ಸಂಬರಗಿ/ಮುರಗುಂಡಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಶ್ವಾಸನೆ ನೀಡಿದಂತೆ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ತರಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರಾಜೇಂದ್ರ ಐಹೊಳೆ ಒತ್ತಾಯಿಸಿದ್ದಾರೆ.
ಸಮೀಪದ ಮುರಗುಂಡಿ ಗ್ರಾಮದಲ್ಲಿ ಬುಧವಾರ ಮಾದಿಗ ಮೀಸಲು ಹೋರಾಟ ಸಮಿತಿ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾದಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮುಖಂಡರು ಜನರನ್ನು ಜಾಗೃತಗೊಳಿಸಿ ಒಗ್ಗಟ್ಟು ಮೂಡಿಸಬೇಕು. ಸದಾಶಿವ ಆಯೋಗದ ವರದಿ ಜಾರಿಗೆ ಬರುವವರೆಗೆ ಹೋರಾಟಕ್ಕೆ ಸಜ್ಜಾಗಬೇಕು.
ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಹೋರಾಡಲು ಮುಂದೆ ಬರಬೇಕು. ರಾಜ್ಯದ ಬಿಜೆಪಿ ನಾಯಕರು ಕೊಟ್ಟಿರುವ ಆಶ್ವಾಸನೆ ಈಡೇರಿಸುವ ವಿಶ್ವಾಸವಿದೆ ಎಂದರು. ಅಥಣಿ ಪುರಸಭೆ ಮಾಜಿ ಅಧ್ಯಕ್ಷ ರಾವಸಾಬ ಐಹೊಳೆ, ಬರಮು ಮಗಾಡೆ, ಕುಮಾರ ಸೊಡ್ಡಿ, ಹನುಮಂತ ಅರ್ದಾವೂರ, ಪ್ರಶಾಂತ ರಜಪೂತ, ಪರಶುರಾಮ ಐಹೊಳೆ, ಅಶೋಕ ಸೊಡ್ಡಿ, ಸುನಿಲ ಪವಾರ, ಅಜಯ ಧುಳಗಾಂವೆ, ಆನಂದ ಮಾದರ ಇತರರು ಇದ್ದರು.