ಮಹಿಳಾ ಪ್ರಧಾನ ಚಿತ್ರದಲ್ಲಿ ಮಾಧುರಿ

ಕ್ಯಾನ್ಸರ್​ಗೆ ತುತ್ತಾಗಿದ್ದ ನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ಈಗ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ತಾಹಿರ್ ಸಿನಿಮಾ ನಿರ್ದೇಶನ ಮಾಡುವ ತಯಾರಿಯನ್ನೂ ನಡೆಸಿದ್ದಾರಂತೆ. ಕಿರುಚಿತ್ರದ ಮೂಲಕ ವೃತ್ತಿ ಆರಂಭಿಸಿದ ತಾಹಿರಾ, ಇದೀಗ ಪೂರ್ಣ ಪ್ರಮಾಣದ ಸಿನಿಮಾ ಮಾಡಲು ಹೊರಟಿದ್ದಾರೆ.

ಅವರ ಮೊದಲ ನಿರ್ದೇಶನದ ಚಿತ್ರದಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಪ್ರಧಾನ ಪಾತ್ರ ನಿಭಾಯಿಸಲಿದ್ದಾರೆ ಎಂಬುದು ವಿಶೇಷ. ‘ಶರ್ವ ಜೀ ಕೀ ಬೇಟಿ’ ಶೀರ್ಷಿಕೆಯ ಈ ಚಿತ್ರದಲ್ಲಿ ನಗರ ಪ್ರದೇಶದ ಮಹಿಳೆಯ ಜೀವನವನ್ನು ತಾಹಿರಾ ತೆರೆಮೇಲೆ ತೋರಿಸಲಿದ್ದಾರಂತೆ. ಮಾಧುರಿ ಲೇಖಕಿಯಾಗಿ ಕಾಣಿಸಿಕೊಂಡರೆ, ಇನ್ನೋರ್ವ ನಟಿ ಸಯಾಮಿ ಖೇರ್ ಮಾಡರ್ನ್ ಹುಡುಗಿಯಾಗಿ, ಕ್ರಿಕೆಟ್ ಪ್ರೇಮಿಯಾಗಿ ಬಣ್ಣ ಹಚ್ಚಲಿದ್ದಾರೆ.

ಈಗಾಗಲೇ ‘ಶರ್ವ..’ ಚಿತ್ರದ ಕಥೆ ಕೇಳಿ ಮಾಧುರಿ ಮತ್ತು ಸಯಾಮಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ತಾಹಿರಾ ಇನ್ನು ಒಂದೂವರೆ ತಿಂಗಳು ಬೆಡ್​ರೆಸ್ಟ್​ನಲ್ಲಿರಲಿದ್ದಾರೆ. ಅದಾದ ಬಳಿಕ ಮಾರ್ಚ್ ವೇಳೆಗೆ ಸಿನಿಮಾ ಸೆಟ್ಟೇರಲಿದೆಯಂತೆ. ಇತ್ತ 2018ರಲ್ಲಿ ಮರಾಠಿಯಲ್ಲಿ ತೆರೆಕಂಡ ‘ಬಕೆಟ್ ಲಿಸ್ಟ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮಾಧುರಿ, ಇದೀಗ ಮಹಿಳಾ ಪ್ರಧಾನ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಜತೆಗೆ ‘ಟೋಟಲ್ ಧಮಾಲ್’, ‘ಕಳಂಕ್’ ಚಿತ್ರಗಳಲ್ಲಿಯೂ ಮಾಧುರಿ ನಟಿಸುತ್ತಿದ್ದಾರೆ. -ಏಜೆನ್ಸೀಸ್