ಅಕ್ರಂಪಾಷ ತಲಕಾಡು
ಇಲ್ಲಿನ ಪುರಾತನ ಮಾಧವಮಂತ್ರಿ ಅಣೆಕಟ್ಟೆಗೆ ಪರ್ಯಾಯವಾಗಿ ನೂತನ ಅಣೆಕಟ್ಟೆ ನಿರ್ಮಾಣವಾಗುತ್ತಿದ್ದು, ಇದರ ಅಡಿಪಾಯ ಕಾಮಗಾರಿ ಭರದಿಂದ ಸಾಗಿದೆ.
ಹಳೆಯ ಅಣೆಕಟ್ಟೆಯ ಕೆಳಭಾಗದಲ್ಲಿ 527 ಮೀಟರ್ ಉದ್ದದ ನೂತನ ಅಣೆಕಟ್ಟೆ ನಿರ್ಮಿಸಲಾಗುತ್ತಿದ್ದು, ಸದ್ಯ 77 ಮೀಟರ್ ಉದ್ದದ ಕಟ್ಟೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ತಲಾ 25 ಮೀ. ಉದ್ದಕ್ಕೆ ತಲಾ ಒಂದು ಬ್ಲಾಕ್‌ನಂತೆ ವಿಂಗಡಿಸಿಕೊಂಡು ಅಡಿಪಾಯ ಹಂತದ ಕಾಂಕ್ರೀಟ್ ಕಾಮಗಾರಿ ಬಿರುಸಾಗಿ ಸಾಗಿದೆ. ಈಗಾಗಲೇ 1ರಿಂದ 9ನೇ ಬ್ಲಾಕಿನವರೆಗೆ ಅಣೆಕಟ್ಟೆಯ ಅಡಿಪಾಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ ಪ್ರಾರಂಭಿಕ ಎರಡು ಬ್ಲಾಕ್‌ಗಳ ಕಾಮಗಾರಿ ಪೂರ್ಣಗೊಂಡಿದೆ. ಮೂರನೆಯ ಬ್ಲಾಕ್ ಕಾಮಗಾರಿ ನಡೆಯುತ್ತಿದೆ.
ಸ್ಥಗಿತವಾಗಿದ್ದ ಕಾಮಗಾರಿ: 2019ರ ಮಳೆಗಾಲ ಪೂರ್ವದಲ್ಲಿ ಆರಂಭಗೊಂಡ ನೂತನ ಅಣೆಕಟ್ಟೆ ಕಾಮಗಾರಿ ಬಳಿಕ ಕಾವೇರಿ ಹಾಗೂ ಕಪಿಲಾ ನದಿ ನೀರಿನ ಪ್ರವಾಹದಿಂದ ಸ್ಥಗಿತಗೊಂಡಿತ್ತು. ಇದೀಗ ಅಣೆಕಟ್ಟೆಗೆ ಹರಿದು ಬರುವ ನದಿ ನೀರು ಕಡಿಮೆಯಾಗಿರುವ ಹಿನ್ನೆಲೆ ಕಾಮಗಾರಿ ಮತ್ತೆ ಶುರುವಾಗಿದೆ.
ಕಾಮಗಾರಿಯು ಈ ವರ್ಷದ ಮಳೆಗಾಲಕ್ಕೆ ಮುನ್ನವೇ ಅಂದರೆ ಜೂನ್ ತಿಂಗಳೊಳಗೆ ಮುಕ್ತಾಯಗೊಳಿಸುವ ಗುರಿಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ಇರಿಸಿಕೊಂಡಿದ್ದಾರೆ. ಈ ಕಾಮಗಾರಿಯಿಂದ ಇಲ್ಲಿನ ಮಾಧವಮಂತ್ರಿ ನಾಲಾ ಅಚ್ಚುಕಟ್ಟು ರೈತರ ಬೆಳೆಗಳಿಗೆ ನೀರೊದಗಿಸಲು ಯಾವುದೇ ತೊಂದರೆ ಇಲ್ಲ ಎಂದು ಬನ್ನೂರು ನೀರಾವರಿ ವಿಭಾಗದ ಅಧಿಕಾರಿಗಳು ‘ವಿಜಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
170 ಕ್ಯೂಸೆಕ್ ನೀರು ಸಂಗ್ರಹ: ಕ್ರಿ.ಶ.1140 ವಿಜಯನಗರ ಅರಸರ ಕಾಲದಲ್ಲಿ ಬೃಹತ್ ಬಂಡೆ ಕಲ್ಲುಗಳಿಂದ ಇಲ್ಲಿ ನಿರ್ಮಾಣವಾಗಿರುವ ಮಾಧವಮಂತ್ರಿ ಅಣೆಕಟ್ಟೆ 170 ಕ್ಯೂಸೆಕ್ ನೀರು ಸಂಗ್ರಹ ಸಾಮರ್ಥ್ಯದ್ದಾಗಿದೆ. ನೂತನ ಅಣೆಕಟ್ಟೆಯಿಂದ ಪುರಾತನ ಅಣೆಕಟ್ಟೆ ಹಿನ್ನೀರಿನಲ್ಲಿ ಮುಳುಗಡೆಯಾಗಲಿದೆ.
ಹಳೇ ಅಣೆಕಟ್ಟೆ ಶಿಥಿಲಗೊಂಡು ಪದೇ ಪದೆ ಅಲ್ಲಲ್ಲಿ ಕುಸಿಯುತ್ತಿದ್ದರಿಂದ ಅಣೆಕಟ್ಟೆ ವ್ಯಾಪ್ತಿಯ 5828 ಎಕರೆ ನಾಲಾ ಅಚ್ಚುಕಟ್ಟು ರೈತರ ಬೆಳೆಗಳಿಗೆ ನೀರಿನ ಸಮಸ್ಯೆಯಾಗಿತ್ತು. ಹೀಗಾಗಿ ಸರ್ಕಾರ 2017ರ ಮಾರ್ಚ್ 2ರಂದು 62.21 ಕೋಟಿ ರೂ. ವೆಚ್ಚದಲ್ಲಿ ನೂತನ ಅಣೆಕಟ್ಟೆ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು.
ಅಣೆಕಟ್ಟೆಯ ತಳಭಾಗದಿಂದ ಅಗಲವಾಗಿ ಗೋಲಾಕಾರದಲ್ಲಿ ಎತ್ತರಕ್ಕೆ ಸಾಗಿ ಮೇಲ್ಭಾಗದಲ್ಲಿ 1.5.ಮೀಟರ್ ಅಗಲಕ್ಕೆ ಕಟ್ಟೆಯ ಕಟ್ಟಡ ಅಂತ್ಯವಾಗುತ್ತದೆ. ಶಿವನಸಮುದ್ರಕ್ಕೆ ನದಿಯಿಂದ ಹೆಚ್ಚುವರಿ ನೀರು ಬಿಡಲು ಹಿಂದಿನಿಂದ ಬಳಸುತ್ತಿದ್ದ ಅಣೆಕಟ್ಟೆ ಮಧ್ಯದಲ್ಲಿದ್ದ ಮುಖ್ಯ ಗೇಟ್ ಅನ್ನು, ಪ್ರಸ್ತುತ ಅಣೆಕಟ್ಟೆಗಿಳಿಯುವ ಪ್ರಾರಂಭದ ಮೆಟ್ಟಿಲು ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ.
ಮತ್ತೊಂದು ಪ್ರವಾಸಿ ಸ್ಥಳ: ತಲಕಾಡು ಪ್ರವೇಶದ್ವಾರದ ಬಳಿಯ ಮಾಧವಮಂತ್ರಿ ಅಣೆಕಟ್ಟೆ ಕೆಳಭಾಗದ ಹೆಮ್ಮಿಗೆ ಮುಖ್ಯ ಸೇತುವೆ ನದಿಯಲ್ಲಿ ಈ ಬಾರಿಯ ಪ್ರವಾಹ ಅಪಾರ ಮರಳು ರಾಶಿಯನ್ನು ತಂದು ಬಿಟ್ಟಿದೆ. ಸೇತುವೆ ಕೆಳಭಾಗದಲ್ಲಿ ಹಳ್ಳ ಕೊರಕಲಾಗಿ ನದಿ ನೀರು ಹರಿಯುತ್ತಿದ್ದ ಸ್ಥಳಗಳು ಮರಳು ರಾಶಿಯಿಂದ ಮುಚ್ಚಿಹೋಗಿದೆ.
ಸೇತುವೆ ಮೇಲೆ ಸಂಚರಿಸುವ ಪ್ರಯಾಣಿಕರಿಗೆ ಇಲ್ಲಿ ವಿಶಾಲವಾಗಿ ಹರಡಿರುವ ಮರಳು ಸೌಂದರ್ಯ ಕಣ್ಮನ ಸೆಳೆಯುತ್ತಿದೆ.
ನದಿ ಭಾಗದ ಸೇತುವೆ ಅಥವಾ ಅಣೆಕಟ್ಟೆಯ ಬಳಿ ಮರಳು ತೆಗೆಯಲು ಸರ್ಕಾರ ಅನುಮತಿ ನೀಡುವುದಿಲ್ಲ. ಹಾಗಾಗಿ ಹಳೇತಲಕಾಡಿನ ಪ್ರಸಿದ್ಧ ನದಿ ತೀರ ನಿಸರ್ಗಧಾಮದಂತೆ ಎಲ್ಲರನ್ನೂ ಸೆಳೆಯುತ್ತಿದ್ದು, ಸೇತುವೆ ಕೆಳಭಾಗದ ನದಿಯ ಕಡೆಗೆ ತೆರಳಲು ಪ್ರವಾಸಿಗರಿಗೆ ಸರ್ಕಾರ ಸೂಕ್ತ ಅನುಕೂಲ ಕಲ್ಪಿಸಿದರೆ ಪ್ರವಾಸಿಗರಿಗೆ ಮತ್ತೊಂದು ಪ್ರವಾಸಿ ತಾಣವನ್ನು ಕೊಡುಗೆ ನೀಡಿದಂತಾಗುತ್ತದೆ.
ನೂತನ ಅಣೆಕಟ್ಟೆ ನಿರ್ಮಾಣವಾದ ಬಳಿಕ ಎರಡನೇ ಹಂತದ ಯೋಜನೆಯಲ್ಲಿ ಅಣೆಕಟ್ಟೆ ಬಳಿಗೆ ತೆರಳುವ ರಸ್ತೆ ಅಭಿವೃದ್ಧಿ ಸೇರಿದಂತೆ ಪ್ರವಾಸಿಗರಿಗೆ ಆಕರ್ಷಣೀಯ ಪಾರ್ಕ್ ತಾಣವನ್ನಾಗಿ ಪರಿವರ್ತಿಸಲಾಗುತ್ತದೆ.
ನಾಗಯ್ಯ, ಇಇ, ಬನ್ನೂರು ನಾಲಾ ವಿಭಾಗ
ಮಾಧವಮಂತ್ರಿ ಅಣೆಕಟ್ಟೆ ನಿರ್ಮಾಣಕ್ಕೆ ಅಡಿಪಾಯ ತೆಗೆಯುವ ಹಂತದಲ್ಲಿ ದೊರೆತ ಮರಳನ್ನು, ಸರ್ಕಾರದ ನಿಗದಿತ ರಾಯಲ್ಟಿ ದರದಂತೆ ನೂತನ ಅಣೆಕಟ್ಟೆಯ ಕಟ್ಟಡ ಕಾಮಗಾರಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ.
ಶಿವರಾಜು ಎಇಇ, ಬನ್ನೂರು ನಾಲಾ ವಿಭಾಗ