ತಾವರೆ ಎಲೆಯಲ್ಲಿ ಪ್ರಸಾದ ಸವಿದ ಭಕ್ತರು

ಮದ್ದೂರು: ತಾಲೂಕಿನ ಆಬಲವಾಡಿ ಗ್ರಾಮದ ತೋಪಿನ ಶ್ರೀ ತಿಮ್ಮಪ್ಪ (ವೆಂಕಟರಮಣ ಸ್ವಾಮಿ) ದೇವಾಲಯ ಆವರಣದಲ್ಲಿ ಭಾನುವಾರ ಹರಿಸೇವೆ ಅಂಗವಾಗಿ ಸಂಭ್ರಮ ಮನೆ ಮಾಡಿತ್ತು.

ಸಾಮಾನ್ಯವಾಗಿ ದೇವರ ಹರಿಸೇವೆಯಲ್ಲಿ ಭಕ್ತರಿಗೆ ಊಟವನ್ನು ಇಸ್ತ್ರಿ ಎಲೆಯಲ್ಲಿ ನೀಡುವುದು ರೂಢಿ. ಆದರೆ, ಶ್ರೀತೋಪಿನ ತಿಮ್ಮಪ್ಪಸ್ವಾಮಿಗೆ ಹರಿಸೇವೆಯಲ್ಲಿ ಸಹಸ್ರಾರು ಭಕ್ತರಿಗೆ ತಾವರೆ ಎಲೆಯಲ್ಲಿ ಊಟ ಬಡಿಸುವುದು ವಿಶೇಷ.

ಹರಿಸೇವೆಗೆ ಜಿಲ್ಲೆ ಹಾಗೂ ರಾಜ್ಯ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತರು ಹಾಗೂ ಗಣ್ಯರು ದೇವರ ದರ್ಶನ ಪಡೆದು, ತಾವರೆ ಎಲೆಯಲ್ಲಿ ಪ್ರಸಾದ ಸವಿದರು. ದೇವರಿಗೆ ವಿಶೇಷ ಅಲಂಕಾರ ಮಾಡಿ, ಬೆಳಗ್ಗೆಯಿಂದ ಸಂಜೆವರೆಗೆ ವಿಶೇಷ ಪೂಜಾ ಕೈಂಕರ್ಯ ನಡೆಸಲಾಯಿತು.

ಇದಕ್ಕೂ ಮೊದಲು ಶನಿವಾರ ಮಧ್ಯಾಹ್ನ 1 ಗಂಟೆಗೆ ಮೀಸಲು ನೀರು ತರಲಾಯಿತು. 3 ಗಂಟೆಗೆ ತಲೆಮುಡಿ, ಸಂಜೆ 6 ಗಂಟೆಗೆ ಮಹಾಮಂಗಳಾರತಿ, ರಾತ್ರಿ 7 ಗಂಟೆಗೆ ಬಂಡಿ ಮೆರವಣಿಗೆ, ರಾತ್ರಿ 12ಕ್ಕೆ ಬಾಯಿ ಬೀಗ, 1 ಗಂಟೆಗೆ ಸೋಮನ ಕುಣಿತ, ಜವಳಿ ಕುಣಿತ, ಮಂಗಳವಾದ್ಯ, ಮುದ್ದಿನ ತಮಾಷೆ ಮತ್ತು ತಮಟೆಯೊಂದಿಗೆ ಶ್ರೀತೋಪಿನ ತಿಮ್ಮಪ್ಪ ದೇವರ ಉತ್ಸವ ಮೂರ್ತಿ, ಶ್ರೀ ಲಕ್ಷ್ಮೀ, ಶ್ರೀ ಬಂಕದ ಕಟ್ಟಮ್ಮ, ಶ್ರೀಮದ್ದೇನಟ್ಟಮ್ಮ ದೇವರುಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆಯೋಜಿಸಲಾಗಿತ್ತು.

 

Leave a Reply

Your email address will not be published. Required fields are marked *