ಮಧುಕರ ಶೆಟ್ಟಿ ಅವರ ಅಂತಿಮ ವಿಧಿ ವಿಧಾನ ನೆರವೇರಿಸಲಿದ್ದಾರೆ ಸೋದರ ಮುರಳಿ ಶೆಟ್ಟಿ

ಉಡುಪಿ: ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಶುಕ್ರವಾರವಷ್ಟೇ ಇಹಲೋಕ ತ್ಯಜಿಸಿದ ಯುವ ಪೊಲೀಸ್​ ಅಧಿಕಾರಿ ಮಧುಕರ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಶನಿವಾರ ರಾತ್ರಿಯೇ ಹುಟ್ಟೂರು ಯಡಾಡಿ ಮತ್ಯಾಡಿಗೆ ತರಲಾಗಿದ್ದು, ಪೊಲೀಸ್​ ಅಧಿಕಾರಿಗಳು, ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಗ್ರಾಮ ಮಧುಕರ ಶೆಟ್ಟಿ ಅವರ ಹುಟ್ಟೂರು. ಅವರ ಅಂತ್ಯಸಂಸ್ಕಾರವನ್ನು ಹುಟ್ಟೂರಿನಲ್ಲೇ ನೆರವೇರಿಸುವ ಉದ್ದೇಶದಿಂದ ಶನಿವಾರ ಸಂಜೆಯೇ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ತಂದು, ಅಲ್ಲಿಂದ ರಾತ್ರಿ 9 ಗಂಟೆ ಹೊತ್ತಿಗೆ ಯಡಾಡಿ ಮತ್ಯಾಡಿಗೆ ತರಲಾಯಿತು.

ಇಲ್ಲಿ ಉಡುಪಿ ಎಸ್.ಪಿ ಲಕ್ಷ್ಮಣ್ ನಿಂಬರ್ಗಿ ನೇತ್ರತ್ವದಲ್ಲಿ ಜಿಲ್ಲಾ ಪೋಲಿಸರಿಂದ ಅಂತಿಮ ಗೌರವ ಸಮರ್ಪಿಸಲಾಯಿತು.

ಮಧುಕರ ಶೆಟ್ಟಿ ಅವರು ಉಡುಪಿಯಲ್ಲಿ ಎ.ಎನ್.ಎಫ್ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.
ಇಂದು ಬೆಳಗ್ಗೆ 10 ಗಂಟೆಗೆ ಮಧುಕರ ಶೆಟ್ಟಿ ಅಂತ್ಯಸಂಸ್ಕಾರ ನಡೆಯಲಿದ್ದು, ಸಹೋದರ ಮುರುಳಿ ಶೆಟ್ಟಿ ಅವರು ಅಂತಿಮ ವಿಧಿ ವಿಧಾನ ನೆರವೇರಿಸುವರು.