ನಕಲಿ ಅಂಕಪಟ್ಟಿ ಪ್ರಕರಣದ ಶಿಕ್ಷೆಗೆ ತಡೆಯಾಜ್ಞೆ

ಮಡಿಕೇರಿ: ನಕಲಿ ಅಂಕ ಪಟ್ಟಿ ಪ್ರಕರಣಕ್ಕೆ ಅನಿತಾ ಕಾರ್ಯಪ್ಪಗೆ ಶಿಕ್ಷೆ ವಿಧಿಸಿ ಪೊನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಮೋಹನ್‌ಗೌಡ ನೀಡಿದ ತೀರ್ಪಿಗೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ. ರಮಾ ತಡೆಯಾಜ್ಞೆ ನೀಡಿದ್ದಾರೆ.
ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಕಿರಿಯ ಗುಮಾಸ್ತ ಹುದ್ದೆಗೆ 2004 ರಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿದ್ದಾರೆಂದು ಅಧ್ಯಕ್ಷ ಅಡ್ಡಂಡ ಡಾಲಿ ಜನಾರ್ದನ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಪೊನ್ನಂಪೇಟೆ ನ್ಯಾಯಾಲಯ 3 ವರ್ಷ ಸಜೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿತ್ತು.
ಈ ತೀರ್ಪಿಗೆ ತಡೆಯಾಜ್ಞೆ ಕೋರಿ ವಿರಾಜಪೇಟೆಯಲ್ಲಿರುವ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನಕಲಿ ಅಂಕಪಟ್ಟಿ ಎನ್ನಲು ಯಾವುದೇ ದಾಖಲೆ, ಸಾಕ್ಷಿ ಸಲ್ಲಿಸಿಲ್ಲ. ಸಹಕಾರ ಸಂಘದ ನಿಯಮದಂತೆ ಕಿರಿಯ ಗುಮಾಸ್ತ ಹುದ್ದೆಯ ಕನಿಷ್ಠ ವಿದ್ಯಾರ್ಹತೆ ಪಿಯುಸಿ ಮತ್ತು ಜಿಡಿಸಿ ಆಗಿದ್ದು, ತಾನು ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದೇನೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅನಿತಾ ಪರ ವಕೀಲ ಎಸ್.ವಿ.ಸುರೇಶ್ ವಾದಿಸಿದರು.

Leave a Reply

Your email address will not be published. Required fields are marked *