಾರಗಳು ಕೈ ಜೋಡಿಸಲಿ

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗಿನಲ್ಲಿ ಕೇಂದ್ರ- ರಾಜ್ಯ ಸರ್ಕಾರಗಳು ಒಂದಾಗಿ ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕೆಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸಪೂಜಾರಿ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್‌ಸುಬ್ರಮಣಿ ಅವರೊಂದಿಗೆ ಸೋಮವಾರ ನೆರೆ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾತೀತವಾಗಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸಂತ್ರಸ್ತರಿಗೆ ಬದುಕು ಕಟ್ಟಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದರು.
ರಾಜ್ಯದ ದೃಷ್ಟಿ ಕೊಡಗಿನ ಮೇಲಿದೆ. 10-15 ಎಕರೆ ತೋಟ ಇದ್ದವರೂ ನಿರಾಶ್ರಿತರಾಗಿದ್ದಾರೆ. ನೂರಾರು ಜನರಿಗೆ ಕೆಲಸ ಕೊಡುತ್ತಿದ್ದವರು ಬೀದಿಗೆ ಬಿದ್ದಿದ್ದಾರೆ. ಸಾವಿರಾರು ಮನೆಗಳು ನೆಲಸಮಗೊಂಡಿವೆ. ಹತ್ತಾರು ಹಳ್ಳಿಗಳಲ್ಲಿ ಅಪಾರ ಹಾನಿವುಂಟಾಗಿದೆ. ಕಾಫಿ, ಕಾಳುಮೆಣಸು ಫಸಲು ಕಳೆದುಕೊಂಡಿದ್ದಾರೆ. ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡುವ ಅಗತ್ಯವಿದೆ ಎಂದರು.
ತಕ್ಷಣದ ಪರಿಹಾರ ಕ್ರಮಗಳೊಂದಿಗೆ ಶಾಶ್ವತ ಪರಿಹಾರ ಕ್ರಮಗಳ ಬಗ್ಗೆಯೂ ಗಮನಹರಿಸಬೇಕು. ಕೊಡಗಿನಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಯನ್ನು ಕೇಂದ್ರ- ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಒಂದಾಗಬೇಕು. ತಾನು ಕೂಡ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ತಿಳಿಸಿದರು.
ಪ್ರಕೃತಿ ವಿಕೋಪದ ಆಘಾತದಿಂದ ಹಲವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಸಾಕಷ್ಟು ಜನರು ವಲಸೆ ಹೋಗಿದ್ದಾರೆ. ಎಲ್ಲೆಡೆಯಿಂದ ಅಗತ್ಯ ವಸ್ತುಗಳು ಬಂದಿದ್ದು, ಶಾಶ್ವತ ಪರಿಹಾರಕ್ಕಾಗಿ ಆರ್ಥಿಕ ನೆರವು ಒದಗಿಸುವ ಅಗತ್ಯತೆವಿದೆ ಎಂದು ಹೇಳಿದರು.