ದಸರೆಗೆ ಅಗತ್ಯ ತಯಾರಿ ಮಾಡಿಕೊಳ್ಳಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

ಮಡಿಕೇರಿ: ಜನೋತ್ಸವ ಮಡಿಕೇರಿ ದಸರಾ ಉತ್ಸವಕ್ಕೆ ವಿವಿಧ ಇಲಾಖೆಗಳು ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಸರಾ ಸಿದ್ಧತೆ ಕುರಿತು ಮಂಗಳವಾರ ಅಧಿಕಾರಿಗಳ ಜತೆ ಅಯೋಜಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶಿಷ್ಟ ಹಾಗೂ ಸಾಂಪ್ರದಾಯಿಕವಾಗಿ ಜನೋತ್ಸವ ದಸರಾ ನಡೆಯಲಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರಥಮ ಆದ್ಯತೆಯಾಗಬೇಕೆಂದು ನಿರ್ದೇಶನ ನೀಡಿದರು.
ದಸರಾ ಸಂದರ್ಭ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡುವುದು, ಆಂಬುಲೆನ್ಸ್- ತುರ್ತು ಆರೋಗ್ಯ ಸೇವೆ ಕಲ್ಪಿಸುವುದು, ಅಗ್ನಿಶಾಮಕ ದಳ ಸಿಬ್ಬಂದಿ ಅಗತ್ಯ ಸೇವೆ ಒದಗಿಸುವುದು, ಮಹಿಳಾ ಸ್ವ-ಸಹಾಯ ತಂಡಗಳಿಗೆ ಕಾರ್ಯಕ್ರದಲ್ಲಿ ಭಾಗವಹಿಸಲು ಅನುಕೂಲ ವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಕೆಸ್ಸಾರ್ಟಿಸಿ ವತಿಯಿಂದ ಹೆಚ್ಚುವರಿ ವಿಶೇಷ ಬಸ್‌ಗಳನ್ನು ನಿಯೋಜಿಸಬೇಕು. ರಾಜಸೀಟ್ ಉದ್ಯಾನ ಸೇರಿದಂತೆ ಸರ್ಕಾರಿ ಕಚೇರಿಗಳ ಕಟ್ಟಡಗಳಿಗೆ ಮೂರು ದಿನ ದೀಪಾಲಂಕಾರ ಮಾಡಬೇಕು ಎಂದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಮಡಿಕೇರಿ ಜನೋತ್ಸವ ದಸರಾಗೆ ಈಗಾಗಲೇ ವಿವಿಧ ಸಮಿತಿ ರಚಿಸಲಾಗಿದ್ದು, ಸಮಿತಿಗಳ ಜತೆ ವಿವಿಧ ಇಲಾಖಾಧಿಕಾರಿಗಳ ಸಹಕಾರ ಅತ್ಯಗತ್ಯ ಎಂದು ಮನವಿ ಮಾಡಿದರು.
ಮಡಿಕೇರಿ ನಗರ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಪೌರಯುಕ್ತ ಎಂ.ಎಲ್. ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ ಕೆ.ಮೋಹನ್, ಡಿಡಿಪಿಐ ಮಚ್ಚಾಡೋ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಕೆ.ರಾಧ, ಅಗ್ನಿಶಾಮಕ ಅಧಿಕಾರಿ ಚಂದನ್, ತೋಟಗಾರಿಕೆ ಇಲಾಖೆ ಡಿಡಿ ಚಂದ್ರಶೇಖರ್, ಡಿಡಿಪಿಯು ಕೆಂಚಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡಿ ಕೆ.ಟಿ.ದರ್ಶನ್, ಸಿಐ ಅನೂಪ್ ಮಾದಪ್ಪ, ನಗರಸಭೆ ಇಂಜಿನಿಯರ್‌ಗಳಾದ ನಾಗರಾಜು, ವನಿತಾ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *