ಗಣ್ಯರಿಂದ ಮಧುಕರ ಶೆಟ್ಟಿ ಅಂತಿಮ ದರ್ಶನ

ಬೆಂಗಳೂರು: ನಗರದ ಯಲಹಂಕದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಶನಿವಾರ ರಾಜ್ಯದ ಗಣ್ಯರು ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅಂತಿಮ ದರ್ಶನ ಪಡೆದರು.

ಪಾರ್ಥಿವ ಶರೀರವನ್ನು ಶನಿವಾರ ಮಧ್ಯಾಹ್ನ ಹೈದರಾಬಾದ್​ನಿಂದ ಬೆಂಗಳೂರಿಗೆ ತಂದು ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಗೃಹ ಸಚಿವ ಎಂ.ಬಿ .ಪಾಟೀಲ್, ನಿವೃತ್ತ ಐಪಿಎಸ್ ಅಧಿಕಾರಿಗಳಾದ ಶಂಕರ್ ಬಿದರಿ, ಆರ್.ಕೆ. ದತ್ತಾ, ಮೇಯರ್ ಗಂಗಾಂಬಿಕೆ, ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಐಪಿಎಸ್ ಅಧಿಕಾರಿಗಳು ಸೇರಿ ನೂರಾರು ಗಣ್ಯರು ಅಂತಿಮ ದರ್ಶನ ಪಡೆದರು.

ಶುಕ್ರವಾರ ರಾತ್ರಿ ಹೈದ್ರಾಬಾದ್​ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಮಧುಕರ ಶೆಟ್ಟಿ ನಿಧನರಾದರು. ಶನಿವಾರ ಅವರ ಪಾರ್ಥೀವ ಶರೀರವನ್ನು ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ಆಂಬುಲೆನ್ಸ್ ಮೂಲಕ ಸಾರ್ವಜನಿಕ ದರ್ಶನಕ್ಕಾಗಿ ಮತ್ತು ಅಂತಿಮ ಗೌರವರಕ್ಷೆಗಾಗಿ ಮಧ್ಯಾಹ್ನ 1.35ರಲ್ಲಿ ಯಲಹಂಕದ ಪೊಲೀಸ್ ತರಬೇತಿ ಕೇಂದ್ರ(ಎಪಿಟಿಎಸ್)ಕ್ಕೆ ತರಲಾಯಿತು. ಅವರ ಪತ್ನಿ, ಮಗಳು ಮತ್ತು ನೂರಾರು ಮಂದಿ ಸಂಬಂಧಿಕರು ನೆರೆದಿದ್ದರು. ನಂತರ ಸಂಜೆ 6.20ಕ್ಕೆ ಮಧುಕರ ಶೆಟ್ಟಿ ಪಾರ್ಥೀವ ಶರೀರವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು ಅಲ್ಲಿಂದ ವಿಮಾನದ ಮೂಲಕ ಮಂಗಳೂರಿಗೆ ಕೊಂಡೊಯ್ಯಲಾಯಿತು.

ಸಾವಿನ ಸಂಶಯವಿದ್ದರೆ ತನಿಖೆ

ಬೆಂಗಳೂರು: ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಸಾವಿನ ಬಗ್ಗೆ ತನಿಖೆಯಾಗಬೇಕೆಂಬ ಜಲಸಂಪ ನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಎಂ.ಬಿ.ಪಾಟೀಲ್, ಸಂಶಯವಿದ್ದರೆ ತನಿಖೆಗೆ ಆದೇಶಿಸುವುದಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಪಾಟೀಲ್, ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರವಷ್ಟೇ ತನಿಖೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಹೈದರಾಬಾದ್ ಆಸ್ಪತ್ರೆಯಲ್ಲಿ ಮಧುಕರ ಶೆಟ್ಟಿ ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಯಿಂದಲೂ ವರದಿ ತರಿಸಿಕೊಳ್ಳಲಾಗುವುದು ಎಂದು ಹೇಳಿದರು.

ಸಚಿವ ಡಿ.ಕೆ. ಶಿವಕುಮಾರ್ ಅವರು, ಮಧುಕರ ಶೆಟ್ಟಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು.

ಬಜ್ಪೆ ವಿಮಾನ ನಿಲ್ದಾಣದಲ್ಲಿ ಶ್ರದ್ಧಾಂಜಲಿ

ಕುಂದಾಪುರ: ಅನಾರೋಗ್ಯದಿಂದ ಶುಕ್ರವಾರ ನಿಧನರಾದ ಐಪಿಎಸ್ ಅಧಿಕಾರಿ ಡಾ.ಕೆ. ಮಧುಕರ ಶೆಟ್ಟಿ ಅವರ ಅಂತ್ಯಸಂಸ್ಕಾರ ಹುಟ್ಟೂರಾದ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿಯಲ್ಲಿ ಭಾನುವಾರ ನಡೆಯಲಿದೆ.

ಶನಿವಾರ ರಾತ್ರಿ10 ಕ್ಕೆ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಆಗಮಿಸಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗಣ್ಯರು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಬಳಿಕ ರಾತ್ರಿ 11 ಗಂಟೆಗೆ ಯಡಾಡಿ ಮತ್ಯಾಡಿಯ ನಿವಾಸಕ್ಕೆ ಪಾರ್ಥಿವ ಶರೀರ ತರಲಾಗಿದ್ದು, ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10.30ಕ್ಕೆ ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ, ತಾಯಿ ಪ್ರಫುಲ್ಲಾ ಸಮಾಧಿ ಬಳಿ ಅಂತ್ಯಸಂಸ್ಕಾರ ನಡೆಯಲಿದೆ. ಸ್ಥಳದಲ್ಲಿ ಬ್ರಹ್ಮಾವರ ಹಾಗೂ ಕೋಟ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಅಂತಿಮ ವಿಧಿವಿಧಾನ ನೆರವೇರಿಸಲು ಸಕಲ ಸಿದ್ಧತೆ ಮಾಡಲಾಗಿದೆ.

ಪೊಲೀಸ್ ತರಬೇತಿ ಸಂಸ್ಥೆಗೆ ಹೆಸರಿಡಿ

ಕುಂದಾಪುರ: ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿ, ಚನ್ನಪಟ್ಟಣದಲ್ಲಿರುವ ಪೊಲೀಸ್ ತರಬೇತಿ ಶಾಲೆ, ಯಲಹಂಕದಲ್ಲಿರುವ ಸಶಸ್ತ್ರ ಪೊಲೀಸ್ ತರಬೇತಿ ಶಾಲೆ – ಇವುಗಳಲ್ಲಿ ಯಾವುದಾದರೊಂದು ಸಂಸ್ಥೆಗೆ ಮಧುಕರ ಶೆಟ್ಟಿ ಅವರ ಹೆಸರಿಡುವ ಮೂಲಕ ಗೌರವಿಸಬೇಕೆಂದು ಬೈಂದೂರು-ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರತಿವರ್ಷ ಉತ್ಕೃಷ್ಟ ಸೇವೆಗಾಗಿ ಪೊಲೀಸ್ ಅಧಿಕಾರಿಗಳಿಗೆ ನೀಡುವ ಮುಖ್ಯಮಂತ್ರಿ ಪದಕವನ್ನು ಮಧುಕರ ಶೆಟ್ಟಿ ಅವರ ಹೆಸರಿನಲ್ಲಿ ನೀಡುವ ಮೂಲಕ ಅವರ ಆದರ್ಶಗಳನ್ನು ಜೀವಂತವಾಗಿಡಬಹುದು. ಯುವ ಪೊಲೀಸ್ ಅಧಿಕಾರಿಗಳಿಗೆ ಮೇಲ್ಪಂಕ್ತಿಯಾಗುವ ನಿಟ್ಟಿನಲ್ಲಿಯೂ ಇದು ಸಹಕಾರಿ. ಮಧುಕರ ಶೆಟ್ಟಿ ಅವರನ್ನು ಕಳೆದುಕೊಂಡಿರುವುದು ಪೊಲೀಸ್ ಇಲಾಖೆ, ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ತಿಳಿಸಿದ್ದಾರೆ.

ರಾಜ್ಯಕ್ಕೆ ಮಾತ್ರವಲ್ಲ ಇಡೀ ರಾಷ್ಟ್ರ ಓರ್ವ ಪ್ರತಿಭಾವಂತ ದಕ್ಷ ಅಧಿಕಾರಿಯನ್ನು ಕಳೆದುಕೊಂಡಿದೆ. ಅವರು ಜೀವನದುದ್ದಕ್ಕೂ ಜನರ ಜತೆ ಬೆರೆತು ಸಮಸ್ಯೆಗಳ ಪರಿಹಾರ ಮಾಡಬೇಕು ಎಂದಿದ್ದರು. ಲೋಕಾಯುಕ್ತದ ಇತಿಹಾಸದಲ್ಲಿ ಅವರ ಸೇವೆ ಸ್ಮರಿಸುವಂತದ್ದು. ಮುಂದಿನ ಎಲ್ಲ ಯುವ ಅಧಿಕಾರಿಗಳಿಗೆ ಆದರ್ಶ ವ್ಯಕ್ತಿ.

| ಎಂ.ಬಿ. ಪಾಟೀಲ್ ಗೃಹ ಸಚಿವ

ನನಗೆ ಮಧುಕರ್ ಸಾವು ಆಶ್ಚರ್ಯ ತಂದಿದೆ. ನನ್ನ ಜತೆ 2 ವರ್ಷ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

| ಆರ್.ಕೆ. ದತ್ತಾ ನಿವೃತ್ತ ಐಪಿಎಸ್ ಅಧಿಕಾರಿ

ಮಧುಕರ್ ಉತ್ತಮ ಅಧಿಕಾರಿ. ಅವರ ನಿಧನ ಕರ್ನಾಟಕ ಪೊಲೀಸರಿಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ.

| ನೀಲಮಣಿ ರಾಜು ಡಿಜಿ ಐಜಿಪಿ

ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಹೊಸ ಐಪಿಎಸ್ ಅಧಿಕಾರಿಗಳಿಗೆ ತರಬೇತಿ ನೀಡಿದ್ದರು. ಬಡವರ ಪರ ಕಾಳಜಿ ಹೊಂದಿದ್ದರು.

| ಪ್ರವೀಣ್ ಸೂದ್ ಐಪಿಎಸ್ ಅಧಿಕಾರಿ

ನಾನು ಲೋಕಾಯುಕ್ತನಾಗುವ ಮೊದಲು ಲೋಕಾಯುಕ್ತ ಎಸ್​ಪಿ ಆಗಿ ಎಲ್ಲರ ಗೌರವ ಗಳಿಸಿದ ದಕ್ಷ ಹಾಗೂ ನಿಷ್ಠಾವಂತ ಅಧಿಕಾರಿ ಮಧುಕರ ಶೆಟ್ಟಿ. ಅಂತವರಿಂದ ಮಾತ್ರ ರಾಜ್ಯದ ಆಡಳಿತದಲ್ಲಿ ಪಾರದರ್ಶಕತೆ ತರಲು ಸಾಧ್ಯ.

| ನ್ಯಾ.ಪಿ. ವಿಶ್ವನಾಥ ಶೆಟ್ಟಿ ಲೋಕಾಯುಕ್ತ

ಮಧುಕರ ಶೆಟ್ಟಿ ನಿಷ್ಠಾವಂತ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಅವರ ನಿಧನದಿಂದ ಕರ್ನಾಟಕಕ್ಕೆ ಮಾತ್ರ ನಷ್ಟವಲ್ಲ, ದೇಶದ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟ. ಲೋಕಾಯುಕ್ತದಲ್ಲಿರುವಾಗ ಭ್ರಷ್ಟ ಮಂತ್ರಿ, ರಾಜಕಾರಣಿಗಳನ್ನು ಅವರು ಬಂಧಿಸಿದ್ದರು. ಅಂತಹ ಅಧಿಕಾರಿಗಳನ್ನು ಉಳಿಸಿಕೊಳ್ಳಲು ನಮ್ಮ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ನಾನ್ ಎಕ್ಸ್​ಕ್ಯುಟಿವ್ ಆಗಿ ತುಳಿಯುವ ಪ್ರಯತ್ನ ಮಾಡಲಾಯಿತು. ಇಂಥ ವ್ಯವಸ್ಥೆಗೆ ಮಧುಕರ ಶೆಟ್ಟಿ ಬಲಿಯಾಗಿದ್ದು ಖೇದಕರ. ಅವರ ಮಾದರಿಯನ್ನು ಪೊಲೀಸರು ಅಳವಡಿಸಿಕೊಳ್ಳಬೇಕು.

| ನ್ಯಾ. ಸಂತೋಷ್ ಹೆಗ್ಡೆ ಮಾಜಿ ಲೋಕಾಯುಕ್ತ