ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕನ ಹತ್ಯೆ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಜಿ ಸಿಎಂ ಆಕ್ರೋಶ

ಬಾರ್ವಾನಿ: ಮಧ್ಯಪ್ರದೇಶದ ಬಿಜೆಪಿ ನಾಯಕ ಮನೋಜ್‌ ಠಾಕ್ರೆ ಅವರ ಮೃತದೇಹ ಇಂದು ಬಾರ್ವಾನಿಯ ಮೈದಾನದಲ್ಲಿ ಪತ್ತೆಯಾಗಿದ್ದು, ಒಂದೇ ವಾರದ ಅಂತರದಲ್ಲಿ ರಾಜ್ಯದಲ್ಲಿ ಕೊಲೆಯಾದ ಎರಡನೇ ಬಿಜೆಪಿ ನಾಯಕರಾಗಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಒಬ್ಬರಾದ ನಂತರ ಮತ್ತೊಬ್ಬ ಬಿಜೆಪಿ ನಾಯಕನ ಸಾವು ಒಂದು ಕ್ರೂರ ಜೋಕ್‌ ಆದಂತಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಚೂರುಚೂರು ಮಾಡಿದೆ. ಬಿಜೆಪಿ ನಾಯಕರು ಒಬ್ಬರಾದಂತೆ ಮತ್ತೊಬ್ಬರು ಕೊಲೆಯಾಗುತ್ತಿರುವುದು ಗಂಭೀರ ವಿಚಾರ. ಆದರೆ ರಾಜ್ಯ ಸರ್ಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಡಹಗಲಲ್ಲೇ ಪ್ರಸಿದ್ಧ ಬಿಜೆಪಿ ನಾಯಕನ ಹತ್ಯೆಯಾಗಿದೆ ಎಂದು ಹೇಳಿದ್ದಾರೆ.

ಕ್ರಿಮಿನಲ್‌ಗಳು ಬಲಿಷ್ಠರಾಗುತ್ತಿದ್ದಾರೆ ಮತ್ತು ಕಾಂಗ್ರೆಸ್‌ ಸರ್ಕಾರದ ಅಡಿಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸದಿದ್ದರೆ ಬಿಜೆಪಿ ಹೋರಾಟಕ್ಕಿಳಿಯಬೇಕಾಗುತ್ತದೆ. ಕ್ರಿಮಿನಲ್‌ಗಳು ಆರಾಮಾಗಿ ಅಡ್ಡಾಡುತ್ತಿದ್ದಾರೆ ಮತ್ತು ಮುಗ್ಧರು ಕೊಲೆಯಾಗುತ್ತಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ಠಾಕ್ರೆ ಇಂದು ಮುಂಜಾನೆ ಎಂದಿನಂತೆ ವಾಕಿಂಗ್‌ಗೆ ತೆರಳಿದ್ದರು. ಬಳಿಕ ಹಿಂದಿರುಗಿರಲಿಲ್ಲ. ನಂತರ ಬಲ್ವಾಡಿಯ ಸೇಂದ್ವಾ ರಸ್ತೆಯ ಸಮೀಪವಿದ್ದ ಮೈದಾನದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ದುಷ್ಕರ್ಮಿಗಳು ಅವರ ತಲೆಗೆ ದೊಡ್ಡದಾದ ಕಲ್ಲಿನಿಂದ ಬಲವಾದ ಪೆಟ್ಟು ನೀಡಿ ಕೊಲೆ ಮಾಡಿದ್ದಾರೆ. ರಕ್ತದ ಕಲೆಗಳಿದ್ದ ಕಲ್ಲು ಕೂಡ ಅಲ್ಲೇ ಸಮೀಪದಲ್ಲಿ ಪತ್ತೆಯಾಗಿದೆ.

ಠಾಕ್ರೆ ಸ್ಥಳೀಯ ನಾಯಕ ಮತ್ತು ಪಕ್ಷದ ಸರ್ಕಲ್‌ ಮುಖ್ಯಸ್ಥನಾಗಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ವಾರ್ಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ನಾಯಕ ಪ್ರಹ್ಲಾದ್‌ ಬಂದ್ವಾರ್‌(50) ಎಂಬವರನ್ನು ಸಾರ್ವಜನಿಕ ಸ್ಥಳದಲ್ಲೇ ಗುಂಡಿಟ್ಟು ಹತ್ಯೆಮಾಡಲಾಗಿತ್ತು. (ಏಜೆನ್ಸೀಸ್)