ಖಡಕ್ ಅಧಿಕಾರಿಗೆ ಕಂಬನಿ ಮಿಡಿದ ಹುಟ್ಟೂರ ಜನ

ಮಧುಕರ ಶೆಟ್ಟಿ ಪಂಚಭೂತದಲ್ಲಿ ಲೀನ, ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ

ಕುಂದಾಪುರ: ಕುಟುಂಬಿಕರ ರೋದನ, ಹುಟ್ಟೂರ ಸಾವಿರಾರು ನಾಗರಿಕರು ಮಿಡಿದ ಕಂಬನಿಯೊಂದಿಗೆ ನಿಷ್ಠಾವಂತ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ಅಂತ್ಯಸಂಸ್ಕಾರ ಭಾನುವಾರ ಯಡಾಡಿ-ಮತ್ಯಾಡಿಯಲ್ಲಿ ನಡೆಯಿತು.

ಕುಂದಾಪುರ ತಾಲೂಕು ಯಡಾಡಿ ಮತ್ಯಾಡಿ ಗ್ರಾಮದ ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಗಳು ಸಮ್ಯಾ ಹಾಗೂ ಸಹೋದರ ಮುರಳೀಧರ ಶೆಟ್ಟಿ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಪಂಚಭೂತದಲ್ಲಿ ಮಧುಕರ ಶೆಟ್ಟಿ ಲೀನವಾದರು.

ಬೆಳಗ್ಗೆ 8 ಗಂಟೆಗೆ ಮಧುಕರ್ ಶೆಟ್ಟಿ ಪಾರ್ಥಿವ ಶರೀರವನ್ನು ಯಡಾಡಿ ಮತ್ಯಾಡಿಯ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಕುಟುಂಬಿಕರು, ಸಹೋದ್ಯೋಗಿಗಳು, ಅಪಾರ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ಮೂರು ಸುತ್ತು ಕುಶಾಲತೋಪು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವದೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ರಾಷ್ಟ್ರಧ್ವಜ ಹಾಗೂ ಪೊಲೀಸ್ ಸಮವಸ್ತ್ರವನ್ನು ಮೃತ ಮಧುಕರ್ ಶೆಟ್ಟಿ ಪತ್ನಿಗೆ ಹೈದರಾಬಾದ್ ಡಿಜಿಪಿ ಬರ್ಮಾನ್ ಹಸ್ತಾಂತರಿಸಿದರು.

ಖಾಕಿ ಕಣ್ಣೀರಿಗೆ ಕರಗಿತು ಹುಟ್ಟೂರು!
ಮಧುಕರ್ ಶೆಟ್ಟಿ ಸೇವೆ ಸಲ್ಲಿಸಿದ ಕಡೆಗಳಲ್ಲೆಲ್ಲ ಅಪಾರ ಅಭಿಮಾನಿ ಬಳಗ ಹೊಂದಿದ್ದರು. ಕಿರಿಯ ಪೊಲೀಸರಿಗೂ ನೆಚ್ಚಿನ ಅಧಿಕಾರಿಯಾಗಿದ್ದರು. ಅವರದೇ ಬ್ಯಾಚ್‌ನ ಎಲ್ಲ ಪೊಲೀಸ್ ಅಧಿಕಾರಿಗಳು ಹುಟ್ಟೂರಿಗೆ ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಮಧುಕರ ಶೆಟ್ಟಿ ಮನೆಯ ಮುಭಾಗ ಜಮಾಯಿಸಿದ್ದ ಪೊಲೀಸ್ ಅಧಿಕಾರಿಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಮಧುಕರ್ ಶೆಟ್ಟಿ ಪತ್ನಿ ಹೈದರಾಬಾದ್ ಮೂಲದ ಸುವರ್ಣಾ ಅಂತಿಮ ವಿಧಿವಿಧಾನಗಳು ಮುಗಿದ ಬಳಿಕ ಪತಿಗೆ ವಿದಾಯದ ಮುತ್ತು ನೀಡಿ ಅತ್ತರು. ಮೃತದೇಹಕ್ಕೆ ಹೊದಿಸಲಾದ ಧ್ವಜ ಹಾಗೂ ಸಮವಸ್ತ್ರ ಹಸ್ತಾಂತರಿಸಿದ ಬಳಿಕ ಹೈದರಾಬಾದ್ ಮಹಿಳಾ ಡಿಜಿಪಿ ತಬ್ಬಿಕೊಂಡು ಕ್ಷಣಕಾಲ ಭಾವುಕರಾದರು.

ಗಣ್ಯರು ಭಾಗಿ: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ಮಾಜಿ ಸಂಸದ ಜಪ್ರಕಾಶ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎ. ಗಫೂರ್, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ, ಐಜಿಪಿ ಸ್ಟೀಫನ್ ರವೀಂದ್ರ, ಮಧುಸೂದನ್ ರೆಡ್ಡಿ, ಐಜಿಪಿ ಜಿ.ಎಸ್. ರಾವ್, ಡಿಜಿಪಿ ಬರ್ಮಾನ್, ಡಿಐಜಿ ಅಮೃತಾ ದಾಸ್, ಎಡಿಜಿಪಿ ಪ್ರತಾಪ್ ರೆಡ್ಡಿ, ಐಜಿಪಿ ವಿಪುಲ್ ಕುಮಾರ್, ಎಸ್‌ಪಿ ಭೂಷಣ್ ಬೋರಸೆ, ಲಭೂರಾಮ್, ವಿನಾಯಕ ಪಾಟೀಲ್, ಡಿಎಸ್ಪಿ ಬಿ.ಪಿ.ದಿನೇಶ್ ಕುಮಾರ್ ಸೇರಿ ಅನೇಕ ಗಣ್ಯರು ಅಂತಿಮ ವಿಧಿವಿಧಾನದಲ್ಲಿ ಭಾಗವಹಿಸಿದ್ದರು.

ಉಪಕಾರ ಸ್ಮರಣೆ: ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕು ಆಲಂದೂರು ಗುಪ್ತಶೆಟ್ಟಿ ಹಳ್ಳಿಯಂದ ಐವತ್ತಕ್ಕೂ ಹೆಚ್ಚು ಮಹಿಳೆಯರು ಹಾಗೂ ಪುರುಷರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ತಮ್ಮ ಕಷ್ಟಕ್ಕೆ ಸ್ಪಂದಿಸಿದ ಮಧುಕರ ಶೆಟ್ಟಿ ಉಪಕಾರ ಸ್ಮರಣೆ ಮಾಡಿಕೊಂಡರು. ಮಧುಕರ ಶೆಟ್ಟಿ ಹಾಗೂ ಗುಪ್ತ ಸಾಹೇಬರು ಪರಭಾರೆಯಾದ ನಮ್ಮ ಭೂಮಿ ನಮಗೆ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಿದ್ದಾರೆ. ಗುಪ್ತಶೆಟ್ಟಿ ಹಳ್ಳಿಯಲ್ಲಿ ದಲಿತರೇ ಹೆಚ್ಚಿರುವ 30ರಷ್ಟು ಕುಂಟುಂಬ ಗುಡಿಸಲು ಕಟ್ಟಿ ಬದುಕುತ್ತಿವೆ ಎಂದರೆ ಅದಕ್ಕೆ ಈ ಅಧಿಕಾರಿಗಳೇ ಕಾರಣ. ಮಧುಕರ ಶೆಟ್ಟಿ ಅವರ ಅಕಾಲಿಕ ನಿಧನ ನಮ್ಮನ್ನು ತಬ್ಬಲಿಯನ್ನಾಗಿ ಮಾಡಿದೆ ಎಂದು ಗ್ರಾಮಸ್ಥರು ಕಂಬನಿ ಮಿಡಿದರು.

ಬಾರದ ಉಸ್ತುವಾರಿ ಸಚಿವೆ: ಮಧುಕರ ಶೆಟ್ಟಿ ಅಕಾಲಿಕ ಸಾವಿಗೆ ಇಡೀ ಜಿಲ್ಲೆ ಹಾಗೂ ರಾಜ್ಯವೇ ಕಂಬನಿ ಮಿಡಿದರೆ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಸಂತಾಪ ಸೂಚನೆಯ ಹೇಳಿಕೆಯೂ ನೀಡಿಲ್ಲ. ಮಧುಕರ ಶೆಟ್ಟಿ ಕಾಲೇಜು ದಿನಗಳ ಸಹಪಾಠಿ, ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಧುಕರ ಶೆಟ್ಟಿ ಮನೆಯವರೊಂದಿಗಿದ್ದರು. ಆದರೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ದಕ್ಷ ಅಧಿಕಾರಿ ಸಾವಿಗೆ ಸಂತಾಪವೂ ಸೂಚಿಸದೆ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ.