ಮಧ್ಯಪ್ರದೇಶ ಆಯ್ತು, ಈಗ ರಾಜಸ್ಥಾನ, ಛತ್ತೀಸಗಢದ ಸಿಎಂ ಆಯ್ಕೆ ಕಗ್ಗಂಟು

ನವದೆಹಲಿ: ಮಧ್ಯಪ್ರದೇಶದ ಸಿಎಂ ಆಯ್ಕೆ ಕಗ್ಗಂಟನ್ನು ಒಂದು ದಿನವಿಡೀ ಚರ್ಚಿಸಿ ಬಿಡಿಸಿರುವ ರಾಹುಲ್​ ಗಾಂಧಿ ಅವರು ಇಂದು ಮತ್ತೆರಡು ಬಿಗಿಗಂಟುಗಳನ್ನು ಬಿಡಿಸಲು ಹರಸಾಹಸ ಪಡುತ್ತಿದ್ದಾರೆ. ಛತ್ತೀಸಗಢದ ಮುಖ್ಯಮಂತ್ರಿ ಆಯ್ಕೆ ಅಷ್ಟೊಂದು ಕಷ್ಟವಾಗದೆ ಇದ್ದರೂ, ರಾಜಸ್ಥಾನ ಮಾತ್ರ ಮಧ್ಯಪ್ರದೇಶಕ್ಕಿಂತಲೂ ಹೆಚ್ಚು ಸಮಸ್ಯಾತ್ಮಕವಾಗಿವೆ. ಹೀಗಾಗಿ ಇಂದು ಚರ್ಚೆ ನಡೆಸಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುತ್ತದೆ.

ಮೂಲಗಳ ಪ್ರಕಾರ ಕಾಂಗ್ರೆಸ್​ ಹೈಕಮಾಂಡ್​ಗೆ ಆಶೋಕ್​ ಗೆಹ್ಲೋಟ್​ರನ್ನು ಮುಖ್ಯಮಂತ್ರಿಯಾಗಿಸಬೇಕೆಂಬ ಮನಸ್ಸಿದೆ. ಆದರೆ, ನಾಲ್ಕು ವರ್ಷದಿಂದ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ತಾವೇ ಮುಖ್ಯಮಂತ್ರಿ ಹುದ್ದೆಗೇರಬೇಕೆಂದು ಸಚಿನ್​ ಪೈಲಟ್​ ಪಟ್ಟು ಹಿಡಿದು ಕುಳಿತಿದ್ದಾರೆ. ಇಬ್ಬರೂ ನಾಯಕರು ಹೈಕಮಾಂಡ್​ ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಇಬ್ಬರ ಮಾತುಗಳನ್ನು ಆಲಿಸಿರುವ ರಾಹುಲ್​ ಇಂದು ತಮ್ಮ ನಿರ್ಧಾರ ತಿಳಿಸುವ ಸಾಧ್ಯತೆಗಳಿವೆ.

ಜೈಪುರಕ್ಕೆ ತೆರಳಲೆಂದು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆಶೋಕ್​ ಗೆಹ್ಲೋಟ್​ ಅವರನ್ನು ಗುರುವಾರ ಮೂರು ಬಾರಿ ಪುನಃ ಕರೆಸಿ ರಾಹುಲ್​ ಗಾಂಧಿ ಸಮಾಲೋಚನೆ ನಡೆಸಿದ್ದಾರೆ. ಹೀಗಾಗಿ ಜೈಪುರಕ್ಕೆ ತೆರಳಲು ಗೆಹ್ಲೋಟ್​ ನಡೆಸಿದ ಮೂರು ಪ್ರಯತ್ನಗಳು ವಿಫಲವಾಗಿವೆ.

ರಾಜಸ್ಥಾನಕ್ಕೆ ವೀಕ್ಷರಾಗಿ ಬಂದಿರುವ, ಕರ್ನಾಟಕ ಕಾಂಗ್ರೆಸ್​ನ ಉಸ್ತುವಾರಿಯೂ ಆಗಿರುವ ಕೆ.ಸಿ ವೇಣುಗೋಪಾಲ್​ ಈ ಕುರಿತು ಮಾತನಾಡಿದ್ದು, ” ರಾಜಸ್ಥಾನದಲ್ಲಿ ಸಿಎಂ ಆಯ್ಕೆ ಸುಲಭದ್ದಾಗಿಲ್ಲ. ಆದರೂ, ಸಿಎಂ ಆಯ್ಕೆ ಆಗಲೇಬೇಕು. ಶುಕ್ರವಾರ ರಾಹುಲ್​ ಗಾಂಧಿ ಅವರು ನಿರ್ಧಾರ ತಿಳಿಸಲಿದ್ದಾರೆ,” ಎಂದು ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಉಂಟಾಗಿರುವ ಸಮಸ್ಯೆ ಕುರಿತು ರಾಹುಲ್​ ಗಾಂಧಿ ಅವರು ಯುಪಿಎ ಅಧ್ಯಕ್ಷೆಯೂ ಆಗಿರುವ ಸೋನಿಯಾ ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ನಡುವೆ ಛತ್ತೀಸಗಢದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿರುವ ಭೂಪೇಶ್​ ಬಗೇಲ್​ ಮತ್ತು ಟಿಎಸ್​ ಸಿಂಗ್​ ಡಿಯೋ ಅವರನ್ನೂ ಇಂದು ದೆಹಲಿಗೆ ಬರುವಂತೆ ಹೈಕಮಾಂಡ್​ ಸೂಚಿಸಿದೆ. ಬಹುತೇಕ ಛತ್ತೀಸ್​ಗಢದ ಸಮಸ್ಯೆಯೂ ಇಂದೇ ಬಗೆಹರಿಯುವ ಸಾಧ್ಯತೆಗಳಿವೆ.