ದಸರಾ ಕ್ರೀಕೂಟದಲ್ಲಿ ಸ್ಪರ್ಧಿಗಳ ಸಂಭ್ರಮ

ಮಡಿಕೇರಿ ತಾಲೂಕು ಮಟ್ಟದ ಕ್ರೀಡಾಕೂಟ

ಮಡಿಕೇರಿ: ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಬುಧವಾರ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ 100 ಮೀಟರ್, 200 ಮೀ, 400ಮೀ, 5000 ಮೀ. ಓಟಗಳು, ಉದ್ದಜಿಗಿತ, ಎತ್ತರಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಎಸೆತ, ಡಿಸ್ಕಸ್ ಎಸೆತ, 110 ಮೀ ಹರ್ಡಲ್ಸ್, 4*100 ಮೀ ರಿಲೇ, 4*400 ಮೀ ರಿಲೆ ಓಟಗಳಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ವಿವಿಧಡೆಯಿಂದ ಆಗಮಿಸಿದ್ದ ಕ್ರೀಡಾಪಟುಗಳು ಉತ್ಸಾಹದಿಂದಲೇ ಭಾಗವಹಿಸಿದ್ದರು. ಗುಂಪು ಸ್ಪರ್ಧೆಗಳಾದ ವಾಲಿಬಾಲ್, ಕಬಡ್ಡಿ, ಫುಟ್‌ಬಾಲ್, ಬಾಸ್ಕೆಟ್‌ಬಾಲ್, ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್ ಸ್ಪರ್ಧೆಗಳಲ್ಲಿ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದರು.

ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಟಿ.ಕಿರಣ್ ಕಾರ್ಯಪ್ಪ ಉದ್ಘಾಟಿಸಿ ಮಾತನಾಡಿ, ಕ್ರೀಡಾಪಟುಗಳು ಕ್ರೀಡಾಮನೋಭಾವನೆ ಬೆಳೆಸಿಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಜಯಗಳಿಸಿದವರು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಲಿದ್ದಾರೆ. ಸೆ.20 ರಂದು ಕೊಡಗು ಜಿಲ್ಲಾ ಮಟ್ಟದ ಕ್ರೀಡಾಕೂಟವು ಕೂಡಿಗೆ ಕ್ರೀಡಾ ಶಾಲೆ ಹಾಗೂ ಡಯಟ್ ಆಟದ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಮಾಣ ಪತ್ರ ಹಾಗೂ ಮೆಡಲ್ ನೀಡಿ ಗೌರವಿಸಲಾಯಿತು.

ತಾ.ಪಂ.ಸದಸ್ಯೆ ಉಮಪ್ರಭು, ಜಿ.ಪಂ.ಸದಸ್ಯೆ ತುಂತಜೇರ ಕುಮುದಾ ರಶ್ನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದೇರ್ಶಕಿ ಜಯಲಕ್ಷ್ಮೀ ಬಾಯಿ ಇತರರು ಇದ್ದರು.

Leave a Reply

Your email address will not be published. Required fields are marked *