ಪುಣೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಕಣಕ್ಕೆ?

ಮುಂಬೈ: 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪುಣೆ ಲೋಕಸಭಾ ಕ್ಷೇತ್ರದಿಂದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ನೆನೆ ಅವರನ್ನು ಕಣಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಜೂನ್‌ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಪಕ್ಷದ ಸಂಪರ್ಕ್‌ ಫಾರ್‌ ಸಮರ್ಥನ್‌(ಬೆಂಬಲಕ್ಕಾಗಿ ಭೇಟಿ) ಕಾರ್ಯಕ್ರಮದ ವೇಳೆ ನಟಿ ಮಾಧುರಿ ದೀಕ್ಷಿತ್‌ ಅವರ ಮುಂಬೈ ನಿವಾಸಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ವಿವರಿಸಿದ್ದರು.

ಈ ಕುರಿತು ಬಿಜೆಪಿ ಹಿರಿಯ ನಾಯಕ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿ, ಪುಣೆ ಲೋಕಸಭೆ ಕ್ಷೇತ್ರದಿಂದ ಪಕ್ಷದ ಆಯ್ಕೆಪಟ್ಟಿಯಲ್ಲಿ ಮಾಧುರಿ ದೀಕ್ಷಿತ್‌ ಅವರ ಹೆಸರಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾಧುರಿ ಅವರನ್ನು ಅಭ್ಯರ್ಥಿಯನ್ನಾಗಿಸಲು ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಪುಣೆಯ ಲೋಕಸಭಾ ಕ್ಷೇತ್ರವೇ ಅವರಿಗೆ ಸೂಕ್ತ ಎಂದು ಭಾವಿಸಲಾಗಿದೆ ಎಂದು ಹೇಳಿದ್ದಾರೆ.

ಪಕ್ಷವು ಹಲವು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವ ಕಾರ್ಯ ಮಾಡುತ್ತಿದ್ದು, ಪುಣೆ ಲೋಕಸಭೆ ಕ್ಷೇತ್ರಕ್ಕೆ ಮಾಧುರಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಪುಣೆಗೆ ಮಾಧುರಿ ತಕ್ಕ ಅಭ್ಯರ್ಥಿ ಎಂದು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ.
51 ವರ್ಷದ ಮಾಧುರಿ ದೀಕ್ಷಿತ್‌ ಅವರು ಬಾಲಿವುಡ್‌ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದು, ಹಮ್‌ ಆಪ್ಕೆ ಹೈನ್‌ ಕೌನ್‌!, ದಿಲ್‌ ತೋ ಪಾಗಲ್‌ ಹೈ, ಸಾಜನ್‌ ಅಂಡ್‌ ದೇವದಾಸ್‌ ಸೇರಿ ಹಲವು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ.

3ಲಕ್ಷ ಅಂತರದ ಜಯ

ಇನ್ನು 2014ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 3 ಲಕ್ಷ ಮತಗಳ ಅಂತರದಲ್ಲಿ ಬಿಜೆಪಿಯ ಅನಿಲ್‌ ಶಿರೋಲೆ ಅವರು ಜಯಗಳಿಸಿದ್ದರು.

ಬಿಜೆಪಿಯ ಹಿರಿಯ ಕಾರ್ಯಕಾರಿಯೊಬ್ಬರು ಮಾತನಾಡಿ, ಮೊದಲ ಬಾರಿಗೆ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದ್ದರು. ಇದು ಪಕ್ಷಕ್ಕೆ ಭಾರಿ ಲಾಭ ತಂದುಕೊಟ್ಟಿತ್ತು. ಇದರಂತೆ ಹೊಸ ಮುಖಗಳಿಗೆ ಮಣೆ ಹಾಕುವ ಮೂಲಕ ಬಿಜೆಪಿಯು ಹೆಚ್ಚಿನ ಸೀಟುಗಳನ್ನು ಗೆಲ್ಲಲು ನಡೆಸಿರುವ ತಂತ್ರದ ಅಂಗವಾಗಿ ಮಾಧುರಿ ದೀಕ್ಷಿತ್‌ ಅವರನ್ನು ತರಲು ಯೋಚಿಸಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)