ಮಧ್ಯಪ್ರದೇಶದಲ್ಲಿ ಗೆಲುವಿನ ಹಾವು ಏಣಿ ಆಟ; ಬಿಜೆಪಿಗೆ ‘ಕೈ’ ಕೊಡುವುದೇ ಅದೃಷ್ಟ?

ನವದೆಹೆಲಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಅತಿಹೆಚ್ಚು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಮಧ್ಯಪ್ರದೇಶದಲ್ಲಿ ಫಲಿತಾಂಶ ಏರುಪೇರಾಗುತ್ತಲೇ ಸಾಗಿದೆ. ಒಮ್ಮೆ ಕಾಂಗ್ರೆಸ್‌ ಮೇಲುಗೈ ಸಾಧಿಸಿದರೆ, ಮತ್ತೊಮ್ಮೆ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ.

ಸತತ 15 ವರ್ಷಗಳಿಂದಲೂ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯನ್ನು ಮಣಿಸಿ ಕಾಂಗ್ರೆಸ್‌ ಗದ್ದುಗೆ ಏರುವ ಹುಮ್ಮಸ್ಸಿನಲ್ಲಿದ್ದರೆ, ಇತ್ತ ಬಿಜೆಪಿ ನಾಲ್ಕನೇ ಬಾರಿಗೆ ತನ್ನ ಅಧಿಕಾರ ಸ್ಥಾಪಿಸಲು ತವಕಿಸುತ್ತಿದೆ. ಮತಎಣಿಕೆ ಆರಂಭದಿಂದಲೂ ಎರಡು ಪ್ರಮುಖ ಪಕ್ಷಗಳು ತೀವ್ರ ಪೈಪೋಟಿ ನೀಡುತ್ತಲೇ ಸಾಗಿವೆ.

230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ಮ್ಯಾಜಿಕ್‌ ನಂಬರ್‌ 116ನ್ನು ಗಳಿಸಿದ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ. ಸದ್ಯಕ್ಕೆ ಕಾಂಗ್ರೆಸ್‌ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 104 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಎಸ್‌ಪಿ 2 ಮತ್ತು ಇತರರು 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ನ. 28ರಂದು ನಡೆದಿದ್ದ ಚುನಾವಣೆಯಲ್ಲಿ ಶೇ. 75ರಷ್ಟು ಮತದಾನವಾಗಿತ್ತು. 5.03 ಕೋಟಿ ಜನರು ಮತದಾನ ಮಾಡಿದ್ದರು. ಇನ್ನು 2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 165 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ರಚಿಸಿತ್ತು. ಕಾಂಗ್ರೆಸ್‌ 58 ಮತ್ತು ಬಿಎಸ್‌ಪಿಯು 4 ಸ್ಥಾನಗಳಲ್ಲಿ ಜಯ ಸಾಧಿಸಿದ್ದರೆ, ಇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದರು.

ಚುನಾವಣೋತ್ತರ ಸಮೀಕ್ಷೆಯಲ್ಲಿಯೂ ಕಾಂಗ್ರೆಸ್‌ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ. ಇತರರು ಎರಡು ಪಕ್ಷಗಳ ಸರ್ಕಾರ ರಚನೆಗೂ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಹೇಳಿತ್ತು. ಅದರಂತೆ ಇದೀಗ ಯಾವ ಪಕ್ಷಕ್ಕೆ ಸರಳ ಬಹುಮತ ಸಿಗಲಿದೆ ಎಂಬುದನ್ನು ಕೊನೆವರೆಗೂ ಕಾದುನೋಡಬೇಕಿದೆ. (ಏಜೆನ್ಸೀಸ್)