ಸಂತ್ರಸ್ತರಿಗೆ ಸಚಿವರ ಸ್ವಂತ ಖರ್ಚಿನಲ್ಲಿ ಹೊಸ ಬಟ್ಟೆ

ಮಡಿಕೇರಿ: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಮ್ಮ ಸ್ವಂತ ಹಣದಲ್ಲಿ ಹೊಸಬಟ್ಟೆ ಕೊಡಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆಯನ್ವಯ 572 ಪುರುಷರಿಗೆ ಶರ್ಟ್, 620 ಮಹಿಳೆಯರಿಗೆ ಸೀರೆ, 113 ಬಾಲಕರಿಗೆ ಹೊಸಬಟ್ಟೆ, 137 ಬಾಲಕಿಯರಿಗೆ ಡ್ರೆಸ್ ಕೊಡಿಸಿದ್ದಾರೆ.

ಮೈತ್ರಿ ಪೊಲೀಸ್ ಸಮುದಾಯ ಭವನದ ಪರಿಹಾರ ಕೇಂದ್ರದಲ್ಲಿ ಸಚಿವರು ಸಾಂಕೇತಿಕವಾಗಿ ಬಟ್ಟೆ ವಿತರಿಸಿದರು. ಜೆಡಿಎಸ್ ಮುಖಂಡರೊಂದಿಗೆ ಅಲ್ಲಿಯೇ ಮಧ್ಯಾಹ್ನದ ಭೋಜನ ಸೇವಿಸಿದರು.

ಪ್ರಕೃತಿ ವಿಕೋಪ ಸಂತ್ರಸ್ತರೊಂದಿಗೆ ರಾಜ್ಯ ಸರ್ಕಾರ, ಜನತೆ ಇದ್ದಾರೆ. ಈ ಸಂದೇಶ ನೀಡುವ ಉದ್ದೇಶದಿಂದ ಗೌರಿ ಹಬ್ಬಕ್ಕೆ ಉಡುಗೊರೆ ನೀಡಲಾಗಿದೆ. ಸಂತ್ರಸ್ತರಲ್ಲಿ ವಿಶ್ವಾಸ ತುಂಬುವ ಕೆಲಸ ಆಗಬೇಕಿದೆ. ಶಾಶ್ವತ ಪರಿಹಾರ ಆಗುವವರೆಗೂ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಚೆಕ್ ಮೂಲಕ ಬಾಡಿಗೆ ಹಣ ನೀಡಲಾಗುವುದೆಂದು ಸಚಿವರು ಹೇಳಿದರು.

ನಗರದ ಸಂತ್ರಸ್ತರಿಗೆ ಮಡಿಕೇರಿ ವ್ಯಾಪ್ತಿಯ ಸಿ ಆ್ಯಂಡ್ ಡಿ ಜಾಗದಲ್ಲಿ ನಿವೇಶನ ನೀಡಲಾಗುವುದು. ಮನೆ ಕಳೆದುಕೊಂಡಿರುವವರಿಗೆ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 6 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಕೊಡಲಾಗುತ್ತದೆ. ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳುವವರಿಗೆ 6 ಲಕ್ಷ ರೂ. ನೀಡಲಾಗುವುದೆಂದರು.

ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಎಂ.ಪಿ. ಸುನೀಲ್ ಸುಬ್ರಮಣಿ, ತಹಸೀಲ್ದಾರ್ ಕುಸುಮಾ, ಡಿವೈಎಸ್ಪಿ ಕೆ.ಎಸ್. ಸುಂದರ್‌ರಾಜ್ ಇದ್ದರು.