ತುಳು ಭಾಷಿಕರ ಪರಂಪರೆ ಉಳಿಸಲು ಕಾರ್ಯಕ್ರಮ

ಮಡಿಕೇರಿ: ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾ ಸಮಿತಿ ಪ್ರಮುಖರ ಸಭೆ ಕೂಟದ ಅಧ್ಯಕ್ಷ ಶೇಖರ್ ಭಂಡಾರಿ ಅಧ್ಯಕ್ಷತೆಯಲ್ಲಿ ಹೋಟೆಲ್ ಸಮುದ್ರ ಸಭಾಂಗಣದಲ್ಲಿ ನಡೆಯಿತು.

ಜಿಲ್ಲೆಯಲ್ಲಿ ತುಳು ಭಾಷಿಕರ ಕ್ಷೇಮಾಭಿವೃದ್ಧಿಗೆ ಸಂಘ ಅಸ್ತಿತ್ವಕ್ಕೆ ಬಂದಿದ್ದು, ತುಳು ಬಾಂಧವರ ಪದ್ಧತಿ ಪರಂಪರೆ ಉಳಿಸಿ ಬೆಳೆಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಹಲವು ಕಾರ್ಯಕ್ರಮ ಆಯೋಜಿಸಲಾಗುವುದೆಂದು ಅಧ್ಯಕ್ಷರು ಹೇಳಿದರು.

ಜಿಲ್ಲಾ ಸಮಿತಿ ಸೇರಿ 3 ತಾಲೂಕು ಸಮಿತಿಗಳನ್ನು ಆಗಸ್ಟ್‌ನಲ್ಲಿ ಪುನರ್ ರಚಿಸಿ ಸಂಘಟನೆ ಬಲಿಷ್ಠಗೊಳಿಸಲಾಗುವುದೆಂದರು.

ಜಿಲ್ಲಾ ಗೌರವ ಸಲಹೆಗಾರ ಬಿ.ಬಿ.ಐತ್ತಪ್ಪ ರೈ ಮಾತನಾಡಿ, ಜಿಲ್ಲೆಯಲ್ಲಿ ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸದಸ್ಯತ್ವ ಶುಲ್ಕ ಹೆಚ್ಚಿಸಬೇಕು. ಸದಸ್ಯತ್ವ ಅಭಿಯಾನ ಆಯೋಜಿಸುವುದು ಸೂಕ್ತ. ಗ್ರಾಮೀಣ ಪ್ರದೇಶಗಳಿಗೆ ಸಂಘದ ಪ್ರಮುಖರು ತೆರಳಿ ಸಂಘಟನೆ ಬಲಪಡಿಸಬೇಕೆಂದರು.

ಜಿಲ್ಲಾ ಸ್ಥಾಪಕ ಸಲಹೆಗಾರ ಕೆ.ಆರ್.ಬಾಲಕೃಷ್ಣ ರೈ ಮಾತನಾಡಿ, ಸಂಘದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡುವ ಮೂಲಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗುವಂತೆ ನೋಡಿಕೊಳ್ಳಬೇಕೆಂದರು. ಆಗಸ್ಟ್‌ನಲ್ಲಿ ನಡೆಯುವ ಮಹಾಸಭೆಯಲ್ಲಿ ಸಮಿತಿಗಳನ್ನು ಉತ್ತಮ ರೀತಿಯಲ್ಲಿ ರಚಿಸುವಂತಾಗಬೇಕೆಂದರು.

ಜಿಲ್ಲಾ ಉಪಾಧ್ಯಕ್ಷ ಬಿ.ವೈ.ಆನಂದ ರಘು ಮಾತನಾಡಿ, ಜಿಲ್ಲೆಯಲ್ಲಿ 13 ತುಳು ಭಾಷಿಕ ಸಮುದಾಯವಿದ್ದು, ತುಳುವೆರ ಜನಪದ ಕೂಟದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮುದಾಯದ ಪ್ರಮುಖ ನಾಯಕರು ಕೂಟದ ಜವಾಬ್ದಾರಿಯುತ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಮೂಲಕ ಸಂಘಟನೆಗೆ ಶಕ್ತಿ ತುಂಬಬೇಕೆಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಮಾತನಾಡಿ, ಜಿಲ್ಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳುವುದರೊಂದಿಗೆ ತುಳು ಸಂಸ್ಕೃತಿ ಅನಾವರಣಗೊಳಿಸಬೇಕು. ಇದಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರ ಪಡೆಯಬೇಕೆಂದರು.

ಸಭೆಯಲ್ಲಿ ಮಂಗಳೂರಿನ ಹರೀಶ್ ಆಳ್ವ, ಜಿಲ್ಲಾ ಉಪಾಧ್ಯಕ್ಷ ಸಂಧ್ಯಾ ಗಣೇಶ್ ರೈ, ಮಡಿಕೇರಿ ತಾಲೂಕು ನಿರ್ದೇಶಕರಾದ ಆರ್.ಬಿ.ರವಿ, ಲೀಲಾ ಶೇಷಮ್ಮ, ಮಡಿಕೇರಿ ನಗರ ಘಟಕ ಪ್ರಧಾನ ಕಾರ್ಯದರ್ಶಿ ಕಿಶೋರ್‌ಕುಮಾರ್, ತಾಲೂಕು ಸದಸ್ಯ ಜಗದೀಶ್ ಆಚಾರ್ಯ ಇದ್ದರು.

Leave a Reply

Your email address will not be published. Required fields are marked *