ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ ಪುತ್ರನ ಆಸ್ತಿ ಮೌಲ್ಯ 660 ಕೋಟಿ ರೂ.

ಚಿಂದ್ವಾರ (ಮಧ್ಯಪ್ರದೇಶ): ಮಧ್ಯಪ್ರದೇಶದ ಚಿಂದ್ವಾರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸತ್ತಿರುವ ಸಿಎಂ ಕಮಲ್​ನಾಥ್​ ಅವರ ಪುತ್ರ ನಕುಲ್​ ನಾಥ್​ ಅವರು ತಮ್ಮ ಬಳಿ 660 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ನಕುಲ್​ ಅವರು ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದು, ಅವರ ಒಟ್ಟು ಆಸ್ತಿ ಮೌಲ್ಯ ಕಮಲ್​ನಾಥ್​ ಅವರ ಆಸ್ತಿಗಿಂಗಲೂ 5 ಪಟ್ಟು ಹೆಚ್ಚಿದೆ. ಕಮಲ್​ನಾಥ್​ ಅವರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 124 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿದ್ದರು.

ಉದ್ಯಮಿಯಾಗಿರುವ ನಕುಲ್​ ನಾಥ್​ ಅವರು ಒಟ್ಟು 615.93 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದು, 41.77 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿಯ ಹೆಸರಿನಲ್ಲಿ 2.30 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಆದರೆ ಇವರು ಮತ್ತು ಇವರ ಪತ್ನಿ ಯಾವುದೇ ವಾಹನವನ್ನು ಹೊಂದಿಲ್ಲ. ನಕುಲ್ ಬಳಿ 896.669 ಗ್ರಾಂ ಚಿನ್ನ, 7,630 ಕಿಲೋ ಬೆಳ್ಳಿ, 147.58 ಕ್ಯಾರೆಟ್ ವಜ್ರ ಮತ್ತು 78.45 ಲಕ್ಷ ರೂ. ಮೌಲ್ಯದ ಹರಳು ಆಭರಣಗಳಿದ್ದರೆ ಪತ್ನಿ ಪ್ರಿಯಾ ಬಳಿ 270.332 ಗ್ರಾಂ ಚಿನ್ನ, 162 .84 ಕ್ಯಾರೆಟ್ ವಜ್ರದ ಆಭರಣ ಗಳಿವೆ ಎಂದು ನಕುಲ್​ ತಮ್ಮ ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

2017-18ರಲ್ಲಿ ನಕುಲ್​ನಾಥ್​ ಅವರು ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ತಾವು ವಾರ್ಷಿಕ 2.76 ಕೋಟಿ ರೂ. ಆದಾಯ ಹೊಂದಿರುವುದಾಗಿ ಮತ್ತು ಪತ್ನಿ ವಾರ್ಷಿಕ 4.18 ಕೋಟಿ ರೂ. ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು. (ಏಜೆನ್ಸೀಸ್​)