ಸರ್ಕಾರಿ ಮನೆಗೆ ಮೂಲ ಸವಲತ್ತುಗಳಿಲ್ಲ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸರ್ಕಾರ ನೀಡಲು ಉದ್ದೇಶಿಸಿರುವ ಮನೆಗಳ ಪೈಕಿ 115 ಮನೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಅಗತ್ಯ ಮೂಲ ಸವಲತ್ತು ಒದಗಿಸದೇ ಇದ್ದುದರಿಂದ ಸಂತ್ರಸ್ತ ಕುಟುಂಬಗಳಿಗೆ ಮನೆ ಹಸ್ತಾಂತರಿಸಲು ಅಡ್ಡಿಯಾಗುತ್ತಿದೆ. ರಸ್ತೆ, ನೀರು, ಚರಂಡಿ ಸೇರಿ ಅಗತ್ಯ ಕಾಮಗಾರಿ ಇನ್ನಷ್ಟೆ ಕೈಗೆತ್ತಿಕೊಳ್ಳಬೇಕಾಗಿದೆ.

ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಬುಧವಾರ ಮನೆ ಕಾಮಗಾರಿ ಪರಿಶೀಲನೆ ವೇಳೆ ಈ ಅಂಶ ಬೆಳಕಿಗೆ ಬಂದಿದೆ. ಹಲವು ಸಚಿವರು ನೀಡುತ್ತಿದ್ದ ಮನೆ ಹಸ್ತಾಂತರ ಭರವಸೆ ಹುಸಿಯಾಗಿದೆ. ಮೂಲ ಸವಲತ್ತು ಒದಗಿಸುವ ಹೊತ್ತಿಗೆ 3 ತಿಂಗಳು ಕಳೆಯಲಿದೆ ಎಂದು ಕಾಮಗಾರಿ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳು ಹೇಳುತ್ತಾರೆ.

ಮನೆ ಕಾಮಗಾರಿ ಪೂರ್ಣಗೊಂಡ ಬಳಿಕ 6 ತಿಂಗಳು ಖಾಲಿ ಬಿಟ್ಟರೆ ಮನೆ ಹಾಳಾಗುತ್ತದೆ. ಆದ್ದರಿಂದ ಅಗತ್ಯ ಮೂಲ ಸವಲತ್ತು ಒದಗಿಸುವುದರ ಮೂಲಕ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಕರ್ಣಂಗೇರಿಯಲ್ಲಿ ಗುಣಮಟ್ಟದ ಮನೆ ಕಟ್ಟಲಾಗಿದೆ. ನಟಿ ಹರ್ಷಿಕಾ ಪೂಣಚ್ಚ ಯಾವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆಂದು ಗೊತ್ತಿಲ್ಲ. ಮನೆ ಕಾಮಗಾರಿ ಕಳಪೆಯಾಗಿರುವುದನ್ನು ಗಮನಕ್ಕೆ ತಂದಲ್ಲಿ ಸರಿಪಡಿಸಲಾಗುವುದೆಂದು ಸಚಿವರು ಭರವಸೆ ನೀಡಿದರು.

ಕರ್ಣಂಗೇರಿ ಗ್ರಾಮದಲ್ಲಿ 35, ಮದೆನಾಡಿನಲ್ಲಿ 80, ಜಂಬೂರಿನಲ್ಲಿ 113 ಮನೆ ಕಾಮಗಾರಿ ಪೂರ್ಣಗೊಂಡಿದೆ. 9.85 ಲಕ್ಷ ರೂ. ವೆಚ್ಚದಲ್ಲಿ 2 ಕೋಣೆಯ ಮನೆಯನ್ನು ರಾಜೀವ್‌ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಕಟ್ಟಿದೆ. ಜಂಬೂರಿನಲ್ಲಿ ಒಟ್ಟು 400 ಮನೆ ಕಾಮಗಾರಿ ವಿವಿಧ ಹಂತದಲ್ಲಿದೆ. ಇದೇ ಜಾಗದಲ್ಲಿ ಇನ್ಫೋಸಿಸ್ ಫೌಂಡೇಶನ್ 200 ಮನೆ ನಿರ್ಮಿಸುತ್ತಿದೆ.

415 ಮನೆ ಸಂಪೂರ್ಣ ಹಾನಿಗೀಡಾಗಿದ್ದು, 405 ಮನೆಗಳು ಅಪಾಯಕಾರಿ ಮಟ್ಟದಲ್ಲಿ ಹಾನಿಗೀಡಾಗಿವೆ. ಸಂಪೂರ್ಣ ಹಾನಿಗೀಡಾದ ಮನೆ ಮಾಲೀಕರಿಗೆ ಮಾಸಿಕ 10 ಸಾವಿರ ರೂ. ಮನೆ ಬಾಡಿಗೆ ನೀಡಲಾಗುತ್ತಿದೆ. ಸರ್ಕಾರಿ ಮನೆಗಳನ್ನು ಜಿಲ್ಲೆಯ 5 ಸ್ಥಳದಲ್ಲಿ ಕಟ್ಟಲು ಉದ್ದೇಶಿಸಲಾಗಿದ್ದು, ಗಾಳಿಬೀಡು-ಸಂಪಾಜೆಯಲ್ಲಿ ಇನ್ನು ಕೆಲವಕ್ಕೆ ಕಾಮಗಾರಿ ಪ್ರಾರಂಭವಾಗಬೇಕಾಗಿದೆ.

ಗಾಳಿಬೀಡು, ಸಂಪಾಜೆಯಲ್ಲಿ ಮನೆ ಕಟ್ಟಲು ಉದ್ದೇಶಿಸಿರುವ ಸ್ಥಳದಲ್ಲಿರುವ ಮರಗಳನ್ನು ತೆರವುಗೊಳಿಸುವ ಪ್ರಕ್ರಿಯೆ ವಿಳಂಬವಾಗಿರುವುದು ತೊಡಕಾಗಿದೆ. ತಕ್ಷಣ ಮರಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮಡಿಕೇರಿ ಡಿಸಿಎಫ್ ಮರಿಯಾ ಕ್ರಿಸ್ತರಾಜುಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *