ಮಡಿಕೇರಿ ಕೋಟೆ ಸ್ವಚ್ಛತೆಗೆ ಚಾಲನೆ

ಮಡಿಕೇರಿ: ಗಿಡಗಂಟಿಗಳು ಬೆಳೆದಿದ್ದ ಮಡಿಕೇರಿ ಕೋಟೆ ಆವರಣ ಸ್ವಚ್ಛಗೊಳಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಗಿದೆ. ಗ್ರೀನ್ ಸಿಟಿ ಫೋರಂ ಪ್ರಯತ್ನದ ಫಲವಾಗಿ ಇದೀಗ ಭಾರತೀಯ ಪುರಾತತ್ವ ಇಲಾಖೆ ಗಿಡಗಂಟಿಗಳನ್ನು ತೆರವುಗೊಳಿಸುವ ಕೆಲಸ ಕೈಗೆತ್ತಿಕೊಂಡಿದೆ.

ಏಳು ಕಾರ್ಮಿಕರು ಕೋಟೆ ಆವರಣದಲ್ಲಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸುತ್ತಿದ್ದಾರೆ. ಕೋಟೆಯ ಒಳಭಾಗ ಹಾಗೂ ಹೊರಭಾಗದಲ್ಲಿ ಬೆಳೆದಿರುವ ಗಿಡಗಂಟಿ ತೆರವುಗೊಳಿಸುವ ಕೆಲಸದಲ್ಲಿ ತೊಡಗಿದ್ದಾರೆ. ಭಾರತೀಯ ಪುರಾತತ್ವ ಇಲಾಖೆ ಬೆಂಗಳೂರಿನ ಕಚೇರಿ ಮುಖ್ಯಸ್ಥೆ ಮೂರ್ತೇಶ್ವರಿ ಶನಿವಾರ ಮಡಿಕೇರಿಗೆ ಆಗಮಿಸಿ ಕಾಮಗಾರಿ ಪರಿಶೀಲಿಸಿದರು.

ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ನಿರ್ದೇಶಕ ಪಿ.ಕೃಷ್ಣಮೂರ್ತಿ ಕೋಟೆ ಆವರಣ ಸ್ವಚ್ಛತೆ ಮತ್ತು ಐತಿಹಾಸಿಕ ಕಟ್ಟಡದ ಸಂರಕ್ಷಣೆ ಬಗ್ಗೆ ಮೂರ್ತೇಶ್ವರಿ ಅವರೊಂದಿಗೆ ಚರ್ಚಿಸಿದರು.
‘ಕಾಡುಪಾಲಾಗುತ್ತಿರುವ ಮಡಿಕೇರಿ ಕೋಟೆ’ ಶಿರೋನಾಮೆಯಡಿ ‘ವಿಜಯವಾಣಿ’ಯಲ್ಲಿ ಗಮನ ಸೆಳೆಯುವ ವಿಶೇಷ ವರದಿ ಪ್ರಕಟವಾಗಿತ್ತು.

Leave a Reply

Your email address will not be published. Required fields are marked *