ಬೆಳಗಾವಿ : ಶಾಲೆ ರಜೆ ಹಿನ್ನೆಲೆಯಲ್ಲಿ ಸೋದರ ಮಾವನ ಮನೆಗೆ ಬಂದಿದ್ದ ಬಾಲಕಿ ವಿದ್ಯುತ್ ತಂತಿ ಸ್ಪರ್ಶಿಸಿದ ಧಾರುಣವಾಗಿ ಸಾವಿಗೀಡಾಗಿ ಮಸಣ ಸೇರಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ಸಂಭವಿಸಿದೆ.
ಮಾಚಿಘಡ ಮೂಲದ ಮಧುರಾ ಕೇಶವ ಮೋರೆ(13) ಮೃತ ಬಾಲಕಿ. ಮಚ್ಛೆಯಲ್ಲಿರುವ ಸೋದರಮಾವ ಪ್ರಸಾದ ಬೋಂಗಾಳೆ ಮನೆಗೆ ಬಂದಿದ್ದಳು. ಸೋಮವಾರ ಸಂಜೆ 6ರ ಸುಮಾರಿಗೆ ಮಹಡಿ ಮೇಲೆ ಒಂದೂವರೆ ವರ್ಷದ ಮಾವನ ಮಗನ ಕರೆದುಕೊಂಡು ಹೋಗಿ ಆಟವಾಡುತ್ತಲೇ ಕಿರಿದಾದ ಕಾಂಪೌಂಡ್ ಮೇಲೆ ಹತ್ತಿದ್ದಾಳೆ. ಆಗ ಮಹಡಿ ಮೇಲೆ ಹಾದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ಪಕ್ಕದ ಮನೆಯ ಮಹಡಿ ಮೇಲೆ ಬಿದ್ದಿದ್ದಾಳೆ. ಸ್ಫೋಟದಂತಹ ಶಬ್ದ ಕೇಳಿ ಓಡಿ ಬಂದ ಕುಟುಂಬಸ್ಥರು, ನೋಡಿದಾಗ ಒಂದೂವರೆ ವರ್ಷದ ಮಗು ಮಾತ್ರ ಕಾಣಿಸಿಕೊಂಡಿದೆ. ಮಧುರಾ ಎಲ್ಲಿದ್ದಾಳೆ ಎಂದು ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಪಕ್ಕದ ಮನೆಯ ಮಹಡಿ ಮೇಲೆ ಬಾಲಕಿ ಮೃತದೇಹ ಪತ್ತೆಯಾಗಿದ್ದು, ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.
ಹೆಸ್ಕಾಂ ನಿರ್ಲಕ್ಷೃಕ್ಕೆ ಆಕ್ರೋಶ
ಹಲವು ವರ್ಷಗಳ ಹಿಂದೆ ಪ್ರಸಾದ್ ಬೋಂಗಾಳೆ ಎಂಟು ವರ್ಷಗಳ ಹಿಂದೆ ಮಳಿಗೆಯ ಮೇಲೆ ಮನೆ ಕಟ್ಟಿದ್ದರು. ಈ ವೇಳೆ ವಿದ್ಯುತ್ ಕಂಬ ತೆರವಿಗೆ ಹೆಸ್ಕಾಂಗೆ ಹಲವು ಬಾರಿ ಮನವಿ ಮಾಡಿದ್ದರೂ ಹೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಬಾಲಕಿಯ ಸಾವಿಗೆ ಕಾರಣಾಗಿದ್ದಾರೆ ಎಂದು ಮೃತ ಬಾಲಕಿ ಸಂಬಂಧಿ ರಾಜಶ್ರೀ ಮತ್ತು ಸ್ಥಳೀಯ ನಿವಾಸಿ ಸಮೀರ ಸೇರಿದಂತೆ ಸಾರ್ವಜನಿಕರು ಆರೋಪಿಸಿದ್ದಾರೆ.
ಅವಘಡದ ಬಳಿಕ ಅಧಿಕಾರಿಗಳು ದೌಡು
ಇನ್ನು ಘಟನಾ ಸ್ಥಳಕ್ಕೆ ವಿದ್ಯುತ್ ಪರಿವೀಕ್ಷಕರಾದ ರೇಣುಕಾ, ಹೆಸ್ಕಾಂ ಸೆಕ್ಷನ್ ಅಧಿಕಾರಿ ಐ.ಡಿ.ಲೋಬೋ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಕುಟುಂಬಸ್ಥರು ವಿದ್ಯುತ್ ತಂತಿ ತೆರವಿಗೆ ಮನವಿ ಮಾಡಿದಾಗ ಎಸ್ಟಿಮೇಟ್ ಮಾಡಿ ಕೊಟ್ಟಿದ್ದೇವು ಎಂದು ಸಮರ್ಥಿಸಿಕೊಂಡಿದ್ದಾರೆ. ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಸಾವನ್ನಪ್ಪಿರುವ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ವಿದ್ಯುತ್ ಕಂಬ ತೆರವು ಮಾಡುವ ವಿಚಾರ ಹೆಸ್ಕಾಂಗೆ ಸಂಬಂಧಿಸಿದ್ದು. ತನಿಖೆ ಮಾಡಿ , ಪರಿಹಾರಾತ್ಮಕ ಕ್ರಮಕ್ಕೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.