ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿ ರಚನೆ

ಮಡಿಕೇರಿ: ಇತ್ತೀಚೆಗೆ ಆಯೋಜಿಸಿದ್ದ ನಗರ ಕಾಂಗ್ರೆಸ್ ಸಭೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿ ರಚಿಸಲಾಯಿತು.

ಪಕ್ಷದ ನಗರಾಧ್ಯಕ್ಷ ಕೆ.ಯು.ಅಬ್ದುಲ್‌ರಜಾಕ್ ನೇತೃತ್ವದಲ್ಲಿ ಪ್ರತಿ ಮುಂಚೂಣಿ ಘಟಕಗಳ ಅಧ್ಯಕ್ಷರನ್ನು ಒಳಗೊಂಡಂತೆ 100ಕ್ಕೂ ಹೆಚ್ಚು ಸ್ವಯಂ ಸೇವಕರು ಸಮಿತಿಯಲ್ಲಿದ್ದಾರೆ.

ನಗರದ 23 ವಾರ್ಡ್‌ಗಳಿಗೆ ನಗರಸಭಾ ಆಯುಕ್ತರನ್ನು ಮಾತ್ರ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇನ್ನೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಜಿಲ್ಲಾಧಿಕಾರಿಗೆ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿತು.

ಕಳೆದ ವರ್ಷ ಮಡಿಕೇರಿ ನಗರದಲ್ಲಿ ಹೆಚ್ಚು ಹಾನಿಗೀಡಾದ ಪ್ರದೇಶಗಳಾದ ಚಾಮುಂಡೇಶ್ವರಿ ನಗರ, ಇಂದಿರಾನಗರ, ಅಜಾದ್ ನಗರ, ರಾಜೇಶ್ವರಿ ನಗರ, ತ್ಯಾಗರಾಜ ಕಾಲನಿ, ಸುಬ್ರಮಣ್ಯ ನಗರ, ಮಂಗಳಾದೇವಿ ನಗರಗಳನ್ನು ಅತೀ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಇಲ್ಲಿನ ಜವಾಬ್ದಾರಿಯನ್ನು ನೂತನ ಸಮಿತಿಯ ಸ್ವಯಂ ಸೇವಕರಿಗೆ ವಹಿಸಲಾಯಿತು.

ನಗರಾಧ್ಯಕ್ಷ ಕೆ.ಯು.ಅಬ್ದುಲ್‌ರಜಾಕ್ ಮಾತನಾಡಿ, ನಗರದ ಪ್ರತಿ ವಾರ್ಡ್‌ಗಳಲ್ಲಿ ಸಂಚರಿಸಲಿರುವ ನಿರ್ವಹಣಾ ಸಮಿತಿ, ಜನರ ಸಮಸ್ಯೆಗಳನ್ನು ಆಲಿಸಿ ಸರ್ಕಾರದಿಂದ ನೆರವನ್ನು ದೊರಕಿಸಿಕೊಡಲಿದೆ. ಮೂಲ ಸೌಲಭ್ಯಗಳ ಅಗತ್ಯತೆಯ ಕುರಿತು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟು ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ನಗರಸಭೆ ಮಾಜಿ ಅಧ್ಯಕ್ಷ ಕಾವೇರಮ್ಮ ಸೋಮಣ್ಣ, ಸದಸ್ಯರಾದ ಪ್ರಕಾಶ್ ಆಚಾರ್ಯ, ತಜಸ್ಸುಂ, ಗಿಲ್ಬರ್ಟ್ ಲೋಬೋ, ಮಹಿಳಾ ನಗರಾಧ್ಯಕ್ಷೆ ಫ್ಯಾನ್ಸಿ ಪಾರ್ವತಿ ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *