ಕೈ ಟಿಕೆಟ್‌ಗಾಗಿ 17 ಆಕಾಂಕ್ಷಿಗಳಿಂದ ಕೆಪಿಸಿಸಿಗೆ ಅರ್ಜಿ

 ಮಡಿಕೇರಿ: ಕೊಡಗು ಜಿಲ್ಲೆಯ 2 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಲು 17 ಆಕಾಂಕ್ಷಿಗಳು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಗೆ ಅರ್ಜಿ ಸಲ್ಲಿಸಿದ್ದಾರೆ. ಮಡಿಕೇರಿ ಕ್ಷೇತ್ರದಿಂದ ಸುಪ್ರೀಂಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಹಾಗೂ ವಿರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಮುಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ಅರ್ಜಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ.

ಮಡಿಕೇರಿ ಕ್ಷೇತ್ರಕ್ಕೆ 8 ಹಾಗೂ ವಿರಾಜಪೇಟೆ ಕ್ಷೇತ್ರಕ್ಕೆ 9 ಆಕಾಂಕ್ಷಿಗಳು ಟಿಕೆಟ್ ಕೇಳಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ 2 ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿರುವುದರಿಂದ ಆಕಾಂಕ್ಷಿಗಳ ಪೈಕಿ ತಲಾ ಇಬ್ಬರ ಹೆಸರನ್ನು ಎಐಸಿಸಿಗೆ ಶಿಫಾರಸ್ಸು ಮಾಡಲು ಕೆಪಿಸಿಸಿ ವರಿಷ್ಠರು ಕಸರತ್ತು ನಡೆಸುತ್ತಿದ್ದಾರೆ. ಇನ್ನೆರಡು ದಿನದೊಳಗೆ ಇಬ್ಬರ ಹೆಸರು ಅಂತಿಮಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಡಿಕೇರಿ ಕ್ಷೇತ್ರದ ಇದುವರೆಗಿನ ಟಿಕೆಟ್ ಆಕಾಂಕ್ಷಿಗಳ ಪಟ್ಟಿಗೆ ಎಐಸಿಸಿ ವಕ್ತಾರರಾಗಿರುವ ಸುಪ್ರೀಂಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಸೇರ್ಪಡೆಗೊಂಡಿರುವುದು ವಿಶೇಷ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಹಂಬಲ ಹೊಂದಿದ್ದಾರೆಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇದೀಗ ವಿಧಾನಸಭೆ ಚುನಾವಣೆಯತ್ತ ಆಸಕ್ತಿ ತೋರಿರುವುದು ಕುತೂಹಲ ಮೂಡಿಸಿದೆ.

ಎಂಎಲ್ಸಿ ಚುನಾವಣೆಯಲ್ಲಿ ಸೋಲು ಅನುಭವಿಸಿದ ಹೈಕೋರ್ಟ್ ವಕೀಲ ಎಚ್.ಎಸ್.ಚಂದ್ರಮೌಳಿ, ಎಐಟಿಯುಸಿ ಮೂಲಕ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮದೇ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಿರುವ ನಾಪಂಡ ಮುತ್ತಪ್ಪ, ಕಳೆದ ಬಾರಿ ಸೋಲು ಅನುಭವಿಸಿದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಸುಂಟಿಕೊಪ್ಪ ಕ್ಷೇತ್ರದ ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ, ಮಾದಾಪುರ ಕ್ಷೇತ್ರದ ಜಿಪಂ ಸದಸ್ಯೆ ಕುಮುದಾ ಧರ್ಮಪ್ಪ, ನಿವೃತ್ತ ಕೆಎಎಸ್ ಅಧಿಕಾರಿ ಜೆ.ಇ.ವಿರುಪಾಕ್ಷಯ್ಯ ಟಿಕೆಟ್ ಕೇಳಿದ್ದಾರೆ. ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂಬ ಹಕ್ಕೊತ್ತಾಯದೊಂದಿಗೆ ಮಡಿಕೇರಿಯ ಮನ್ಸೂರ್ ಅಹಮ್ಮದ್ ಅರ್ಜಿ ಸಲ್ಲಿಸಿದ್ದಾರೆ.

ವಿರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವುದು ವಿಶೇಷ. ಮುಡಾ ಅಧ್ಯಕ್ಷೆಯಾಗಿ ತಮ್ಮ ಕೆಲಸದ ಮೂಲಕ ಗಮನ ಸೆಳೆದಿರುವ ಸುರಯ್ಯ, ಮುಸ್ಲಿಂ ಮತದಾರರು ಗಣನೀಯ ಸಂಖ್ಯೆಯಲ್ಲಿರುವ ವಿರಾಜಪೇಟೆ ಕ್ಷೇತ್ರದತ್ತ ಕಣ್ಣು ಹಾಕಿರುವುದು ಕುತೂಹಲ ಮೂಡಿಸಿದೆ.

ಮಾಜಿ ಎಂಎಲ್ಸಿ ಚೆಪ್ಪುಡೀರ ಅರುಣ್ ಮಾಚಯ್ಯ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷೆ ಕೇಚಮಾಡ ಸರಿತಾ ಪೂಣಚ್ಚ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ಅದೇಂಗಡ ತಾರ ಅಯ್ಯಮ್ಮ, ವಿಟ್ಲ ಕ್ಷೇತ್ರದ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಟಿಕೆಟ್ ಕೇಳಿದ್ದಾರೆ.

ಗೆಲುವು ಸಾಧಿಸುವ ಅರ್ಹತೆ ಹೊಂದಿರುವ ಅಭ್ಯರ್ಥಿಯ ಆಯ್ಕೆಗಾಗಿ ಜಾತಿ- ಧರ್ಮದ ಸಮೀಕರಣ, ಹಣ ಬಲ, ಜನ ಬಲದ ಲೆಕ್ಕಚಾರ ಮುಂದಿಟ್ಟುಕೊಂಡು ಕೆಪಿಸಿಸಿ ವರಿಷ್ಠರು ಕಸರತ್ತು ನಡೆಸುತ್ತಿದ್ದಾರೆ. ಬಂಡಾಯಕ್ಕೆ ಆಸ್ಪದವಾಗದಂತೆ ಮತ್ತು ಭಿನ್ನಾಭಿಪ್ರಾಯ ಸ್ಫೋಟಗೊಳ್ಳದಂತೆ ಎಚ್ಚರ ವಹಿಸುವ ಸವಾಲು ವರಿಷ್ಠರ ಮೇಲಿದೆ. ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.

 

ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಗೆಲ್ಲುವ ಅಭ್ಯರ್ಥಿಯ ಆಯ್ಕೆಗಾಗಿ ಚರ್ಚೆ ನಡೆಯುತ್ತಿದೆ. ಇನ್ನೆರಡು ದಿನದಲ್ಲಿ ಎರಡು ಕ್ಷೇತ್ರದಲ್ಲಿಯೂ ಸ್ಪರ್ಧಿಸಲು ತಲಾ ಇಬ್ಬರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ.
| ಶಾಂತೆಯಂಡ ವೀಣಾ ಅಚ್ಚಯ್ಯ ಎಂಎಲ್ಸಿ

Leave a Reply

Your email address will not be published. Required fields are marked *